“ಬೆಂಗಳೂರು ಬಿಟ್ಟು ಹೋಗುವುದಿಲ್ಲ”: ಬ್ಲ್ಯಾಕ್‌ಬಕ್ ಕಂಪನಿ ಸ್ಪಷ್ಟನೆ

0
47

ಬೆಂಗಳೂರು: ಬೆಂಗಳೂರು ಮೂಲದ ಆನ್‌ಲೈನ್ ಲಾಜಿಸ್ಟಿಕ್ಸ್ ಪ್ಲಾಟ್‌ಫಾರ್ಮ್ ಬ್ಲ್ಯಾಕ್‌ಬಕ್ ತನ್ನ ಕಾರ್ಯಾಚರಣೆಗಳನ್ನು ನಗರದಿಂದ ಹೊರಗೆ ಸ್ಥಳಾಂತರಿಸುವುದಿಲ್ಲ ಎಂದು ಸಹ-ಸ್ಥಾಪಕ ಹಾಗೂ ಸಿಇಒ ರಾಜೇಶ್ ಯಬಾಜಿ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ಕುರಿತು ಅವರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕಂಪನಿ ಬೆಂಗಳೂರಿನಿಂದ ಬೇರೆಡೆಗೆ ಹೋಗಲಿದೆ ಎಂಬ ಸುದ್ದಿಗಳು ಹರಿದಾಡಿದ್ದವು.

ಬೆಳ್ಳಂದೂರಿನ ಕಚೇರಿ, ಸಂಚಾರದ ಕಷ್ಟ: ಬೆಂಗಳೂರಿನ ಹೊರವರ್ತುಲ ರಸ್ತೆಯ (ಒಆರ್‌ಆರ್) ಸಮೀಪದ ಬೆಳ್ಳಂದೂರಿನಲ್ಲಿ ಬ್ಲ್ಯಾಕ್‌ಬಕ್ ಕಚೇರಿಯಿದೆ. ಅಲ್ಲಿ ಗುಂಡಿಬಿದ್ದ ರಸ್ತೆಗಳು, ಅತಿಯಾದ ದೂಳು ಮತ್ತು ಸಂಚಾರ ತೊಂದರೆಗಳಿಂದ ಉದ್ಯೋಗಿಗಳು ಕಚೇರಿಗೆ ಬರಲು ಪ್ರತಿದಿನ ಒಂದೂವರೆ ಗಂಟೆಗೂ ಹೆಚ್ಚು ಕಾಲ ಕಳೆಯಬೇಕಾಗಿದೆ. ಈ ಸಮಸ್ಯೆಗಳ ಕುರಿತು ಯಬಾಜಿ ಕಳೆದ ವಾರ ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಅವರ ಹೇಳಿಕೆಯ ನಂತರ ಉದ್ಯಮಿ ಟಿ.ವಿ. ಮೋಹನ್ ದಾಸ್ ಪೈ ಮತ್ತು ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಸೇರಿದಂತೆ ಪ್ರಮುಖ ಉದ್ಯಮಿಗಳು ಕೂಡ ನಗರದ ಕುಸಿಯುತ್ತಿರುವ ಮೂಲಸೌಕರ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

“ಬೆಂಗಳೂರು ಬಿಟ್ಟು ಹೋಗುವುದಿಲ್ಲ” ಎಂದು ಸ್ಪಷ್ಟನೆ: ಈ ಬೆಳವಣಿಗೆಯ ನಂತರ ಕಂಪನಿಯ ಅಧಿಕೃತ ಸ್ಪಷ್ಟನೆ ಹೊರಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ರಾಜೇಶ್ ಯಬಾಜಿ ಪೋಸ್ಟ್‌ ಮಾಡಿರುವ ತಮ್ಮ ಪತ್ರದಲ್ಲಿ, “ನಮ್ಮ ಕಂಪನಿ ಬೆಂಗಳೂರು ನಗರವನ್ನು ತೊರೆಯುವುದಿಲ್ಲ. ನಗರದಲ್ಲೇ ಇನ್ನೊಂದು ಸ್ಥಳಕ್ಕೆ ಕಚೇರಿಯನ್ನು ಸ್ಥಳಾಂತರಿಸುತ್ತಿದ್ದೇವೆ ಅಷ್ಟೇ,” ಎಂದಿದ್ದಾರೆ.

“ಬೆಳ್ಳಂದೂರಿನಲ್ಲಿರುವ ಕಾರ್ಯಾಚರಣೆಗಳು ಮುಂದುವರಿಯುತ್ತವೆ. ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸುವುದು ಉದ್ಯೋಗಿಗಳ ಸುಲಭ ಸಂಚಾರಕ್ಕಾಗಿ ಮಾತ್ರ,” ಎಂದು ವಿವರಿಸಿದ್ದಾರೆ. “ನಮ್ಮ ಸಾಮರ್ಥ್ಯವನ್ನು ವಿಸ್ತರಿಸುವುದು ಬೆಂಗಳೂರಿನಲ್ಲಿಯೇ ನಡೆಯಲಿದೆ. ಬೆಂಗಳೂರು ಎಂದಿಗೂ ನಮ್ಮ ನೆಲೆಯಾಗಿಯೇ ಉಳಿಯಲಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.

ಕೋರಮಂಗಲದಿಂದ ಬೆಳ್ಳಂದೂರಿಗೆ ಬೆಳೆದ ಕಥೆ : ಬ್ಲ್ಯಾಕ್‌ಬಕ್ 2015ರಲ್ಲಿ ಬೆಂಗಳೂರಿನ ಕೋರಮಂಗಲದಲ್ಲಿ ಸಣ್ಣ ಕಚೇರಿಯಿಂದ ಕಾರ್ಯಾರಂಭ ಮಾಡಿತ್ತು. 2016ರಲ್ಲಿ ತಂಡ ವಿಸ್ತಾರವಾದಂತೆ ಉತ್ತಮ ಸೌಲಭ್ಯಗಳಿಗಾಗಿ ಕಚೇರಿಯನ್ನು ಬೆಳ್ಳಂದೂರಿನ ಹೊರವರ್ತುಲ ರಸ್ತೆಗೆ ಸ್ಥಳಾಂತರಿಸಲಾಯಿತು. ಅದಾಗ್ಯೂ, ಕಳೆದ ದಶಕದಲ್ಲಿ ಕರ್ನಾಟಕದ ತಂತ್ರಜ್ಞಾನ ಪರಿಸರದಿಂದ ಬಹಳಷ್ಟು ಲಾಭ ಪಡೆದಿದ್ದೇವೆ ಎಂದು ಯಬಾಜಿ ಒತ್ತಿ ಹೇಳಿದ್ದಾರೆ.

ಸರ್ಕಾರದ ಗಮನಕ್ಕೆ: “ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ನಾವು ಸದಾ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುತ್ತಿದ್ದೇವೆ. ಉದ್ಯೋಗಿಗಳು ಮತ್ತು ಕಂಪನಿಯ ನಿರಂತರ ಬೆಳವಣಿಗೆಗೆ ಅಗತ್ಯವಾದ ಮೂಲಸೌಕರ್ಯ ಒದಗಿಸಲು ನಾವು ಸಹಕಾರ ನಿರೀಕ್ಷಿಸುತ್ತೇವೆ,” ಎಂದು ಅವರು ಹೇಳಿದ್ದಾರೆ.

ಉದ್ಯಮಿಗಳಿಗೆ ಭರವಸೆ: ನಗರ ಬಿಟ್ಟು ಹೋಗುವ ಕುರಿತು ಹರಿದಾಡಿದ ವದಂತಿಗಳಿಗೆ ತೆರೆ ಬೀಳುವಂತೆ, “ನಮ್ಮ ಕಂಪನಿ ಬೆಂಗಳೂರು ಬಿಟ್ಟು ಹೋಗುವುದಿಲ್ಲ, ಬದಲಾಗಿ ಇಲ್ಲಿ ಇನ್ನಷ್ಟು ವಿಸ್ತಾರವಾಗಲಿದೆ,” ಎಂಬ ಭರವಸೆ ನೀಡಲಾಗಿದೆ.

Previous articleತಮಿಳು ಚಿತ್ರರಂಗದ ನಟ ‘ರೋಬೋ’ ಶಂಕರ್ ಹಠಾತ್ ನಿಧನ
Next articleಅಮೆರಿಕದಲ್ಲಿ ಭಾರತೀಯ ಟೆಕ್ಕಿಯ ಸಾವು: ಕುಟುಂಬದಿಂದ ನ್ಯಾಯಕ್ಕಾಗಿ ಆಗ್ರಹ

LEAVE A REPLY

Please enter your comment!
Please enter your name here