Namma Metro: ಹೆಚ್ಚಿದ ಪ್ರಯಾಣಿಕರ ದಟ್ಟಣೆ ಆರ್.ವಿ.ರಸ್ತೆ ನಿಲ್ದಾಣಕ್ಕೆ ಬ್ಯಾರಿಕೇಡ್

0
78

ಬೆಂಗಳೂರು: Namma Metro ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಆದ್ದರಿಂದ ನಮ್ಮ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ ಉಂಟಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಸ್ಟೀಲ್‌ ಬ್ಯಾರಿಕೇಡ್‌ಗಳನ್ನು ಬಿಎಂಆರ್‌ಸಿಎಲ್ ಅಳವಡಿಕೆ ಮಾಡಿದೆ.

ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಆರ್.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟಿಸಿದ್ದರು. ಈ ಮಾರ್ಗದಲ್ಲಿ 16 ನಿಲ್ದಾಣಗಳಿವೆ. 19.15 ಕಿ.ಮೀ. ಮಾರ್ಗ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸಲಿದ್ದು, ಟೆಕ್ಕಿಗಳಿಗೆ ಅನುಕೂಲವಾಗಿದೆ.

ಇದೀಗ ಹಳದಿ ಮಾರ್ಗ ಮೆಟ್ರೋ ಆರಂಭವಾಗಿದ್ದರಿಂದ ದಿನದಿಂದ ದಿನಕ್ಕೆ ಜನದಟ್ಟಣೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಸ್ಟೀಲ್‌ ಬ್ಯಾರಿಕೇಡ್‌ಗಳನ್ನು ಬಿಎಂಆರ್‌ಸಿಎಲ್‌ ಅಳವಡಿಕೆ ಮಾಡಿದೆ.

ಆರ್.ವಿ.ರಸ್ತೆ ಇಂಟರ್‌ಚೇಂಜ್ ನಿಲ್ದಾಣವಾಗಿದ್ದು ಹಳದಿ ಮಾರ್ಗ ಮತ್ತು ಹಸಿರು ಮಾರ್ಗ ಇಲ್ಲಿ ಸಂಪರ್ಕಿಸುತ್ತವೆ. ಆದ್ದರಿಂದ ನಿಲ್ದಾಣದಲ್ಲಿ ಪ್ರಯಾಣಿಕರು ಹಳಿಯ ಬಳಿ ಹೋಗದಂತೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ.

ಈ ಮಾದರಿ ಬ್ಯಾಡಿಕೇಡ್‌ಗಳನ್ನು ಈಗಾಗಲೇ ಮೆಜೆಸ್ಟಿಕ್ ನಿಲ್ದಾಣದಲ್ಲಿ ಅಳವಡಿಕೆ ಮಾಡಲಾಗಿದೆ. ಈಗ ಆರ್‌.ವಿ.ರಸ್ತೆಯಲ್ಲಿಯೂ ಪ್ರಯಾಣಿಕರ ದಟ್ಟಣೆ ಹಿನ್ನಲೆಯಲ್ಲಿ ಬ್ಯಾರಿಕೇಡ್ ಹಾಕಿದ್ದು, ಇದೇ ರೀತಿ ಹಳದಿ ಮಾರ್ಗದ ನಿಲ್ದಾಣಗಳಲ್ಲಿ ಎಲ್ಲೆಲ್ಲಿ ಅಗತ್ಯವಿದೆ ಎಂದು ನೋಡಿಕೊಂಡು ಸ್ಟೀಲ್ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತೇಜಸ್ವಿಸೂರ್ಯ ಪೋಸ್ಟ್: ಮೆಟ್ರೋ ನಿಲ್ದಾಣದಲ್ಲಿ ಬ್ಯಾರಿಕೇಡ್‌ ಕುರಿತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪೋಸ್ಟ್ ಹಾಕಿದ್ದಾರೆ.

ಪ್ರಯಾಣಿಕರ ಸುರಕ್ಷತೆಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಆರ್‌.ವಿ. ರಸ್ತೆ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದೆ.

ಆಗಸ್ಟ್ 11ರಂದು ಹಳದಿ ಮಾರ್ಗ ಸಾರ್ವಜನಿಕರಿಗೆ ಮುಕ್ತವಾಯಿತು. ಆರ್.‌ವಿ.ರಸ್ತೆ ನಿಲ್ದಾಣದಲ್ಲಿ ಸಂಭವನೀಯ ಜನದಟ್ಟಣೆಯ ಬಗ್ಗೆ ಬಿಎಂಆರ್‌ಸಿಎಲ್ ಗಮನ ಸೆಳೆಯಲಾಗಿತ್ತು ಮತ್ತು ಅಪಘಾತಗಳನ್ನು ತಡೆಗಟ್ಟಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿತ್ತು.

ಬಿಎಂಆರ್‌ಸಿಎಲ್‌ನ ಈ ಕ್ರಮವನ್ನು ಸ್ವಾಗತಿಸುವುದರ ಜೊತೆಗೆ, ಪ್ರಯಾಣಿಕರ ಸುರಕ್ಷತೆಯನ್ನು ಸುಧಾರಿಸಲು ಎಲ್ಲಾ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಬಾಗಿಲು ಅಳವಡಿಕೆ ಮಾಡಲು ಅಧಿಕಾರಿಗಳನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ದೆಹಲಿ ಮೆಟ್ರೋದಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ಅಳವಡಿಕೆ ಮಾಡಲಾಗಿದೆ. ರೈಲು ಬಂದು ನಿಂತಾಗ ಈ ಬಾಗಿಲುಗಳು ತೆರೆದುಕೊಳ್ಳುತ್ತದೆ. ಆದರೆ ಬೆಂಗಳುರು ಮೆಟ್ರೋದಲ್ಲಿ ನಿಲ್ದಾಣದಲ್ಲಿ ಹಳಿಗಳ ಸಮೀಪ ಹಳದಿ ಗೆರೆಯನ್ನು ಹಾಕಿದೆ. ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಿದೆ. ಆದರೆ ಇಂಟರ್‌ ಚೇಂಜ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಅವರನ್ನು ನಿಯಂತ್ರಿಸುವುದು ಭದ್ರತಾ ಸಿಬ್ಬಂದಿಗಳಿಗೆ ಸಹ ಸವಾಲಿನ ಕೆಲಸವಾಗಿದೆ.

ಹಳದಿ ಮಾರ್ಗದಲ್ಲಿ ಸದ್ಯ 3 ಮೆಟ್ರೋ ರೈಲುಗಳು ಮಾತ್ರ ಸಂಚಾರವನ್ನು ನಡೆಸುತ್ತಿವೆ. ರೈಲುಗಳ ಸಂಖ್ಯೆ ಹೆಚ್ಚಾದರೆ ಇನ್ನೂ ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ. ಬಿಎಂಆರ್‌ಸಿಎಲ್ ವೇಳಾಪಟ್ಟಿ ಪ್ರಕಾರ ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಸೋಮವಾರದಿಂದ ಶನಿವಾರದ ತನಕ ಬೆಳಗ್ಗೆ 6.30ಕ್ಕೆ ರೈಲು ಸಂಚಾರ ಆರಂಭವಾಗಲಿದೆ. ಭಾನುವಾರ ಬೆಳಗ್ಗೆ 7ಕ್ಕೆ ರೈಲು ಸಂಚಾರ ಪ್ರಾರಂಭವಾಗುತ್ತದೆ.

ಈ ಮಾರ್ಗದಲ್ಲಿ ಒಟ್ಟು ಪ್ರಯಾಣದ ಸಮಯ ಒಂದು ದಿಕ್ಕಿಗೆ ಸುಮಾರು 35 ನಿಮಿಷ. ಬೆಳಗ್ಗೆ 6.30ರಿಂದ ಡೆಲ್ಟಾ ಎಲೆಕ್ಟ್ರಾನಿಕ್ಸ್‌ ಬೊಮ್ಮಸಂದ್ರದಿಂದ ಹಾಗೂ ಬೆಳಗ್ಗೆ 7.10ರಿಂದ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಿಂದ ರೈಲು ಸಂಚಾರ ನಡೆಸುತ್ತದೆ. ಈ ಮಾರ್ಗದ 4ನೇ ರೈಲು ನಗರಕ್ಕೆ ಆಗಮಿಸಿದ್ದು, ಪ್ರಾಯೋಗಿಕ ಸಂಚಾರ ನಡೆಸುತ್ತಿದೆ.

Previous articleಮೈಸೂರು ದಸರಾ 2025: ಬೂಕರ್ ಪುರಸ್ಕೃತ ಬಾನು‌ ಮುಷ್ತಾಕ್‌ರಿಂದ ದಸರಾ ಉದ್ಘಾಟನೆ
Next articleRCB ವಿಜಯೋತ್ಸವ: ಕಾಲ್ತುಳಿತ ಪ್ರಕರಣ ನನ್ನನ್ನು ತೀವ್ರವಾಗಿ ಡಿಸ್ಟರ್ಬ್ ಮಾಡಿದೆ – ಸಿದ್ದರಾಮಯ್ಯ ವಿಷಾದ

LEAVE A REPLY

Please enter your comment!
Please enter your name here