ಬೆಳಗಾವಿ ನಾಯಕರು ‘ಸೈಲೆಂಟ್’, ಸಚಿವರ ಸಭೆ ‘ಸೀಕ್ರೆಟ್’! ರೈತರ ಆಕ್ರೋಶದ ಕಟ್ಟೆ ಸ್ಫೋಟ!

0
22

ಬೆಳಗಾವಿ: ಕಬ್ಬಿಗೆ ನ್ಯಾಯಯುತ ದರ ನಿಗದಿಪಡಿಸುವಂತೆ ಆಗ್ರಹಿಸಿ ಕಳೆದ ಎಂಟು ದಿನಗಳಿಂದ ಅನ್ನದಾತರು ನಡೆಸುತ್ತಿರುವ ಅಹೋರಾತ್ರಿ ಧರಣಿ ತೀವ್ರಗೊಂಡಿದೆ. ಆದರೆ, ರೈತರ ಕೂಗು ಜಿಲ್ಲೆಯ ಘಟಾನುಘಟಿ ನಾಯಕರಿಗೆ ಕೇಳಿಸುತ್ತಿಲ್ಲ.

ಆಡಳಿತ-ವಿಪಕ್ಷಗಳ ನಾಯಕರು ಜಿಲ್ಲೆಯಲ್ಲೇ ಇದ್ದರೂ, ಪ್ರತಿಭಟನಾ ಸ್ಥಳದತ್ತ ಸುಳಿಯದೆ ಮೌನಕ್ಕೆ ಶರಣಾಗಿರುವುದು ರೈತರ ಆಕ್ರೋಶದ ಬೆಂಕಿಗೆ ತುಪ್ಪ ಸುರಿದಿದೆ.

ಕಂಡೂ ಕಾಣದಂತಿರುವ ಜನಪ್ರತಿನಿಧಿಗಳು: ಬೆಳಗಾವಿ ರಾಜಕೀಯದ ಶಕ್ತಿ ಕೇಂದ್ರಗಳೆಂದೇ ಬಿಂಬಿತವಾಗಿರುವ ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಂಸದರಾದ ರಮೇಶ್ ಕತ್ತಿ, ಜೊಲ್ಲೆ ದಂಪತಿ, ಪ್ರಭಾಕರ್ ಕೋರೆ ಸೇರಿದಂತೆ ಬಹುತೇಕ ಎಲ್ಲಾ ಪ್ರಭಾವಿ ನಾಯಕರು ರೈತರ ಹೋರಾಟದ ಬಗ್ಗೆ ತುಟಿ ಬಿಚ್ಚಿಲ್ಲ.

“ಸಣ್ಣ ಸಹಕಾರಿ ಬ್ಯಾಂಕ್ ಚುನಾವಣೆಗೆಲ್ಲಾ ಒಂದಾಗುವ ಈ ನಾಯಕರಿಗೆ, ನಮ್ಮ ಜೀವನ್ಮರಣದ ಪ್ರಶ್ನೆ ಕಾಣುತ್ತಿಲ್ಲವೇ?” ಎಂದು ರೈತರು ಹಿಡಿಶಾಪ ಹಾಕುತ್ತಿದ್ದಾರೆ. ನಾಯಕರ ಈ ನಿರ್ಲಕ್ಷ್ಯ ಧೋರಣೆಯೇ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಕಾರಣವಾಗಿದೆ.

ತೆರೆಮರೆಯಲ್ಲಿ ಸಕ್ಕರೆ ಸಚಿವರ ಗೌಪ್ಯ ಸಭೆ: ರೈತರ ಹೋರಾಟದ ಕಾವು ಹೆಚ್ಚಾಗುತ್ತಿದ್ದಂತೆ, ಕೊನೆಗೂ ಎಚ್ಚೆತ್ತ ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಬೆಳಗಾವಿಗೆ ದೌಡಾಯಿಸಿದ್ದಾರೆ. ಆದರೆ, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವ ಬದಲು, ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆ.

ಸಭೆಯ ನಂತರ ಮುಖ್ಯಮಂತ್ರಿಗಳಿಗೆ ಕರೆ ಮಾಡಿ, “ಸಕ್ಕರೆ ಕಾರ್ಖಾನೆಯವರು ಹೆಚ್ಚುವರಿ ಹಣ ಕೊಡಲು ಒಪ್ಪುತ್ತಿಲ್ಲ, ಈಗ ನೀಡುತ್ತಿರುವುದೇ ಹೆಚ್ಚು ಎನ್ನುತ್ತಿದ್ದಾರೆ,” ಎಂದು ಮಾಹಿತಿ ನೀಡಿದ್ದಾರೆ. ಇದಕ್ಕೆ ಸಿಎಂ ಗರಂ ಆಗಿದ್ದು, “ಮೊದಲು ರೈತರನ್ನು ಮನವೊಲಿಸಿ, ಪರಿಸ್ಥಿತಿ ಸರಿಪಡಿಸಿ ಬನ್ನಿ,” ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ರೈತರ ಆಕ್ರೋಶದ ಹಿನ್ನೆಲೆಯಲ್ಲಿ, ಪ್ರತಿಭಟನಾ ಸ್ಥಳಕ್ಕೆ ತೆರಳದಂತೆ ಸಚಿವರಿಗೆ ಸಿಎಂ ಸಲಹೆ ನೀಡಿದ್ದಾರೆ ಎಂದೂ ತಿಳಿದುಬಂದಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ, ನಾಳೆ (ನ. 7) ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾರ್ಖಾನೆ ಮಾಲೀಕರು ಮತ್ತು ಸಚಿವರ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಈ ಸಭೆಯ ತೀರ್ಮಾನದ ಮೇಲೆ ರೈತರ ಮುಂದಿನ ನಡೆ ನಿರ್ಧಾರವಾಗಲಿದೆ.

Previous articleಸ್ಪೀಕರ್ ಹಾಗೂ ಕಾಂಗ್ರೆಸ್‌ನಿಂದ ಹಾರಿಕೆಯ ಉತ್ತರ
Next articleಇ-ಖಾತಾ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಹೈರಾಣು: ಶಾಸಕ ಕಾಮತ್ ಆಕ್ರೋಶ

LEAVE A REPLY

Please enter your comment!
Please enter your name here