ಬೆಳಗಾವಿ: ರಾಜ್ಯದ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದ ಮತ್ತು ಅನಧಿಕೃತ ಎಂದು ಪರಿಗಣಿಸಲ್ಪಟ್ಟಿರುವ ಬಡಾವಣೆಗಳ ಸ್ವತ್ತುಗಳಿಗೆ ಅತಿ ಮುಖ್ಯವಾದ ಎ-ಖಾತಾ ನೀಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿಧಾನಪರಿಷತ್‌ನಲ್ಲಿ ಪ್ರಕಟಿಸಿದರು.
ಕಾಂಗ್ರೆಸ್‌ನ ರಾಮೋಜಿಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಕ್ಷಮ ಪ್ರಾಧಿಕಾರದ ಅನುಮೋದನೆ ಇಲ್ಲದ ವಿನ್ಯಾಸಗಳು ಮತ್ತು ವಿವಿಧ ಯೋಜನೆಗಳಲ್ಲಿ ಮಂಜೂರಾದ ನಿವೇಶನಗಳಿಗೆ ಪ್ರಸ್ತುತ ಬಿ-ಖಾತಾ ನೀಡಲಾಗುತ್ತಿದ್ದು, ಈ ಸ್ವತ್ತುಗಳನ್ನು ಈಗಾಗಲೇ ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗಿದೆ.
ಹಾಗೇ ಈ ಸ್ವತ್ತುಗಳ ಮಾಲೀಕರಿಂದ ಎ-ಖಾತಾ ನೀಡುವಂತೆ ತೀವ್ರ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಈ ವಿಷಯವನ್ನು ಸಂಪುಟದ ಮುಂದಿಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಟ್ಟಡ ಪರವಾನಗಿ ಸ್ಥಿತಿ ಸ್ಪಷ್ಟಪಡಿಸಿದ ರಹೀಂ ಖಾನ್: ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದ ವಿನ್ಯಾಸಗಳು, ಗ್ರಾಮಠಾಣಾ ಪ್ರದೇಶಗಳು ಮತ್ತು ವಿವಿಧ ಯೋಜನೆಯಡಿ ಮಂಜೂರಾದ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲಾಗುತ್ತಿದೆ.
ಇದರಿಂದಾಗಿ ಭೂ-ಪರಿವರ್ತನೆ ಮತ್ತು ಕಟ್ಟಡ ನಿರ್ಮಾಣಕ್ಕೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಎಂದು ತಿಳಿಸಿದರು.
ಅಲ್ಲದೆ, ಅಧಿಕೃತ ನಿವೇಶನ ಮತ್ತು ಕಟ್ಟಡಗಳಿಗೆ ನಮೂನೆ -3 ನೀಡಲಾಗುತ್ತಿದ್ದು, ಅನುಮೋದನೆ ಪಡೆಯದ ಸ್ವತ್ತುಗಳಿಗೆ ನಮೂನೆ 3-ಎ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
15 ದಿನಗಳಲ್ಲಿ ಕಟ್ಟಡ ಪರವಾನಗಿ: ಖಾತಾ ಪ್ರಕ್ರಿಯೆಯ ಕುರಿತು ವಿವರ ನೀಡಿದ ಸಚಿವರು, ಕಟ್ಟಡ ಪರವಾನಗಿ ಕೋರಿ ವಾಸ್ತುಶಿಲ್ಪ ಶಾಸ್ತ್ರಜ್ಞರ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಪರವಾನಗಿ ನೀಡಲಾಗುತ್ತಿದೆ.
ಖಾತಾ ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಕಾರ್ಯವಿಧಾನವನ್ನು (SOP) ಹೊರಡಿಸಲಾಗಿದೆ ಎಂದು ಸಚಿವ ರಹೀಂ ಖಾನ್ ತಿಳಿಸಿದರು.
ಒಟ್ಟಾರೆಯಾಗಿ, ರಾಜ್ಯದಲ್ಲಿ ಲಕ್ಷಾಂತರ ಅನಧಿಕೃತ ನಿವೇಶನದಾರರ ಮಹತ್ವದ ಬೇಡಿಕೆಯಾದ ಎ-ಖಾತಾವನ್ನು ನೀಡುವ ಬಗ್ಗೆ ರಾಜ್ಯ ಸರ್ಕಾರ ಶೀಘ್ರದಲ್ಲಿಯೇ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.






















