ಬೆಂಗಳೂರು: ವೇಗದ ಬೆಳವಣಿಗೆಯ ನಗರ, ತನ್ನ ಸಂಚಾರ ದಟ್ಟಣೆ ಸಮಸ್ಯೆಯಿಂದ ತತ್ತರಿಸುತ್ತಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಚರ್ಚೆಯ ವಸ್ತುವಾಗಿದ್ದು, ಇತ್ತೀಚೆಗೆ ಈ ಚರ್ಚೆಯು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಬೆಂಗಳೂರಿನ ಮೂಲಸೌಕರ್ಯ ಮತ್ತು ಟ್ರಾಫಿಕ್ ಸಮಸ್ಯೆಗಳ ಬಗ್ಗೆ ನಡೆಯುತ್ತಿದ್ದ ಸೌಹಾರ್ದಯುತ ಚರ್ಚೆಯಲ್ಲಿ, ಹೊರಗಿನವರೊಬ್ಬರ ಭಾಷಾ ಪ್ರೇರಿತ ಪ್ರತಿಕ್ರಿಯೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮೂಲಭೂತ ಬದಲಾವಣೆಗಳು ಬೇಕು ಎಂದು ಅಮರನಾಥ್ ಶಿವಶಂಕರ್ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, “ರಾಗಿಣಿ” ಎಂಬ ಹೆಸರಿನ ಬಳಕೆದಾರರೊಬ್ಬರು ಇದಕ್ಕೆ ಪ್ರತ್ಯುತ್ತರವಾಗಿ, “ಕನ್ನಡ… ಕನ್ನಡ ಅಂತ ಬೊಗಳುತ್ತಲೇ ಇರಿ, ನಿಮ್ಮ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತದೆ 🐷” ಎಂದು ವ್ಯಂಗ್ಯವಾಡಿದ್ದಾರೆ. ಈ ಪ್ರತಿಕ್ರಿಯೆಯು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಟ್ರಾಫಿಕ್ ಸಮಸ್ಯೆಗೂ ಕನ್ನಡ ಭಾಷೆಗೂ ಏನು ಸಂಬಂಧ ಎಂದು ಪ್ರಶ್ನಿಸಿರುವ ಕನ್ನಡಿಗರು, ಆ ಯುವತಿಗೆ ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ.
ಅಮರನಾಥ್ ಶಿವಶಂಕರ್, “ಕನ್ನಡದಲ್ಲಿ ಮಾತನಾಡುವುದರಿಂದ ಬೆಂಗಳೂರಿನಲ್ಲಿ ಸಂಚಾರ ಸಮಸ್ಯೆ ಹೆಚ್ಚಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಕನ್ನಡ ಭಾಷೆಯನ್ನು ಸುಮಾರು 60 ಮಿಲಿಯನ್ ಜನರು ಮಾತನಾಡುತ್ತಾರೆ. ಆ ಭಾಷೆಯನ್ನು ಮಾತನಾಡದವರಿಂದ ಸಿಗುವ ಗೌರವ ಇಷ್ಟೇ ಆಗಿದ್ದರೆ, ನಮ್ಮ ಪಯಣ ಯಾವ ಹಾದಿಯಲ್ಲಿದೆ ಎನ್ನುವುದು ನಮಗೆ ತಿಳಿದಿದೆ” ಎಂದು ತಿರುಗೇಟು ನೀಡಿದ್ದಾರೆ.
ಆದರೆ, ರಾಗಿಣಿ ತಮ್ಮ ಪ್ರತಿಕ್ರಿಯೆಯನ್ನು ಮುಂದುವರಿಸಿ, “ಸುಮಾರು 305 ಮಿಲಿಯನ್ ಜನರು ಹಿಂದಿಯನ್ನು ಮಾತೃಭಾಷೆಯಾಗಿ ಮಾತನಾಡುತ್ತಾರೆ ಮತ್ತು 609 ಮಿಲಿಯನ್ ಜನರು ಹಿಂದಿಯನ್ನು ಚೆನ್ನಾಗಿ ಮಾತನಾಡುತ್ತಾರೆ. ಕನ್ನಡಿಗ ಭಾಷಾ ಭಯೋತ್ಪಾದಕರು ಭಾಷೆಯನ್ನು ಗೌರವಿಸುವ ಬಗ್ಗೆ ಮಾತನಾಡುವುದು, ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಎಂದು ಘೋಷಿಸಿದಂತೆ. ಮತ್ತೊಂದು ವಿಚಾರ, ನಾನು ನೋಡುತ್ತೇನೆ ಕನ್ನಡಿಗರು ಸಮಸ್ಯೆಗಳಿಗಿಂತ ಹಿಂದಿಯ ಬಗ್ಗೆ ಹೆಚ್ಚು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ಯತೆಗಳು ಅಥವಾ ದ್ವೇಷವೇ?” ಎಂದು ಪ್ರಶ್ನಿಸಿದ್ದಾರೆ.
ಈ ಘಟನೆಯು ಬೆಂಗಳೂರಿನಲ್ಲಿ ಸ್ಥಳೀಯ ಮತ್ತು ಹೊರಗಿನವರ ನಡುವೆ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಸೂಕ್ಷ್ಮತೆಯನ್ನು ಎತ್ತಿ ಹಿಡಿದಿದೆ. ನಗರದ ಸಮಸ್ಯೆಗಳ ಕುರಿತಾದ ಚರ್ಚೆಗಳು ಆರೋಗ್ಯಕರವಾಗಿರಬೇಕು, ಆದರೆ ಭಾಷಾ ದ್ವೇಷಕ್ಕೆ ಆಸ್ಪದ ನೀಡಬಾರದು ಎಂಬುದು ಕನ್ನಡಿಗರ ನಿರೀಕ್ಷೆಯಾಗಿದೆ.