ಬೆಂಗಳೂರು: ನಮ್ಮ ಮೆಟ್ರೋ, ಹಾಲು, ವಿದ್ಯುತ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ ಈಗಾಗಲೇ ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ತಟ್ಟಿದೆ. ಈಗ ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಆಟೋ ಪ್ರಯಾಣ ದರವೂ ಏರಿಕೆಯಾಗಲಿದೆ. ಆಟೋ ಚಾಲಕರ ಬಹುದಿನಗಳ ಬೇಡಿಕೆಗೆ ಸರ್ಕಾರ ಒಪ್ಪಿಗೆ ಕೊಟ್ಟಿದೆ.
ಆಟೋ ರಿಕ್ಷಾ ಪ್ರಯಾಣ ದರವನ್ನು ಏರಿಕೆ ಮಾಡಿ ಅಧ್ಯಕ್ಷರು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಆದೇಶವನ್ನು ಹೊರಡಿಸಿದ್ದಾರೆ. ಪರಿಷ್ಕೃತ ದರ ಆಗಸ್ಟ್ 1, 2025ರಿಂದ ಜಾರಿಗೆ ಬರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಅಧಿಸೂಚನೆ ಮೂಲಕ ಆಟೋ ರಿಕ್ಷಾ ಪ್ರಯಾಣ ದರ ದರ ಏರಿಕೆ 2025-26 ಕುರಿತು ಮಾಹಿತಿ ನೀಡಿದ್ದಾರೆ.
ಕೆಳಕಂಡಂತೆ ದರ ಪರಿಷ್ಕರಣೆ: ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋ ರಿಕ್ಷಾ ಮೀಟರ್ ದರ ಪರಿಷ್ಕರಣೆ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ದರಗಳನ್ನು ಪರಿಷ್ಕರಣೆ ಮಾಡಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.
- ಕನಿಷ್ಠ ದರ ಮೊದಲ 2 ಕಿ.ಮೀ.ಗೆ 36 ರೂ.ಗಳು (ಮೂರು ಪ್ರಯಾಣಿಕರು)
- ನಂತರದ ಪ್ರತಿ ಕಿಲೋಮೀಟರ್ ದರ 18 ರೂ.ಗಳು (ಮೂರು ಪ್ರಯಾಣಿಕರು)
- ಕಾಯುವಿಕೆ ದರ. ಮೊದಲ 5 ನಿಮಿಷ ಉಚಿತ. ಮೊದಲ 5 ನಿಮಿಷದ ನಂತರ ಪ್ರತಿ 15 ನಿಮಿಷ ಅಥವಾ ಅದರ ಭಾಗಕ್ಕೆ 10 ರೂ.ಗಳು.
- ರಾತ್ರಿ ವೇಳೆ ದರ. ಸಾಮಾನ್ಯ ದರ + ಸಾಮಾನ್ಯ ದರದ ಅರ್ಧಪಟ್ಟು (ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯ ತನಕ)
- ಆರ್‌ಟಿಒ ಮೂಲಕ ಅನುಮೋದಿಸಲ್ಪಟ್ಟಿರುವ ನಿಗದಿತ ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಪ್ರತಿಯೊಂದು ಆಟೋ ರಿಕ್ಷಾದಲ್ಲಿ ಪ್ರಮುಖ ಸ್ಥಾನದಲ್ಲಿ ಪ್ರದರ್ಶಿಸಬೇಕು.
- ಪರಿಷ್ಕೃತ ದರಗಳ ಮೀಟರ್‌ನಲ್ಲಿ ಪ್ರದರ್ಶನವಾಗುವಂತೆ ಮೀಟರ್‌ಗಳನ್ನು ದಿನಾಂಕ 31-10-2025 (90 ದಿನಗಳು) ರೊಳಗಾಗಿ ಪುನಃ ಸತ್ಯಾಪನೆ ಮಾಡಿ ಮುದ್ರೆ ಹಾಕಿಸಿಕೊಳ್ಳುವುದು ಎಂದು ಸೂಚನೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣ ದರ ಏರಿಕೆ ಮಾಡಬೇಕು ಎಂದು ಸಾರಿಗೆ ಇಲಾಖೆ ಮುಂದೆ ಆಟೋ ಚಾಲಕರು ಹಲವು ಬಾರಿ ಬೇಡಿಕೆ ಇಟ್ಟಿದ್ದರು. ಮೂರು ತಿಂಗಳ ಹಿಂದೆಯೇ ಆಟೋ ಪ್ರಯಾಣ ದರ ಏರಿಕೆ ಮಾಡಲು ಒಪ್ಪಿಗೆ ಸಿಕ್ಕಿತ್ತು. ಆದರೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಇದಕ್ಕೆ ತಡೆ ನೀಡಿದ್ದರು.
ಈಗ ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಆಟೋ ಪ್ರಯಾಣ ದರವನ್ನು ಏರಿಕೆ ಮಾಡಲು ಅನುಮೋದನೆ ನೀಡಲಾಗಿದೆ. ಈಗಾಗಲೇ ನಗರದಲ್ಲಿ ಆಟೋ ಚಾಲಕರು ಸುಲಿಗೆ ಮಾಡುತ್ತಾರೆ ಎಂಬ ಆರೋಪಗಳಿವೆ. ಈಗ ಪ್ರಯಾಣ ದರ ಇನ್ನಷ್ಟು ಹೆಚ್ಚಾಗಿದ್ದು, ಜನರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ.