ಬೆಂಗಳೂರಿನಲ್ಲಿ ಕಸದ ಸಮಸ್ಯೆ ಇಂದಿನದಲ್ಲ. ರಸ್ತೆ ಬದಿಯಲ್ಲಿ ಕಸ ಸುರಿಯುವವರ ಮನೆ ಬಾಗಿಲಿಗೇ ಹೋಗಿ ಅದೇ ಕಸವನ್ನು ವಾಪಸ್ ಸುರಿಯುವ ಮೂಲಕ ‘ಗಾಂಧಿಗಿರಿ’ ಪ್ರದರ್ಶಿಸಿದ್ದ ಅಧಿಕಾರಿಗಳು, ಈಗ ರೌದ್ರಾವತಾರ ತಾಳಿದ್ದಾರೆ.
ಇನ್ಮುಂದೆ ನೀವು ಕಸಕ್ಕೆ ಬೆಂಕಿ ಹಚ್ಚಿದರೆ ಕೇವಲ ದಂಡ ಕಟ್ಟಿ ಕೈತೊಳೆದುಕೊಳ್ಳುವ ಹಾಗಿಲ್ಲ, ಬದಲಾಗಿ ಜೈಲಿನ ಕಂಬಿ ಎಣಿಸಬೇಕಾಗುತ್ತದೆ ಎಂದು ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಗಮ (BSWML) ಖಡಕ್ ಎಚ್ಚರಿಕೆ ನೀಡಿದೆ.
ನಗರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವುದು ಒಂದೆಡೆಯಾದರೆ, ರಾಶಿ ಬಿದ್ದ ಕಸಕ್ಕೆ ಬೆಂಕಿ ಇಟ್ಟು ಸುಡುವುದು ಮತ್ತೊಂದು ದೊಡ್ಡ ತಲೆನೂವಾಗಿ ಪರಿಣಮಿಸಿದೆ. ಇದರಿಂದ ಉದ್ಯಾನ ನಗರಿಯ ವಾತಾವರಣ ಕಲುಷಿತಗೊಳ್ಳುತ್ತಿದ್ದು, ಹೊಗೆಯಿಂದಾಗಿ ವಾಯು ಮಾಲಿನ್ಯ ಮಿತಿಮೀರುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಸ್ಡಬ್ಲ್ಯೂಎಂಎಲ್ ಅಧಿಕಾರಿಗಳು, ಪರಿಸರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ದಂಡ ಮತ್ತು ಜೈಲು ಶಿಕ್ಷೆ ಹೇಗಿರಲಿದೆ?: ಹೊಸ ನಿಯಮದ ಪ್ರಕಾರ, ಮೊದಲ ಬಾರಿ ಕಸಕ್ಕೆ ಬೆಂಕಿ ಇಟ್ಟು ಸಿಕ್ಕಿಬಿದ್ದರೆ ಬರೋಬ್ಬರಿ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಬುದ್ಧಿ ಕಲಿಯದೆ ಎರಡನೇ ಬಾರಿ ತಪ್ಪು ಮಾಡಿದರೆ ದಂಡದ ಮೊತ್ತ 20 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ.
ಇದಾದ ನಂತರವೂ ನಿಯಮ ಉಲ್ಲಂಘಿಸಿದರೆ ಬರೋಬ್ಬರಿ 5 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸುವ ಅಧಿಕಾರ ನಿಗಮಕ್ಕಿದೆ. ಅಷ್ಟೇ ಅಲ್ಲ, ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ 1981ರ ಸೆಕ್ಷನ್ 5ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ (ಎಫ್‌ಐಆರ್) ದಾಖಲಿಸಿ, ತಪ್ಪಿತಸ್ಥರಿಗೆ ಕನಿಷ್ಠ 6 ತಿಂಗಳಿಂದ ಹಿಡಿದು 6 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಈಗಾಗಲೇ ಘನತ್ಯಾಜ್ಯ ಘಟಕದ ಹೆಲ್ತ್ ಇನ್ಸ್ಪೆಕ್ಟರ್‌ಗಳಿಗೆ ವಿಶೇಷ ಸೂಚನೆ ನೀಡಲಾಗಿದ್ದು, ಯಾರೆಲ್ಲಾ ಕಸಕ್ಕೆ ಬೆಂಕಿ ಹಚ್ಚುತ್ತಾರೋ ಅವರ ವಿಡಿಯೋ ಸಾಕ್ಷ್ಯ ಸಂಗ್ರಹಿಸಿ, ನೇರವಾಗಿ ಠಾಣೆಯಲ್ಲಿ ಕೇಸ್ ದಾಖಲಿಸುವಂತೆ ತಿಳಿಸಲಾಗಿದೆ.
ಸಾರ್ವಜನಿಕರ ಆಕ್ರೋಶವೇನು?: ಅಧಿಕಾರಿಗಳ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. “ಮೊದಲು ನಿಮ್ಮ ಕಸದ ವಾಹನಗಳು ಸರಿಯಾದ ಸಮಯಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಿ. ವಾರಗಟ್ಟಲೆ ಆಟೋ ಟಿಪ್ಪರ್‌ಗಳು ಬಾರದೇ ಇದ್ದಾಗ, ಮನೆಯಲ್ಲಿ ಕಸ ಕೊಳೆಯುವುದನ್ನು ನೋಡಲಾಗದೆ ಅನಿವಾರ್ಯವಾಗಿ ಜನರು ರಸ್ತೆಗೆ ಎಸೆಯುತ್ತಾರೆ ಅಥವಾ ಸುಡುತ್ತಾರೆ. ಮೂಲಸೌಕರ್ಯ ಸರಿಪಡಿಸದೆ, ನೇರವಾಗಿ ಜನರ ಮೇಲೆ ಕೇಸ್ ಹಾಕುವುದು ಎಷ್ಟು ಸರಿ?” ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.


























