ಕಬ್ಬು ಹೋರಾಟದ ಹಿನ್ನೆಲೆಯಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲರ ತುರ್ತು ಬೆಳಗಾವಿ ಭೇಟಿ

0
20

ಬೆಳಗಾವಿ: ಕಬ್ಬು ಬೆಲೆ ಹೆಚ್ಚಳಕ್ಕಾಗಿ ರೈತರು ನಡೆಸುತ್ತಿರುವ ತೀವ್ರ ಹೋರಾಟದ ಹಿನ್ನೆಲೆ ರಾಜ್ಯ ಸರ್ಕಾರ ಅಂತಿಮವಾಗಿ ಎಚ್ಚರಗೊಂಡಿದೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಇಂದು ಹುಬ್ಬಳ್ಳಿಯಿಂದ ತುರ್ತುವಾಗಿ ಬೆಳಗಾವಿಗೆ ದೌಡಾಯಿಸಿ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ದಿಢೀರ್ ಸಭೆ ನಡೆಸಿದರು. ಸಿಎಂ ಸಿದ್ದರಾಮಯ್ಯ ಅವರ ನೇರ ನಿರ್ದೇಶನ ಮೇರೆಗೆ ಸಚಿವ ಪಾಟೀಲ ಅವರು ಬೆಳಗಾವಿಗೆ ಆಗಮಿಸಿದ್ದು, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಸಕ್ಕರೆ ಆಯುಕ್ತರೊಂದಿಗೆ ಗೌಪ್ಯ ಸ್ಥಳದಲ್ಲಿ ಚರ್ಚೆ ನಡೆಸಿದ್ದಾರೆ.

ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ, ಮುತ್ತಿಗೆ ಹಾಗೂ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸಭೆಯ ಸ್ಥಳ ಮತ್ತು ವೇಳೆಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ, ಸಚಿವ ಪಾಟೀಲ ಅವರು ಡಿಸಿ ಜೊತೆಗಿನ ಮಾತುಕತೆಯ ನಂತರ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಲಿದ್ದಾರೆ. ಕಬ್ಬು ಬೆಳೆಗಾರರ ಬೇಡಿಕೆ – ಕ್ವಿಂಟಲ್‌ಗೆ ₹3,500 ದರ – ಕುರಿತಂತೆ ಸರ್ಕಾರ ತುರ್ತು ನಿರ್ಧಾರ ಕೈಗೊಳ್ಳುವ ಸಾಧ್ಯತೆಯೂ ವ್ಯಕ್ತವಾಗಿದೆ.

ಬೆಳಗಾವಿ ಮತ್ತು ಮೂಡಲಗಿ ಪ್ರದೇಶದಲ್ಲಿ ಕಳೆದ ಏಳು ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟ ರಾಜ್ಯಮಟ್ಟದ ಚರ್ಚೆಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ, ಸಚಿವರ ಈ ತುರ್ತು ಭೇಟಿ ಸರ್ಕಾರದ ನಿಲುವಿನ ಬದಲಾವಣೆಯ ಸೂಚನೆ ಎಂದು ವಲಯಗಳಲ್ಲಿ ಮಾತು ಕೇಳಿಬರುತ್ತಿದೆ.

Previous articleಚುನಾವಣಾ ನೀತಿ, ವಿಧಾನಗಳನ್ನು ರಾಹುಲ್ ಗಾಂಧಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ
Next articleರಾಷ್ಟ್ರಪತಿ ಮುರ್ಮುರನ್ನು ಭೇಟಿಯಾದ ವಿಶ್ವಕಪ್ ವಿಜೇತ ಭಾರತೀಯ ಮಹಿಳಾ ತಂಡ

LEAVE A REPLY

Please enter your comment!
Please enter your name here