ಬೆಂಗಳೂರು: ಗಾಂಧಿ ಬಜಾರ್ ಬೆಂಗಳೂರು ನಗರದಲ್ಲಿ ಶಾಪಿಂಗ್ ಮಾಡುವವರ ನೆಚ್ಚಿನ ತಾಣ. ಆದರೆ ಕುಟುಂಬ ಸಮೇತ, ಸ್ನೇಹಿತರ ಜೊತೆ ಶಾಪಿಂಗ್ ಬಂದವರು ಎದುರಿಸುವ ದೊಡ್ಡ ಸಮಸ್ಯೆ ವಾಹನಗಳ ಪಾರ್ಕಿಂಗ್. ಅದರಲ್ಲೂ ಹಬ್ಬಗಳ ಸಮಯ, ವಾರಾಂತ್ಯದಲ್ಲಿ ಗಾಂಧಿ ಬಜಾರ್ ಸುತ್ತಮುತ್ತ ವಾಹನ ನಿಲ್ಲಿಸುವುದು ದೊಡ್ಡ ಸವಾಲು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶಾಪಿಂಗ್ ಹೋಗುವ ಜನರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಪಾಲಿಕೆ ವತಿಯಿಂದ ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಹುಹಂತದ ಕಾರು ಪಾರ್ಕಿಂಗ್ ಕಟ್ಟಡ ಶೀಘ್ರವೇ ಲೋಕಾರ್ಪಣೆಯಾಗಲಿದೆ.
ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಅದನ್ನು ಸಾರ್ವಜನಿಕ ಸೇವೆಗೆ ಮಕ್ತಗೊಳಿಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆಯುಕ್ತರು ಮಾತನಾಡಿ, “ಗಾಂಧಿ ಬಜಾರ್‌ನಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಾಣ ಮಾಡಲಾಗಿದೆ. ಈ ಕಟ್ಟಡ ಲೋಕಾರ್ಪಣೆ ಕುರಿತು ಉಪ ಮುಖ್ಯಮಂತ್ರಿಗಳಿಂದ ದಿನಾಂಕ ನಿಗದಿಪಡಿಸಿಕೊಂಡು ಉದ್ಘಾಟನೆ ಮಾಡಲಾಗುತ್ತದೆ ಎಂದರು.
ಗಾಂಧಿ ಬಜಾರ್ ಮುಖ್ಯ ರಸ್ತೆಯ ಪ್ರವೇಶ ಹಾಗೂ ಗಾಂಧಿ ಬಜಾರ್ ವೃತ್ತದಲ್ಲಿ ಅಳವಡಿಸಿರುವ ಗ್ರಾನೈಟ್ ಕಾಬುಲ್ ಸ್ಟೋನ್, ಪಾದಚಾರಿ ಮಾರ್ಗದ ಕಾಮಗಾರಿಯನ್ನು ಪರಿಶೀಲಿಸಿದರು. ರಸ್ತೆ ಹಾಗೂ ಪಾದಚಾರಿ ಮಾರ್ಗ ನಿರ್ಮಾಣದ ಅಭಿವೃದ್ಧಿಗೆ ಮೆಚ್ಚುಗೆ ವ್ಯಕ್ತಪಡಿಸಿರು.
ಪಾರ್ಕಿಂಗ್ ಕಟ್ಟಡ ವಿವರ: ಬಹು ಹಂತದ ಕಾರ್ ಪಾರ್ಕಿಂಗ್ ಕಟ್ಟಡವನ್ನು 22 ಕೋಟ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ತಳ ಮಹಡಿ ಹಾಗೂ ನೆಲ ಮಹಡಿಯಲ್ಲಿ ವ್ಯಾಪಾರಕ್ಕಾಗಿ 50 ಮಳಿಗೆಗಳನ್ನು ನಿರ್ಮಿಸಲಾಗಿದೆ.
ಮೊದಲ ಮಹಡಿಯಿಂದ 4ನೇ ಮಹಡಿಯವರೆಗೆ ಕಾರುಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಒಟ್ಟು 124 ವಾಹನಗಳನ್ನು ನಿಲುಗಡೆ ಮಾಡಬಹುದು. ಒಂದು ಲಿಫ್ಟ್, 6 ಶೌಚಾಲಯ, ಸ್ಪೆಪ್ಸ್ ಇದೆ. ಇದರಿಂದಾಗಿ ಗಾಂಧಿ ಬಜಾರ್ ವಾಹನ ಪಾರ್ಕಿಂಗ್ ಸಮಸ್ಯೆ ಬಗೆಹರಿಯಲಿದೆ ಎಂದು ಅಂದಾಜಿಸಲಾಗಿದೆ.
ಹಣ್ಣು-ತರಕಾರಿ, ಬಟ್ಟೆ, ತಿಂಡಿಗಳು, ಪೂಜಾ ಸಾಮಾಗ್ರಿ ಸೇರಿದಂತೆ ವಿವಿಧ ವಸ್ತುಗಳ ಖರೀದಿಗಾಗಿ ಜನರು ಗಾಂಧಿ ಬಜಾರ್‌ಗೆ ಬರುತ್ತಾರೆ. ಮುಂಜಾನೆಯಿಂದ ತಡರಾತ್ರಿ ತನಕ ಗಾಂಧಿ ಬಜಾರ್‌ನಲ್ಲಿ ಜನದಟ್ಟಣೆ ಇರುತ್ತದೆ. ಆದ್ದರಿಂದ ವಾಹನಗಳ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗಿತ್ತು. ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡಿದರೂ ಅದನ್ನು ಉದ್ಘಾಟನೆ ಮಾಡಿರಲಿಲ್ಲ.
ಗಾಂಧಿ ಬಜಾರ್ ವ್ಯಾಪಾರದ ಕುರಿತು ಮಾತಾಡಿದ ಆಯುಕ್ತರು, ಈಗಾಗಲೇ ಗಡಿಗಳನ್ನು ನಿಗದಿಪಡಿಸಿದ್ದು, ಆ ಗಡಿಯಲ್ಲೇ ವ್ಯಾಪಾರ ಮಾಡಲು ಅವಕಾಶ ನೀಡಬೇಕು. ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಪಾದಚಾರಿ ಮಾರ್ಗಗಳಲ್ಲಿ ಪಾರ್ಕಿಂಗ್ ಮಾಡುವುದನ್ನು ತಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಾರುಕಟ್ಟೆ ಆಕರ್ಷಕವಾಗಿ ಕಾಣಬೇಕಾದರೆ ಎಲ್ಲಾ ವ್ಯಾಪಾರಿಗಳಿಗೆ ಒಂದೇ ಮಾದರಿಯ ಛತ್ರಿಯನ್ನು ವಿನ್ಯಾಸಗೊಳಿಸಿ ನೀಡಬೇಕು. ಈ ನಿಟ್ಟಿನಲ್ಲಿ ಯಾವ ಮಾದರಿಯ ಛತ್ರಿಗಳನ್ನು ನೀಡಬೇಕು ಎಂಬುದರ ಬಗ್ಗೆ ಅವಲೋಕಿಸಿ ವಿನ್ಯಾಸ ರೂಪಿಸಲು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟರು.