ಬೆಂಗಳೂರು: ಜನರಿಗೆ ಗುಡ್ ನ್ಯೂಸ್ ಕೊಟ್ಟ ಏರ್‌ ಇಂಡಿಯಾ

0
59

ಬೆಂಗಳೂರು: ಬೆಂಗಳೂರು ನಗರ ಏರ್‌ ಇಂಡಿಯಾದ ಅತಿ ದೊಡ್ಡ ಕಾರ್ಯಾಚರಣೆಯ ಕೇಂದ್ರವಾಗಿದೆ. ವಾರದಲ್ಲಿ 405 ವಿಮಾನಗಳು ನಗರದಿಂದ 34 ದೇಶಿಯ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತದೆ. ಈಗ ಏರ್ ಇಂಡಿಯಾ ನಗರದಿಂದ ಇನ್ನಷ್ಟು ಮಾರ್ಗದಲ್ಲಿ ಸೇವೆ ಆರಂಭಿಸಲಿದೆ.

ಏರ್ ಇಂಡಿಯಾ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಇಲ್ಲಿಂದ ಮೂರು ಹೊಸ ದೇಶಿಯ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸಲಿದೆ ಎಂದು ಘೋಷಣೆ ಮಾಡಿದೆ. ಬೆಂಗಳೂರು-ಅಹಮದಾಬಾದ್, ಬೆಂಗಳೂರು-ಚಂಡೀಗಢ್ ಮತ್ತು ಬೆಂಗಳೂರು-ಡೆಹರಾಡೂನ್ ಮಾರ್ಗದಲ್ಲಿ ವಿಮಾನ ಸಂಚಾರ ಆರಂಭ ಮಾಡಲಾಗುತ್ತದೆ ಎಂದು ಏರ್ ಇಂಡಿಯಾ ಹೇಳಿದೆ.

ಪ್ರಯಾಣಿಕರ ಬೇಡಿಕೆಯಂತೆ ಸೆಪ್ಟೆಂಬರ್‌ 1, 2025ರಿಂದ ವಿಮಾನ ಸೇವೆ ಆರಂಭವಾಗಲಿದೆ. ಏರ್ ಇಂಡಿಯಾದ ಮಾಹಿತಿ ಪ್ರಕಾರ ಬೆಂಗಳೂರು-ಅಹಮದಾಬಾದ್, ಬೆಂಗಳೂರು-ಚಂಡೀಗಢ್ ಮಾರ್ಗದಲ್ಲಿ ದಿನಕ್ಕೆ ಎರಡು ವಿಮಾನ ಸಂಚಾರ ನಡೆಸಲಿದೆ. ಬೆಂಗಳೂರು-ಡೆಹರಾಡೂನ್ ಮಾರ್ಗದಲ್ಲಿ ಪ್ರತಿನಿತ್ಯ ಒಂದು ವಿಮಾನ ಹಾರಾಟ ನಡೆಸಲಿದೆ.

ಈ ಮೂರು ಮಾರ್ಗದಲ್ಲಿ ವಿಮಾನಗಳ ಪ್ರಯಾಣ ದರ ಒಂದು ಕಡೆ 4,100 ರೂ. ಆಗಿದೆ. ಏರ್‌ ಇಂಡಿಯಾ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ಮುಂಗಡ ಟಿಕೆಟ್ ಬುಕ್ ಮಾಡಲು ಅವಕಾಶವಿದೆ.

ಮೆಟ್ರೋದಿಂದ ಅಭಿವೃದ್ಧಿ ಹೊಂದುತ್ತಿರುವ ನಗರಕ್ಕೆ ವಿಮಾನ ಸೇವೆ ಎಂಬ ಘೋಷಣೆಯಡಿ ಏರ್ ಇಂಡಿಯಾ ಈ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. ಸದ್ಯ ವಿಮಾನಯಾನ ಕಂಪನಿ 116 ವಿಮಾನಗಳನ್ನು ಹೊಂದಿದೆ. ಇದರಲ್ಲಿ ಬೋಯಿಂಗ್ 737ಎಸ್, ಏರ್‌ ಬಸ್ ಎ320ಎಸ್ ಒಳಗೊಂಡಿದೆ. ಸ್ಪರ್ಧಾತ್ಮಕ ದರ ಮತ್ತು ಇತರ ಘೋಷಣೆಗಳ ಮೂಲಕ ಏರ್‌ ಇಂಡಿಯಾ ದೇಶಿಯ ನೆಟ್‌ವರ್ಕ್‌ ಇನ್ನಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ.

ಹೊಸ ವಿಮಾನದ ವೇಳಾಪಟ್ಟಿ

  • ಅಹಮದಾಬಾದ್-ಬೆಂಗಳೂರು: 11 ಗಂಟೆಗೆ ಹೊರಡಲಿದ್ದು, 23 ಗಂಟೆಗೆ ಬೆಂಗಳೂರಿಗೆ ಆಗಮನ. 13:25 ಕ್ಕೆ ಹೊರಟು 01:30ಕ್ಕೆ ಆಗಮನ. ವಾಪಸ್ ಹೋಗುವ ಮಾರ್ಗದಲ್ಲಿ 07:55 ಮತ್ತು 19:55ಕ್ಕೆ ಹೊರಟು, 10:30 and 22:30ಕ್ಕೆ ತಲುಪಲಿದೆ. 2ನೇ ವಿಮಾನ ಸೆಪ್ಟೆಂಬರ್ 16ರಿಂದ ಸಂಚಾರ.
  • ಚಂಡೀಗಢ್-ಬೆಂಗಳೂರು: ಚಂಡೀಗಢ್‌ನಿಂದ 16:40, 23:25ಕ್ಕೆ ಹೊರಟು, 19:40 ಮತ್ತು 02:25ಕ್ಕೆ ಆಗಮನ. ವಾಪಸ್ ಹೋಗುವ ಮಾರ್ಗದಲ್ಲಿ 13:15 ಮತ್ತು 20:00ಕ್ಕೆ ಹೊರಟು 16:10 ಮತ್ತು 22:55ಕ್ಕೆ ತಲುಪಲಿದೆ.
  • ಡೆಹರಾಡೂನ್-ಬೆಂಗಳೂರು: ಪ್ರತಿದಿನ ಬೆಳಗ್ಗೆ 16:30ಕ್ಕೆ ಹೊರಟು 19:30ಕ್ಕೆ ಆಗಮನ. ವಾಪಸ್ ಹೋಗುವ ಮಾರ್ಗದಲ್ಲಿ 12:50ಕ್ಕೆ ಹೊರಟು 16:00ಕ್ಕೆ ತಲುಪಲಿದೆ.

ಏರ್‌ ಇಂಡಿಯಾಗೆ ಬೆಂಗಳೂರು ನಗರ ಪ್ರಮುಖ ಹಬ್ ಆಗಿದೆ. ಕಂಪನಿಯ ದೊಡ್ಡ ಕಾರ್ಯಾಚರಣೆಯ ಪ್ರಮುಖ ನಗರ ಇದಾಗಿದೆ. ವಾರದಲ್ಲಿ 405 ವಿಮಾನಗಳು 34 ದೇಶಿಯ ನಗರಗಳಿಗೆ ಬೆಂಗಳೂರಿನಿಂದ ಹಾರಾಟವನ್ನು ನಡೆಸಲಿವೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವ್ಯವಸ್ಥಾಪಕ ನಿರ್ದೇಶಕ ಅಲೋಕ್ ಸಿಂಗ್ ಮಾತನಾಡಿ,”ಮೆಟ್ರೋ ಮತ್ತು ಇತರ ನಗರಗಳ ನಡುವಿನ ಸಂಪರ್ಕಕ್ಕೆ ಒತ್ತು ನೀಡುವ ದೃಢವಾದ ಜಾಲವನ್ನು ನಾವು ನಿರ್ಮಾಣ ಮಾಡುತ್ತಿದ್ದೇವೆ. ಇದು ಜನರಿಗೆ ಉತ್ತಮ ಸೌಕರ್ಯವನ್ನು ನೀಡುವ ನಮ್ಮ ಪ್ರಯತ್ನವಾಗಿದೆ” ಎಂದು ಹೇಳಿದ್ದಾರೆ.

“ನಮ್ಮ ಪ್ರಯಾಣಿಕರು ವಿಶ್ವಾಸಾರ್ಹ ವಿಮಾನ ಪ್ರಯಾಣ ಅನುಭವವನ್ನು ಪಡೆಯಬಹುದು. ರುಚಿಕರವಾದ ಬಿಸಿ ಊಟ, ಆರಾಮದಾಯಕ ಆಸನಗಳು ಮತ್ತು ವೈಯಕ್ತಿಕ ಪ್ರಯಾಣದ ಅಗತ್ಯಗಳಿಗೆ ತಕ್ಕಂತೆ ರೂಪಿಸಲಾದ ದರಗಳ ಆಯ್ಕೆಗಳನ್ನು ಮಾಡಬಹುದು” ಎಂದು ತಿಳಿಸಿದ್ದಾರೆ.

“ನಮ್ಮ ಹೊಸ ವಿಮಾನ ಸೇವೆಗಳು ಮಾರುಕಟ್ಟೆಗಳಲ್ಲಿ ಹೊಸ ಅವಕಾಶಗಳನ್ನು ನಮ್ಮದಾಗಿಸಿಕೊಳ್ಳುವ ವಿಶಾಲ ಕಾರ್ಯತಂತ್ರದ ಭಾಗವಾಗಿದೆ” ಎಂದು ಮೂರು ಹೊಸ ನಗರಕ್ಕೆ ವಿಮಾನ ಸೇವೆ ಆರಂಭಿಸುವ ಕುರಿತು ಹೇಳಿದ್ದಾರೆ.

Previous articleಆನ್‌ಲೈನ್ ಗೇಮ್‌ಗಳಿಗೆ ಬೀಳಲಿದೆ ಕಡಿವಾಣ: ಲೋಕಸಭೆಯಲ್ಲಿ ಮಸೂದೆ ಮಂಡನೆ
Next articleಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ ಹೇಗಿದೆ?, ವಿವರ

LEAVE A REPLY

Please enter your comment!
Please enter your name here