ಬೆಂಗಳೂರು-ವಿಜಯಪುರ ನಡುವೆ ದಸರಾ ವಿಶೇಷ ರೈಲನ್ನು ಓಡಿಸುವುದಾಗಿ ನೈಋತ್ಯ ರೈಲ್ವೆ ಘೋಷಣೆ ಮಾಡಿದೆ. ಹಬ್ಬದ ಸಮಯದಲ್ಲಿ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಇದು ಅನುಕೂಲವಾಗಲಿದೆ.
ನಾಡ ಹಬ್ಬ ದಸರಾ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ನೈಋತ್ಯ ರೈಲ್ವೆ ಈ ಘೋಷಣೆ ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ-ವಿಜಯಪುರ, ವಿಜಯಪುರ-ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲಿದೆ.
ರೈಲು ವೇಳಾಪಟ್ಟಿ: ರೈಲು ಸಂಖ್ಯೆ 06277 ಯಶವಂತಪುರ -ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 30ರಂದು ರಾತ್ರಿ 09:50ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಬೆಳಗ್ಗೆ 09:30ಕ್ಕೆ ವಿಜಯಪುರ ತಲುಪಲಿದೆ.
ರೈಲು ಸಂಖ್ಯೆ 06278 ವಿಜಯಪುರ-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 1ರಂದು ಸಂಜೆ 05:30ಕ್ಕೆ ವಿಜಯಪುರದಿಂದ ಹೊರಟು, ಮರುದಿನ ಬೆಳಗ್ಗೆ 06:40ಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ಬೆಂಗಳೂರು ನಿಲ್ದಾಣ ತಲುಪಲಿದೆ.
ಈ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಎಸ್‌ಎಂಎಂ ಹಾವೇರಿ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.
ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಪ್ರತಿ ರೈಲು 21 ಬೋಗಿಗಳನ್ನು (ಕೋಚ್) ಒಳಗೊಂಡಿರಲಿದೆ. ಪ್ರಯಾಣಿಕರು ಈಗಲೇ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಿ ದಸರಾ ಹಬ್ಬಕ್ಕೆ ಸುಗಮ ಮತ್ತು ಆರಾಮದಾಯಕ ಪ್ರಯಾಣವನ್ನು ಆನಂದಿಸಬಹುದಾಗಿದೆ.
ರೈಲುಗಳ ನಿಲುಗಡೆಗಳು ಮತ್ತು ಸಮಯಗಳ ಕುರಿತು ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. NTES ಆಪ್ ಬಳಸಬಹುದು ಅಥವಾ 139 ಗೆ ಡಯಲ್ ಮಾಡಬಹುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ.