ಬೆಳಗಾವಿ: ಪತಿಯೊಬ್ಬನ ಪರಸ್ತ್ರೀ ವ್ಯಾಮೋಹವನ್ನು ಪ್ರಶ್ನಿಸಿದ್ದಕ್ಕೆ ಆತನ ಪತ್ನಿ ಮತ್ತು ಅತ್ತೆಯ ಮೇಲೆ ಸಾರ್ವಜನಿಕವಾಗಿ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಂಬಲವಾಡ ಗ್ರಾಮದಲ್ಲಿ ನಡೆದಿದೆ.
ನಡುರಸ್ತೆಯಲ್ಲಿ ತಾಯಿ-ಮಗಳ ಮೇಲೆ ನಡೆದ ಈ ರಾಕ್ಷಸೀ ಕೃತ್ಯಕ್ಕೆ ಗ್ರಾಮಸ್ಥರು ಮೂಕ ಪ್ರೇಕ್ಷಕರಾಗಿದ್ದು, ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.
ಸಂಸಾರದಲ್ಲಿ ಹುಳಿ ಹಿಂಡಿದ ಅಕ್ರಮ ಸಂಬಂಧ: ಬೆಂಬಲವಾಡ ಗ್ರಾಮದ ರಾಕೇಶ್ ಹೊಸಮನಿ ಮತ್ತು ರಾಜಶ್ರೀ ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗುವೂ ಇದೆ.
ಆದರೆ, ಮದುವೆಗೂ ಮುನ್ನವೇ ರಾಕೇಶ್‌ಗೆ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದ್ದು, ಮದುವೆಯಾದ ಕೆಲವೇ ದಿನಗಳಲ್ಲಿ ಈ ಸತ್ಯ ರಾಜಶ್ರೀಗೆ ತಿಳಿದುಬಂದಿದೆ.
ಈ ವಿಚಾರವಾಗಿ ಪತಿ-ಪತ್ನಿ ನಡುವೆ ನಿರಂತರ ಕಲಹಗಳು ನಡೆಯುತ್ತಿದ್ದವು. ಕಿರುಕುಳ ತಾಳಲಾರದೆ ರಾಜಶ್ರೀ ಈ ಹಿಂದೆ ತವರು ಮನೆ ಸೇರಿದ್ದರು. ಹಿರಿಯರ ಮಧ್ಯಸ್ಥಿಕೆಯಲ್ಲಿ ರಾಜಿ ಮಾಡಿಕೊಂಡು ಮತ್ತೆ ಗಂಡನ ಮನೆಗೆ ಬಂದಿದ್ದರೂ, ಪತಿಯ ನಡತೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.
ಹಬ್ಬಕ್ಕೆ ಕರೆಸಿ, ಹಲ್ಲೆ ನಡೆಸಿದ ಪತಿ ಮತ್ತು ಕುಟುಂಬ: ದೀಪಾವಳಿ ಹಬ್ಬದ ನೆಪದಲ್ಲಿ ಅತ್ತೆ-ಮಾವ ರಾಜಶ್ರೀಯನ್ನು ಮನೆಗೆ ಕರೆಸಿಕೊಂಡಿದ್ದಾರೆ. ಸಂಸಾರ ಸರಿಹೋಗಬಹುದೆಂಬ ಆಸೆಯಿಂದ ತಾಯಿಯೊಂದಿಗೆ ಗಂಡನ ಮನೆಗೆ ಬಂದ ರಾಜಶ್ರೀ, ಪತಿಯ ಅಕ್ರಮ ಸಂಬಂಧದ ವಿಷಯವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ. ಇದರಿಂದ ಕುಪಿತಗೊಂಡ ಪತಿ ರಾಕೇಶ್, ಆತನ ಸಹೋದರ ಮತ್ತು ಕುಟುಂಬಸ್ಥರು ಸೇರಿ ರಾಜಶ್ರೀ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ನಡುರಸ್ತೆಯಲ್ಲಿ ಆಕೆಯನ್ನು ಎಳೆದಾಡಿ, ಕಾಲಿನಿಂದ ಒದ್ದು, ಮುಖಕ್ಕೆ ಮನಸೋಇಚ್ಛೆ ಥಳಿಸಿದ್ದಾರೆ. ಇದನ್ನು ತಡೆಯಲು ಬಂದ ರಾಜಶ್ರೀಯ ತಾಯಿಯ ಮೇಲೆಯೂ ಈ ಗುಂಪು ಕ್ರೌರ್ಯ ಮೆರೆದಿದೆ. ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಸ್ಪತ್ರೆಗೆ ದಾಖಲು, ಕೊಲೆ ಯತ್ನ ಪ್ರಕರಣ: ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ತಾಯಿ-ಮಗಳಿಬ್ಬರನ್ನೂ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಕುರಿತು ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಪೊಲೀಸರು ಬರುವಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿರುವ ಪತಿ ರಾಕೇಶ್, ರಾಜಶ್ರೀ ಮತ್ತು ಅವರ ಕಡೆಯವರು ಗುಂಪು ಕಟ್ಟಿಕೊಂಡು ಬಂದು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.


























