ಹುಬ್ಬಳ್ಳಿ ಇನ್ಫೋಸಿಸ್‌ನಲ್ಲಿ ಎಐ, ಸೈಬರ್ ಭದ್ರತೆ ಕೇಂದ್ರ ಆರಂಭ

0
64

ಹುಬ್ಬಳ್ಳಿ: ಮುಂದಿನ ಪೀಳಿಗೆಯ ಡಿಜಿಟಲ್ ಸೇವೆಗಳು ಮತ್ತು ಸಲಹಾ (ನೆಕ್ಸ್ಟ್‌ ಜನರೇಶನ್ ಡಿಜಿಟಲ್ ಸರ್ವೀಸಸ್ ಮತ್ತು ಕನ್ಸಲಿಂಗ್) ಕ್ಷೇತ್ರದಲ್ಲಿ ಜಾಗತಿಕ ನಾಯಕನ ಸ್ಥಾನದಲ್ಲಿರುವ ಇನ್ಫೋಸಿಸ್ (NSE, BSE, NYSE INFY) ಇಂದು ತನ್ನ ಹುಬ್ಬಳ್ಳಿಯಲ್ಲಿರುವ ಅಭಿವೃದ್ಧಿ ಕೇಂದ್ರ (ಡಿಸಿ)ದಲ್ಲಿ ಇದೇ ಮೊದಲ ಬಾರಿಗೆ ಇನ್ಫೋಸಿಸ್ ಸೆಂಟರ್ ಫಾರ್ ಅಡ್ವಾನ್ಸ್ ಎಐ, ಸೈಬರ್ ಸೆಕ್ಯುರಿಟಿ ಅಂಡ್ ಸ್ಪೇಸ್ ಟೆಕ್ನಾಲಾಜಿಯನ್ನು ಆರಂಭಿಸಿದೆ.

ಇನ್ಫೋಸಿಸ್ ಲಿವಿಂಗ್ ಲ್ಯಾಬ್‍ನ ಭಾಗವಾಗಿರುವ ಈ ಹೊಸ ಕೇಂದ್ರವು ಜಾಗತಿಕವಾಗಿ 12 ಕ್ಕೂ ಹೆಚ್ಚು ಸ್ಥಾಪಿತ ಕೇಂದ್ರಗಳ ಜಾಲವನ್ನು ಹೊಂದಿದೆ. ಮತ್ತು ಈ ಜಾಲದಲ್ಲಿರುವ ಗ್ರಾಹಕರು ನಾವೀನ್ಯತೆಯನ್ನು ವೇಗಗೊಳಿಸಲು ಮತ್ತು ತಮ್ಮ ವ್ಯವಹಾರಗಳ ಭವಿಷ್ಯಕ್ಕೆ ಪೂರಕವಾಗಿ ಉದಯೋನ್ಮುಖ ಅಂದರೆ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಪೂರಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಈ ಕೇಂದ್ರವು ಹುಬ್ಬಳ್ಳಿಯನ್ನು ಇನ್ಫೋಸಿಸ್‍ನ ಪ್ರಮುಖ ತಂತ್ರಜ್ಞಾನವನ್ನಾಗಿ ರೂಪಿಸುತ್ತದೆ. ಎಐ, ಕೌಡ್ ಕಂಪ್ಯೂಟಿಂಗ್, ಸೈಬರ್ ಭದ್ರತೆ. ಎಂಜಿನಿಯರಿಂಗ್ ಸೇವೆಗಳು ಮತ್ತು ಎಸ್‍ಎಪಿ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಂತಹ ಸುಧಾರಿತ ಡಿಜಿಟಲ್ ಪರಿಹಾರಗಳ ಕ್ಷೇತ್ರದಲ್ಲಿ ತನ್ನದೇ ಆದ ಪರಿಣತಿಯನ್ನು ಹೊಂದಿದೆ.

ಈ ಕೇಂದ್ರವು ಉತ್ಪಾದನೆ, ಹಣಕಾಸು ಸೇವೆಗಳು. ರೀಟೇಲ್ ಬ್ಯುಸಿನೆಸ್ ಮತ್ತು ಆರೋಗ್ಯ ರಕ್ಷಣೆ ಸೇರಿದಂತೆ ಕೈಗಾರಿಕೆಗಳಾದ್ಯಂತ ಜಾಗತಿಕವಾಗಿ ಗ್ರಾಹಕರಿಗೆ ತನ್ನ ಸೇವೆಯನ್ನು ಸಲ್ಲಿಸಲಿದೆ.

ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು, ಮೂಲಸೌಕರ್ಯಗಳ ಸಚಿವ ಎಂ.ಬಿ. ಪಾಟೀಲ್, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಕೇಂದ್ರವನ್ನು ಉದ್ಘಾಟಿಸಿದರು.

ವಿಯೆಟ್ನಾಂ, ಯುರೋಪ್ ದೇಶಗಳ ಜತೆಗೆ ಸ್ಫರ್ಧೆ: “ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು, ಯುವಕರಿದ್ದಾರೆ. ಆದರೆ, ಸಂವಹನ ಕೌಶಲದ ಕೊರತೆಯಿಂದ ಅವರಲ್ಲಿ ಅಡಗಿರುವ ಅಗಾಧ ಪ್ರತಿಭೆ ಜಗತ್ತಿಗೆ ಪರಿಚಯವಾಗುತ್ತಿಲ್ಲ. ಉತ್ತಮ ಸಂವಹನ ಕೌಶಲ ರೂಢಿಸಿಕೊಂಡಲ್ಲಿ ನೆರೆಯ ರಾಜ್ಯವಲ್ಲ. ವಿಯೆಟ್ನಾಂ, ಯುರೋಪ್ ದೇಶಗಳ ಜೊತೆಗೆ ಸ್ಫರ್ಧೆ ಮಾಡಬಹುದು” ಎಂದು ಪ್ರಿಯಾಂಕ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

“23 ಕಂಪನಿಗಳು ಉತ್ತರ ಕರ್ನಾಟಕ ಭಾಗದಲ್ಲಿ ಸ್ಥಾಪನೆಯಾಗಿವೆ. ಐಟಿ, ಎಂಬೆಡೆಡ್ ಸೇರಿ 40ಕ್ಕೂ ಹೆಚ್ಚು ಕಂಪನಿಗಳು ಸ್ಥಾಪನೆಗೆ ಮುಂದೆ ಬಂದಿವೆ. ಮಲ್ಟಿ ಸೆಕ್ಟರ್‌ನಲ್ಲಿ ಹೂಡಿಕೆಗೂ ಉತ್ಸಾಹ ತೋರುತ್ತಿದ್ದಾರೆ. ಕರ್ನಾಟಕದಲ್ಲಿ ಒಂದು ಸಾವಿರ ಸ್ಟಾರ್ಟ್ ಅಪ್ ಆರಂಭವಾಗಿದೆ. ಈ ಪೈಕಿ ಹುಬ್ಬಳ್ಳಿಯಲ್ಲಿ 120 ಸ್ಟಾರ್ಟ್ ಅಪ್ ಕಾರ್ಯಾರಂಭ ಮಾಡಿವೆ. ಹೀಗಿರುವಾಗ ನಮ್ಮವರು ಯಾವುದಲ್ಲಿ ಕಡಿಮೆ ಇದ್ದಾರೆ. ಸಂವಹ ಕೌಶಲ ಬೆಳೆಸಿಕೊಂಡರೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ” ಎಂದರು.

“ಹುಬ್ಬಳ್ಳಿಯ ಇನ್ಫೋಸಿಸ್ ಡೆವಲಪ್ಮೆಂಟ್ ಸೆಂಟರ್ ಈಗಾಗಲೇ ಸಾವಿರಾರು ಉದ್ಯೋಗ ಸೃಷ್ಟಿಸಿದೆ. ಇದು ಹುಬ್ಬಳ್ಳಿಗಷ್ಟೇ ಸೀಮಿತವಾಗಿಲ್ಲ. ಕಲಿಕಾ ಗುಣಮಟ್ಟ, ಸಂಶೋಧನೆಗೆ ಒತ್ತು ನೀಡುವುದರ ಜೊತೆಗೆ ಮಂಗಳೂರು, ಮೈಸೂರು, ಮಂಡ್ಯಕ್ಕೂ ವಿಸ್ತಾರವಾಗಿದೆ. ಎಂಜಿನಿಯರ್, ಐಟಿ ಶಿಕ್ಷಣ, ಡೇಟಾ, ಎಲೆಕ್ಟ್ರಿಕಲ್ ವೆಹಿಕಲ್, ಸೈಬರ್ ಸೆಕ್ಯೂರಿಟಿಗೆ ಒತ್ತು ನೀಡಿದ್ದೇವೆ. ಇನ್ನೂ ಮುಂದೆಯೂ ಯುವಕರಿಗೆ ಉದ್ಯೋಗಾವಕಾಶ, ಸ್ಕಿಲ್ ಡೆವಲಪ್‌ಮೆಂಟ್ ನೀಡುವ ನಿಟ್ಟಿನಲ್ಲಿ ಸರ್ಕಾರ ಐಟಿ, ಬಿಟಿ ಸೆಕ್ಟರ್ ಬೆನ್ನಿಗೆ ನಿಲ್ಲಲಿದೆ” ಎಂದರು.

ದೊಡ್ಡ ಕ್ಯಾಂಪಸ್ ಆಗಲಿದೆ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಖಾತೆ ಸಚಿವ ಎಂ.ಬಿ. ಪಾಟೀಲ, “ಬಿಯಾಂಡ್ ಬೆಂಗಳೂರಿಗೆ ಸಮಾನಂತರವಾಗಿ ಬೆಳೆಯಲು ಹುಬ್ಬಳ್ಳಿಯಲ್ಲಿ ಪೂರಕ ವಾತಾವರಣವಿದೆ. ಇನ್ಫೋಸಿಸ್ ಖಾಸಗಿ ಕಂಪನಿಯಾದರೂ, ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಉತ್ತರ ಕರ್ನಾಟಕದವರಲ್ಲಿ ಕಮ್ಯೂನಿಕೇಶನ್ ಸ್ಕಿಲ್ ಹೆಚ್ಚಾದರೆ ಬೆಂಗಳೂರು ಇನ್ಫೋಸಿಸ್ ಕ್ಯಾಂಪಸ್ ಮೀರಿಸುವಷ್ಟು ಹುಬ್ಬಳ್ಳಿ ದೊಡ್ಡ ಕ್ಯಾಂಪಸ್ ಆಗಲಿದೆ” ಎಂದು ಭರವಸೆ ವ್ಯಕ್ತಪಡಿಸಿದರು.

Previous articleಧರ್ಮಸ್ಥಳ ಪ್ರಕರಣ: ಕಾಡಿನೊಳಗೆ ಶೋಧ, ಸಿಗದ ಕಳೇಬರ
Next articleಬೇಲ್ ರದ್ದು ಮಾಡಬೇಡಿ ಎಂದು ಸುಪ್ರೀಂಗೆ ದರ್ಶನ್ ಮನವಿ, ಕೊಟ್ಟ ಕಾರಣಗಳು

LEAVE A REPLY

Please enter your comment!
Please enter your name here