ಏಷ್ಯಾ ಕಪ್ 2025ರ ಅಂತಿಮ ಹಂತಕ್ಕೆ ತಲುಪಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ನಾಳೆ ಸೆಪ್ಟೆಂಬರ್ 28 ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಪ್ಗಾಗಿ ಕಾದಾಟ ನಡೆಸಲಿವೆ. 41 ವರ್ಷಗಳ ನಂತರ ಏಷ್ಯಾ ಕಪ್ ಫೈನಲ್‌ನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿವೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಟೂರ್ನಿಯಲ್ಲಿ ಅಜೇಯವಾಗಿ ಉಳಿದು ಅಬ್ಬರಿಸುತ್ತಿದ್ದರೆ, ಪಾಕಿಸ್ತಾನ ಸೂಪರ್ ಫೋರ್ ಹಂತದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಗಾಯದ ಆತಂಕದಲ್ಲಿ ಟೀಂ ಇಂಡಿಯಾ: ಫೈನಲ್ ಮಹಾಸಮರಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯದ ಆತಂಕ ಎದುರಾಗಿದೆ. ತಂಡದ ಪ್ರಮುಖ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಗಾಯಗೊಂಡಿದ್ದು, ಫೈನಲ್ ಪಂದ್ಯದಲ್ಲಿ ಪಾಲ್ಗೊಳ್ಳುವಿಕೆ ಬಗ್ಗೆ ಅನಿಶ್ಚಿತತೆ ಮನೆ ಮಾಡಿದೆ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದರೂ, ಸ್ನಾಯು ಸೆಳೆತದಿಂದಾಗಿ ಮೈದಾನದಿಂದ ಹೊರನಡೆಯಬೇಕಾಯಿತು. ಅವರ ಗಾಯದ ಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ ಎಂದು ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ತಿಳಿಸಿದ್ದಾರೆ.
“ಹಾರ್ದಿಕ್ ಅವರನ್ನು ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಿಗ್ಗೆ ಪರೀಕ್ಷಿಸಲಾಗುವುದು. ನಂತರ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಮೊರ್ಕೆಲ್ ಹೇಳಿದ್ದಾರೆ. ಮತ್ತೊಂದೆಡೆ, ಅಭಿಷೇಕ್ ಶರ್ಮಾ ಬ್ಯಾಟಿಂಗ್‌ನಲ್ಲಿ 31 ಎಸೆತಗಳಲ್ಲಿ 61 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರೂ, ಅವರೂ ಸ್ನಾಯು ಸೆಳೆತದಿಂದ ಬಳಲಿದ್ದು ಮೈದಾನದಿಂದ ಹೊರನಡೆದರು. ಆದರೆ, ಅಭಿಷೇಕ್ ಸ್ಥಿತಿ ಉತ್ತಮವಾಗಿದೆ ಎಂದು ಮೊರ್ಕೆಲ್ ಭರವಸೆ ನೀಡಿದ್ದಾರೆ.
ಗೆಲುವು ಒಂದು ಎಚ್ಚರಿಕೆಯ ಕರೆ!: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿತು. ಈ ಗೆಲುವು ತಂಡಕ್ಕೆ ಒಂದು ಎಚ್ಚರಿಕೆಯ ಕರೆ ಎಂದು ಮೊರ್ಕೆಲ್ ಹೇಳಿದ್ದಾರೆ. “ತಂಡ ಇದುವರೆಗೆ ಸಂಪೂರ್ಣವಾಗಿ ಉತ್ತಮ ಪ್ರದರ್ಶನ ನೀಡಿಲ್ಲ” ಎಂದು ಅವರು ಒಪ್ಪಿಕೊಂಡಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲಿ ಕಠಿಣ ಪರಿಸ್ಥಿತಿಗಳಲ್ಲಿ ಸ್ಟ್ರೈಕ್ ರೊಟೇಟ್ ಮಾಡುವುದು ಮತ್ತು ಬೌಲಿಂಗ್ ವಿಭಾಗದಲ್ಲಿ ಮೊದಲ 10 ಓವರ್‌ಗಳಲ್ಲಿ ನಿಖರತೆ ಹಾಗೂ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸುಧಾರಿಸಬೇಕು ಎಂದು ಮಾರ್ಕೆಲ್ ಅಭಿಪ್ರಾಯಪಟ್ಟಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ಯಾರ್ಕರ್‌ನಂತಹ ವೈವಿಧ್ಯಗಳನ್ನು ಸ್ಮಾರ್ಟ್ ಆಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಫೈನಲ್‌ಗೆ ಮುನ್ನ ವಿಶ್ರಾಂತಿ: ಕಠಿಣ ಪಂದ್ಯಗಳ ನಂತರ ಫೈನಲ್‌ಗೆ ಮುನ್ನ ತಂಡಕ್ಕೆ ಒಂದು ದಿನ ವಿಶ್ರಾಂತಿ ನೀಡಲಾಗಿದೆ. ಶನಿವಾರ ಯಾವುದೇ ತರಬೇತಿ ಇರುವುದಿಲ್ಲ. ಬದಲಿಗೆ ವೈಯಕ್ತಿಕ ಪೂಲ್ ಸೆಷನ್‌ಗಳು ಮತ್ತು ಚೇತರಿಕೆ ಕೆಲಸ ಮಾತ್ರ ನಡೆಯಲಿದೆ.
ಚೇತರಿಸಿಕೊಳ್ಳಲು ನಿದ್ರೆ ಮತ್ತು ಕಾಲಿಗೆ ವಿಶ್ರಾಂತಿ ನೀಡುವುದು ಅತ್ಯುತ್ತಮ ಮಾರ್ಗ ಎಂದು ಮಾರ್ಕೆಲ್ ಹೇಳಿದ್ದಾರೆ. ಭಾನುವಾರದ ಮಹಾ ಕದನಕ್ಕೆ ಆಟಗಾರರು ಮಾನಸಿಕವಾಗಿ ಸಿದ್ಧರಾಗುತ್ತಿದ್ದು, ಸ್ಮಾರ್ಟ್ ಆಗಿ ಆಡುವುದು ಮುಖ್ಯವಾಗಲಿದೆ ಎಂದಿದ್ದಾರೆ.
ಭಾರತ vs ಪಾಕಿಸ್ತಾನ; ಫೈನಲ್ ಕುತೂಹಲ: ಹಾಲಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಎರಡು ಬಾರಿ ಮಣಿಸಿರುವ ಭಾರತ ಆತ್ಮವಿಶ್ವಾಸದಲ್ಲಿದೆ. ಸೂಪರ್ ಫೋರ್ ಶ್ರೇಯಾಂಕದಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಸೋಲಿನೊಂದಿಗೆ ಎರಡನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಬಲಿಷ್ಠವಾಗಿದ್ದು, ಫೈನಲ್ ಪಂದ್ಯ ರೋಚಕವಾಗಿರುವ ನಿರೀಕ್ಷೆಯಿದೆ. ಗಾಯಗೊಂಡ ಆಟಗಾರರ ಗೈರುಹಾಜರಿ ಭಾರತದ ಮೇಲೆ ಪರಿಣಾಮ ಬೀರುತ್ತದೆಯೇ ಅಥವಾ ಟೀಂ ಇಂಡಿಯಾ ಅಜೇಯ ಓಟವನ್ನು ಮುಂದುವರೆಸುತ್ತದೆಯೇ ಎಂಬುದನ್ನು ಕಾದು ನೋಡಬೇಕು.