ಮಾಹಿತಿ ತಂತ್ರಜ್ಞಾನದ ರಾಜಧಾನಿ ಬೆಂಗಳೂರಿಗೆ ಇದೀಗ ಒಂದು ಹೊಸ ಕಪ್ಪು ಚುಕ್ಕೆ ಅಂಟಿಕೊಂಡಿದೆ. ನಗರದ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಅಮೆರಿಕಾ ಮತ್ತು ಕೆನಡಾ ಪ್ರಜೆಗಳನ್ನು ಗುರಿಯಾಗಿಸಿಕೊಂಡು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಒಂದು ಅಂತರರಾಷ್ಟ್ರೀಯ ಸೈಬರ್ ವಂಚನೆ ಕಚೇರಿ ಪತ್ತೆಯಾಗಿದೆ.
ಈ ಘಟನೆ ಪೊಲೀಸರನ್ನು ದಿಗ್ಭ್ರಮೆಗೊಳಿಸಿದ್ದು, ದೇಶದಲ್ಲಿ ಡಿಜಿಟಲ್ ವಂಚನೆ ಜಾಲಗಳು ಯಾವ ಮಟ್ಟಕ್ಕೆ ಬೆಳೆದಿವೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಕಾರ್ಯಾಚರಣೆ ಹೇಗೆ ನಡೆಯುತ್ತಿತ್ತು?: ಸಿಬೈಟ್ ಎಂಬ ಹೆಸರಿನಲ್ಲಿ ಐಟಿ ಕಂಪನಿಯ ಸೋಗಿನಲ್ಲಿ ಈ ವಂಚನೆ ಜಾಲ ಕಾರ್ಯನಿರ್ವಹಿಸುತ್ತಿತ್ತು. ಪ್ರತಿದಿನ ಸಂಜೆ 6 ಗಂಟೆಗೆ ಕಚೇರಿ ಪ್ರಾರಂಭವಾಗಿ ಅಮೆರಿಕಾದ ಸಮಯಕ್ಕೆ ಅನುಗುಣವಾಗಿ ವಿದೇಶಿ ಪ್ರಜೆಗಳನ್ನು ಸಂಪರ್ಕಿಸಲಾಗುತ್ತಿತ್ತು.
ವಂಚಕರು ತಮ್ಮನ್ನು ಗಡಿ ಭದ್ರತಾ ಪಡೆ ಅಥವಾ ತನಿಖಾ ಸಂಸ್ಥೆಯ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ಸಂತ್ರಸ್ತರ ಐಡಿಗಳನ್ನು ಬಳಸಿಕೊಂಡು ಮಾದಕವಸ್ತು ಪಾರ್ಸಲ್ ಕಳುಹಿಸಲಾಗಿದೆ ಎಂದು ಬೆದರಿಸುತ್ತಿದ್ದರು.
ಅಮೆರಿಕಾದ ಸುಪ್ರೀಂ ಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯದ ನಕಲಿ ಆದೇಶ ಪತ್ರಗಳನ್ನು ತೋರಿಸಿ ತಮ್ಮ ವಂಚನೆಯನ್ನು ಇನ್ನಷ್ಟು ನಂಬುವಂತೆ ಮಾಡುತ್ತಿದ್ದರು. ನಂತರ ಕರೆಯನ್ನು ಮತ್ತೊಂದು ತನಿಖಾ ತಂಡಕ್ಕೆ ವರ್ಗಾಯಿಸುವ ನೆಪದಲ್ಲಿ, ಸಂತ್ರಸ್ತರನ್ನು ಡಿಜಿಟಲ್ ಅರೆಸ್ಟ್ ಮಾಡಿ ಡಾಲರ್‌ಗಳಲ್ಲಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು.
ಪೊಲೀಸ್ ದಾಳಿ: ಖಚಿತ ಮಾಹಿತಿ ಆಧರಿಸಿ ಅಗ್ನೇಯ ವಿಭಾಗದ ಸೆನ್ ಪೊಲೀಸರು ಸಿಬೈಟ್ ಕಂಪನಿಯ ಮೇಲೆ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ, ಅಲ್ಲಿ ಕೆಲಸ ಮಾಡುತ್ತಿದ್ದ 16 ಮಂದಿ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ 4 ಮಂದಿ ಗುಜರಾತ್ ಮೂಲದವರಾಗಿದ್ದರೆ, 8 ಮಂದಿ ಮಹಾರಾಷ್ಟ್ರದವರು, ಮತ್ತು ಒರಿಸ್ಸಾ, ಜಾರ್ಖಂಡ್, ಮಧ್ಯಪ್ರದೇಶ ಮೂಲದ ತಲಾ ಒಬ್ಬ ಆರೋಪಿ ಸೇರಿದ್ದಾರೆ.
ಈ ಸಿಬ್ಬಂದಿಗೆ ತಿಂಗಳಿಗೆ 22 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತಿತ್ತು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ಈ ಡಿಜಿಟಲ್ ಅರೆಸ್ಟ್ ಪ್ರಕರಣವು ಬೆಂಗಳೂರಿನ ಘನತೆಗೆ ಧಕ್ಕೆ ತಂದಿದ್ದು, ಸೈಬರ್ ವಂಚನೆಗಳ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವನ್ನು ಒತ್ತಿಹೇಳುತ್ತದೆ. ವಿದೇಶಿ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಭಾರತದಲ್ಲಿ ಕುಳಿತು ನಡೆಸುತ್ತಿದ್ದ ಈ ವಂಚನೆ ಜಾಲದ ಪತ್ತೆಯು ಸೈಬರ್ ಅಪರಾಧಗಳ ವಿಸ್ತಾರವನ್ನು ತೋರಿಸುತ್ತಿದೆ.