ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೆಬ್ಬಾಳ ಕಡೆ ಹೋಗುವ ವಾಹನ ಸವಾರರಿಗೆ ಗುಡ್‌ನ್ಯೂಸ್ ಒಂದಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಾಣ ಮಾಡಿರುವ ಹೆಬ್ಬಾಳದ ಫ್ಲೈ ಓವರ್ ವಿಸ್ತರಿತ ಕಾಮಗಾರಿ ಪೂರ್ಣಗೊಂಡಿದ್ದು, ಸೋಮವಾರ ಉದ್ಘಾಟನೆಯಾಗಲಿದೆ.
ಆಗಸ್ಟ್ 18ರ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ್ ಹೆಬ್ಬಾಳದ ವಿಸ್ತರಿತ ಫ್ಲೈ ಓವರ್ ಲೋಕಾರ್ಪಣೆ ಮಾಡಲಿದ್ದಾರೆ.
ಕಳೆದ ವಾರ ಡಿ.ಕೆ.ಶಿವಕುಮಾರ್ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ನಿರ್ಮಾಣ ಮಾಡಿರುವ ಫ್ಲೈ ಓವರ್ ಕಾಮಗಾರಿ ವೀಕ್ಷಣೆ ಮಾಡಿದ್ದರು. ಬುಧವಾರದಿಂದ ಫ್ಲೈ ಓವರ್ ಮೇಲೆ ಪ್ರಾಯೋಗಿಕವಾಗಿ ಲಘು ವಾಹನ ಸಂಚಾರ ಆರಂಭವಾಗಿತ್ತು. ಸೋಮವಾರ ಫ್ಲೈ ಓವರ್ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.
ಫ್ಲೈ ಓವರ್ ಕಾಮಗಾರಿ ವೀಕ್ಷಣೆ ಮಾಡಿದ್ದ ಡಿ.ಕೆ.ಶಿವಕುಮಾರ್ ಸಚಿವ ಬೈರತಿ ಸುರೇಶ್ ಜೊತೆ ಫ್ಲೈ ಓವರ್ ಮೇಲೆ ಬೈಕ್ ಮೇಲೆ ಸಂಚಾರ ನಡೆಸಿದ್ದರು. ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಸೇರಿದಂತೆ ಅಧಿಕಾರಿಗಳು ಈ ಸಂದರ್ಭದಲ್ಲಿ ಜೊತೆಗಿದ್ದರು.
80 ಕೋಟಿ ವೆಚ್ಚ: ಈ ವಿಸ್ತರಿತ ಫ್ಲೈ ಓವರ್ ಉದ್ಘಾಟನೆಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ, ಅಲ್ಲಿಂದ ನಗರಕ್ಕೆ ಆಗಮಿಸುವ ವಾಹನ ಸವಾರರಿಗೆ ಅನುಕೂಲವಾಗಲಿದೆ. ಹೆಬ್ಬಾಳ ಜಂಕ್ಷನ್‌ನಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಬಿಡಿಎ 700 ಮೀಟರ್ ಉದ್ದದ ವಿಸ್ತರಿತ ಫ್ಲೈ ಓವರ್ ಕಾಮಗಾರಿಯ ಯೋಜನೆ ರೂಪಿಸಿತ್ತು. 2023ರಲ್ಲಿ ಕಾಮಗಾರಿ ಆರಂಭ ಮಾಡಲಾಗಿತ್ತು. ಈ ಫ್ಲೈ ಓವರ್ ಕೆ.ಆರ್.ಪುರ ಕಡೆಯಿಂದ ಮೇಖ್ರಿ ಸರ್ಕಲ್ ಕಡೆಗೆ ನಿರ್ಮಾಣ ಮಾಡಲಾಗಿದೆ.
ಈ ವಿಸ್ತರಿತ ಫ್ಲೈ ಓವರ್‌ನಲ್ಲಿ ವಾಹನ ಸಂಚಾರ ಆರಂಭವಾದ ಬಳಿಕ ಸಂಚಾರ ದಟ್ಟಣೆ ಶೇ 30ರಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಮೇಖ್ರಿ ಸರ್ಕಲ್‌ನಲ್ಲಿ ಸಂಚಾರ ದಟ್ಟಣೆ ಹೆಚ್ಚುವ ನಿರೀಕ್ಷೆ ಇದೆ.
ವಾಹನಗಳ ಪ್ರಾಯೋಗಿಕ ಸಂಚಾರದ ಸಮಯದಲ್ಲಿಯೇ ಮೇಖ್ರಿ ಸರ್ಕಲ್‌ನಲ್ಲಿ ಉಂಟಾಗುವ ವಾಹನ ದಟ್ಟಣೆಯನ್ನು ಸಂಚಾರಿ ಪೊಲೀಸರು ಗಮನಿಸಿದ್ದಾರೆ. ಇದನ್ನು ಪರಿಹಾರ ಮಾಡಲು ಬೇಕಾದ ಕ್ರಮಗಳನ್ನು ಕೈಗೊಂಡಿದ್ದಾರೆ.
ಮೇಖ್ರಿ ಸರ್ಕಲ್ ರಸ್ತೆಯನ್ನು ವಿಸ್ತರಣೆ ಮಾಡುವ ಯೋಜನೆಯನ್ನು ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರೂಪಿಸಿದೆ. ಹೆಬ್ಬಾಳ ಮತ್ತು ಮೇಖ್ರಿ ಸರ್ಕಲ್‌ನ ವಾಹನ ದಟ್ಟಣೆ ಕುರಿತು ಅಧ್ಯಯನ ನಡೆಸಿ, 2 ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯ ಸರ್ಕಾರ ಹೆಬ್ಬಾಳದಲ್ಲಿ ಕೆ.ಆರ್.ಪುರಂ ಕಡೆಯಿಂದ ಬಳ್ಳಾರಿ ರಸ್ತೆಗೆ ಬರುವ ವಾಹನಗಳ ಸಂಚಾರವನ್ನು ಸಂಪರ್ಕಿಸುವ ಹೆಬ್ಬಾಳ ಫ್ಲೈಓವರ್‌ನ ಲೂಪ್‌ನಲ್ಲಿನ ಹೆಚ್ಚುವರಿ ರ‍್ಯಾಂಪ್ ಅನ್ನು ಆಗಸ್ಟ್ 15ಕ್ಕೆ ಸಂಚಾರಕ್ಕೆ ಮುಕ್ತಗೊಳಿಸುತ್ತೇವೆ ಎಂದು ಈ ಹಿಂದೆ ಹೇಳಿತ್ತು.
ಬೆಂಗಳೂರು ಸಂಚಾರಿ ಪೊಲೀಸರು ಈ ಕಾಮಗಾರಿ 2024ರ ನವೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದರು. ಆದರೆ ವಿವಿಧ ಕಾರಣಕ್ಕೆ ಗಡುವು ವಿಸ್ತರಣೆಯಾಗಿತ್ತು. 2025ರ ಮೇ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ ಎಂದು ಘೋಷಣೆ ಮಾಡಲಾಗಿತ್ತು. ಅಂತಿಮವಾಗಿ ಆಗಸ್ಟ್‌ಗೆ ಲೋಕಾರ್ಪಣೆಯಾಗುತ್ತಿದೆ.
ಬಿಡಿಎ 2ನೇ ಹಂತದಲ್ಲಿ ತುಮಕೂರು ರಸ್ತೆಯ ಲೂಪ್ ಅನ್ನು ಹೆಚ್ಚುವರಿ ರ‍್ಯಾಂಪ್‌ಗೆ ಸೇರಿಸಲಾಗುತ್ತದೆ ಎಂದು ಹೇಳಿದೆ. ಈಗ ಸಂಚಾರಕ್ಕೆ ಮುಕ್ತವಾಗಿರುವ 700 ಮೀಟರ್ ಹೆಚ್ಚುವರಿ ರ‍್ಯಾಂಪ್ ಅನ್ನು 26 ಕಂಬಗಳನ್ನು ನಿರ್ಮಾಣ ಮಾಡಿ ಕಟ್ಟಲಾಗಿದೆ.
ಬ್ಯಾಪಿಸ್ಟ್ ಆಸ್ಪತ್ರೆಯಿಂದ ಎಸ್ಟೀಮ್ ಮಾಲ್ ತನಕ ಈ ಹಿಂದೆ ಹೆಚ್ಚುವರಿ ರ‍್ಯಾಂಪ್ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಕ್ಕೆ ಪ್ರತ್ಯೇಕ ರಸ್ತೆ ನಿರ್ಮಾಣ ಮಾಡುವುದು ಈ ಯೋಜನೆಯಲ್ಲಿ ಸೇರಿತ್ತು. ಆದರೆ ಬಳಿಕ ಯೋಜನೆ ಕೈಬಿಡಲಾಗಿತ್ತು.