ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮಟ್ರೋ ಬಳಿಕ ಈಗ ಆಟೋರಿಕ್ಷಾ ಪ್ರಯಾಣ ದರ ಏರಿಕೆಯಾಗುತ್ತಿದೆ. ಆಗಸ್ಟ್ 1ರಿಂದಲೇ ಜಾರಿಗೆ ಬರುವಂತೆ ಕನಿಷ್ಠ ಪ್ರಯಾಣ ದರ 30 ರೂ.ನಿಂದ 36ಕ್ಕೆ ಏರಿಕೆಯಾಗಲಿದೆ.
ಆದರೆ ಆಟೋ ಪ್ರಯಾಣ ದರಗಳು ಶೇ. 20 ರಷ್ಟು ಏರಿಕೆಯಾಗುವ ದರಪಟ್ಟಿಯನ್ನು ಆಟೋ ಚಾಲಕರು ತಿರಸ್ಕಾರ ಮಾಡಿದ್ದಾರೆ. ಹಲವಾರು ಆಟೋ ಚಾಲಕರ ಒಕ್ಕೂಟಗಳು ಈ ದರ ಏರಿಕೆಯನ್ನು ಬಹಿಷ್ಕರಿಸಿವೆ. ಇತ್ತೀಚೆಗೆ ಹೊರಡಿಸಲಾದ ದರ ಪರಿಷ್ಕರಣಾ ಆದೇಶ ಅವೈಜ್ಞಾನಿಕ ಎಂದು ಟೀಕಿಸಿವೆ.
ಇನ್ನು ಈ ಕುರಿತು ಕೆಲ ಆಟೋ ಸಂಘಟನೆಗಳು ಕನಿಷ್ಠ ದರ 36 ರೂಪಾಯಿಗೆ ಮತ್ತು ಪ್ರತಿ ಕಿಮೀಗೆ 3 ರೂಪಾಯಿ ಹೆಚ್ಚಳ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿವೆ. 2 ಕಿ.ಮೀ.ಗೆ ಕನಿಷ್ಠ ದರವನ್ನು 40 ರೂಪಾಯಿಗಳಿಗೆ ಮತ್ತು 2 ಕಿ.ಮೀ. ನಂತರದ ಪ್ರಯಾಣಕ್ಕೆ ಪ್ರತಿ ಕಿಲೋಮೀಟರ್ಗೆ 20 ರೂಪಾಯಿಗಳನ್ನು ನಿಗದಿಪಡಿಸುವಂತೆ ಒತ್ತಾಯಿಸಿವೆ.
ಪ್ರತಿಭಟನೆಯ ಎಚ್ಚರಿಕೆ: ಸರ್ಕಾರದ ದರ ಪಟ್ಟಿಯನ್ನು ಮರುಪರಿಶೀಲಿಸಬೇಕು. ಅಲ್ಲಿಯ ತನಕ ಮೀಟರ್‌ಗಳ ಮರು ಮಾಪನಾಂಕ ನಿರ್ಣಯಿಸಬಾರದು ಎಂದು ಸಂಘಟನೆಗಳು ಒತ್ತಾಯಿಸಿವೆ. ಸರ್ಕಾರದ ದರಪಟ್ಟಿ ವಿರುದ್ದ ಚಾಲಕರು ಪ್ರತಿಭಟನೆಗೆ ಕರೆ ನೀಡಿದ್ದು, ಸುಮಾರು 50 ಸಾವಿರ ಚಾಲಕರು ಭಾಗವಹಿಸುವ ನಿರೀಕ್ಷೆ ಇದೆ.
ಬೆಂಗಳೂರು ನಗರದಲ್ಲಿ ಸುಮಾರು 3.6 ಲಕ್ಷ ಆಟೋರಿಕ್ಷಾಗಲಿದ್ದು, ಹಲವಾರು ಆಟೋಗಳಲ್ಲಿ ಅನಧಿಕೃತವಾಗಿ ಈಗಾಗಲೇ 40 ರೂಪಾಯಿ ಕನಿಷ್ಠ ಪ್ರಯಾಣ ದರ ಪಡೆಯಲಾಗುತ್ತಿದೆ. ಆದರೆ ಸಾರಿಗೆ ಇಲಾಖೆ ಸಭೆ ನಡೆಸಿ ಅಂತಿಮಗೊಳಿಸಿದ ಪಟ್ಟಿಯನ್ನು ಚಾಲಕರು ಒಪ್ಪುತ್ತಿಲ್ಲ.
ಪ್ರಯಾಣ ದರವನ್ನು ಈ ಹಿಂದೆ 2021ರ ಡಿಸೆಂಬರ್ನಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಮೂರೂವರೆ ವರ್ಷಗಳ ಬಳಿಕ ಈಗ ಮತ್ತೆ ದರ ಏರಿಕೆ ಮಾಡಲಾಗಿದೆ. ಆಟೋ ಗ್ಯಾಸ್ ಬೆಲೆ ಏರಿಕೆ, ದಿನನಿತ್ಯದ ವಸ್ತುಗಳ ಬೆಲೆ ಏರಿಕೆ, ಬಿಡಿಭಾಗಗಳ ಏರಿಕೆ ಗಮನದಲ್ಲಿಟ್ಟುಕೊಂಡು ಕನಿಷ್ಠ ದರವನ್ನು 40 ರೂಪಾಯಿಗೆ ನಿಗದಿ ಹಾಗೂ ಪ್ರತಿ 2 ಕಿ.ಮೀ.ಗೆ 20 ರೂಪಾಯಿ ಮಾಡಲು ಆಟೋ ಸಂಘಟನೆಗಳು ಒತ್ತಾಯಿಸಿವೆ.
ಸಾರಿಗೆ ಸಚಿವರು ದರ ಏರಿಕೆಯನ್ನು ಅಂತಿಮಗೊಳಿಸಲಾಗಿದ್ದು ಆಟೋ ಚಾಲಕರು ಅದನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ. ಈ ಏರಿಕೆ ಅವೈಜ್ಞಾನಿಕವಾಗಿದ್ದು, ಹಣದುಬ್ಬರವನ್ನು ಪರಿಗಣಿಸಿಲ್ಲ. ಮುಖ್ಯ ಕಾರ್ಯದರ್ಶಿಗಳು ಮತ್ತು ಬೆಂಗಳೂರು ನಗರ ಉಪ ಆಯುಕ್ತರಿಗೆ ನಾವು ಪತ್ರ ಬರೆದಿದ್ದೇವೆ, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆಟೋ ರಿಕ್ಷಾ ಚಾಲಕರ ಒಕ್ಕೂಟ ಹೇಳಿದೆ.
ಆಟೋ ಪ್ರಯಾಣ ದರ ಏರಿಕೆಯನ್ನು ಜನರು ಹೊರೆ ಎಂದು ಕೊಳ್ಳುತ್ತಿದ್ದಾರೆ. ಆದರೆ ಆಟೋ ಚಾಲಕರು ಈ ದರ ಏರಿಕೆಯು ಸಮಂಜಸವಾಗಿಲ್ಲ ಕನಿಷ್ಟದರವನ್ನು ಇನ್ನಷ್ಟು ಹೆಚ್ಚಿಸಬೇಕೆಂದು ಬೇಡಿಕೆ ಇಟ್ಟಿವೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕನಿಷ್ಠ ದರವನ್ನು 30 ರೂಪಾಯಿಗಳಿಂದ 36 ರೂಪಾಯಿಗಳಿಗೆ ಮಾತ್ರ ಏರಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.