Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿ: ಬೆಳಗ್ಗೆ ಅಮ್ಮನಿಲ್ಲ, ಸಂಜೆ ಅಪ್ಪನಿಲ್ಲ; ಒಂದೇ ದಿನ 3 ಕಂದಮ್ಮಗಳನ್ನ ತಬ್ಬಲಿಯಾಗಿಸಿದ ಕ್ರೂರ ವಿಧಿ!

ಬೆಳಗಾವಿ: ಬೆಳಗ್ಗೆ ಅಮ್ಮನಿಲ್ಲ, ಸಂಜೆ ಅಪ್ಪನಿಲ್ಲ; ಒಂದೇ ದಿನ 3 ಕಂದಮ್ಮಗಳನ್ನ ತಬ್ಬಲಿಯಾಗಿಸಿದ ಕ್ರೂರ ವಿಧಿ!

0
54

ವಿಧಿ ಎಷ್ಟೊಂದು ಕ್ರೂರವಾಗಿರುತ್ತದೆ ಎಂಬುದಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿರುವ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿ. ಬೆಳಗ್ಗೆ ಎದ್ದು ‘ಅಮ್ಮ’ ಎಂದು ಕರೆದ ಮುಗ್ಧ ಕಂದಮ್ಮಗಳಿಗೆ ಸಂಜೆಯಾಗುವಷ್ಟರಲ್ಲಿ ‘ಅಪ್ಪ’ನೂ ಇಲ್ಲದಂತಾಗಿದೆ. ಕೇವಲ ಕೆಲವೇ ಗಂಟೆಗಳ ಅಂತರದಲ್ಲಿ ಗಂಡ-ಹೆಂಡತಿ ಇಬ್ಬರೂ ಸಾವನ್ನಪ್ಪಿದ್ದು, ಅವರ ಮೂರು ಮುದ್ದಾದ ಮಕ್ಕಳು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.

ಏನಿದು ಕರುಣಾಜನಕ ದುರಂತ?: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಈ ಕರುಳು ಹಿಂಡುವ ಘಟನೆ ಸಂಭವಿಸಿದೆ 30 ವರ್ಷದ ಮಧುರಾ ಹಾಗೂ 36 ವರ್ಷದ ಕರೆಪ್ಪ ಮಾದರ ದಂಪತಿಯೇ ಪ್ರಾಣ ಕಳೆದುಕೊಂಡ ದುರ್ದೈವಿಗಳು.

ಮಧುರಾ ಅವರು ಕಳೆದ ಹಲವು ವರ್ಷಗಳಿಂದ ತೀವ್ರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದರು  ಭಾನುವಾರ ನೋವು ತಾಳಲಾರದೆ, ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿದ್ದ ವಿಷ ಸೇವಿಸಿದ್ದರು. ತಕ್ಷಣವೇ ಅವರನ್ನು ಬೈಲಹೊಂಗಲ ಆಸ್ಪತ್ರೆಗೆ, ಅಲ್ಲಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು.

ಪತ್ನಿಯ ನೋಡಲು ಹೋದವನು ಮರಳಿ ಬರಲೇ ಇಲ್ಲ!: ಮತ್ತೊಂದೆಡೆ, ಆಸ್ಪತ್ರೆಯಲ್ಲಿ ಹೆಂಡತಿ ಮೃತಪಟ್ಟ ಸುದ್ದಿ ಕೇಳಿ ಪತಿ ಕರೆಪ್ಪರಿಗೆ ಆಕಾಶವೇ ಕಳಚಿಬಿದ್ದಂತಾಯಿತು. ಪತ್ನಿಯ ಮುಖ ನೋಡಲು ಆಘಾತ ಹಾಗೂ ಗಡಿಬಿಡಿಯಲ್ಲಿ ಬೈಕ್ ಏರಿ ಬೆಳಗಾವಿಯತ್ತ ಹೊರಟರು. ಆದರೆ, ಅರವಳ್ಳಿ ಕ್ರಾಸ್ ಬಳಿ ಬರುತ್ತಿದ್ದಂತೆ ಧಾರವಾಡ ಕಡೆಯಿಂದ ಅತಿವೇಗವಾಗಿ ಬಂದ ಕೆಎಸ್ಆರ್​ಟಿಸಿ ಬಸ್ ಕರೆಪ್ಪ ಅವರ ಬೈಕ್ ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ, ರಕ್ತದ ಮಡುವಿನಲ್ಲಿ ಒದ್ದಾಡಿದ ಕರೆಪ್ಪ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಒಂದೇ ದಿನ ಹೆಂಡತಿ ಆಸ್ಪತ್ರೆಯಲ್ಲಿ, ಗಂಡ ನಡುರಸ್ತೆಯಲ್ಲಿ ಹೆಣವಾಗಿದ್ದಾರೆ.