ರ‍್ಯಾಪಿಡೋ ಬೈಕ್‌ಗೆ ತಡೆ; ಆಟೋ ಮೀಟರ್ ಎಲ್ಲಿ?

ಹಲವು ನಗರಗಳಲ್ಲಿ ಇತ್ತೀಚೆಗೆ ಆರಂಭಗೊಂಡಿದ್ದ ರ‍್ಯಾಪಿಡೋ ಬೈಕ್ ನಿಲ್ಲಿಸಿದ್ದು ಸರಿ. ಅದರಿಂದ ಅಪಾಯವಿತ್ತು. ಆದರೆ ಮೊದಲಿನಿಂದಲೂ ಆಟೋರಿಕ್ಷಾಗಳಿಗೆ ಇದ್ದ ಮೀಟರ್‌ಗಳು ಮಾಯವಾಗಿವೆ. ಅದರಲ್ಲೂ ಓಲಾ ಮತ್ತು ಊಬರ್ ಬಂದ ಮೇಲೆ ಮೀಟರ್‌ಗಳನ್ನು ಕೇಳುವವರೇ ಇಲ್ಲ. ಇದರಿಂದ ಜನಸಾಮಾನ್ಯರು ಮತ್ತು ಆಟೋರಿಕ್ಷಾ ಚಾಲಕರಿಗೆ ಆಗುತ್ತಿರುವ ತೊಂದರೆ ಸರ್ಕಾರ ಗಮನಿಸುತ್ತಿಲ್ಲ. ಓಲಾ ಮತ್ತು ಊಬರ್ ಬಂದ ಮೇಲೆ ಹಣವಂತರಿಗೆ ಸಮಸ್ಯೆ ಇಲ್ಲ. ಅವರ ಮೊಬೈಲ್‌ನಲ್ಲಿ ಬುಕ್ ಮಾಡುತ್ತಾರೆ. ಮನೆ ಮುಂದೆ ಬಂದು ನಿಲ್ಲುವ ರಿಕ್ಷಾ ಹತ್ತಿ ಹೋಗುತ್ತಾರೆ. ಆದರೆ ಮೊಬೈಲ್ ಇಲ್ಲದವರು ಪರದಾಡುವಂತಾಗಿದೆ. ಯಾವ ರಿಕ್ಷಾದವರು ಮೀಟರ್ ಹಾಕುವುದಿಲ್ಲ. ಓಲಾ ಮತ್ತು ಊಬರ್ ಬುಕ್ ಮಾಡಬೇಕು ಎಂದರೆ ಮೊಬೈಲ್ ಬೇಕು. ಅದರಲ್ಲೂ ಸಾಮಾನ್ಯ ಮೊಬೈಲ್ ಆಗೋಲ್ಲ. ಇನ್ನು ಮೊಬೈಲ್‌ನಲ್ಲಿ ಬುಕ್ ಮಾಡಿದರೆ ನಿಗದಿತ ದರ ಎನ್ನುವುದು ಇಲ್ಲ. ಇದ್ದಕ್ಕಿದ್ದಂತೆ ದರ ವ್ಯತ್ಯಾಸವಾಗುತ್ತದೆ. ಇದನ್ನು ಪ್ರಶ್ನಿಸಬೇಕು ಎಂದರೆ ನ್ಯಾಯಾಲಯಕ್ಕೆ ಹೋಗಬೇಕು. ಹಿಂದೆ ಆಟೋಗಳಿಗೆ ಮೀಟರ್ ಕಡ್ಡಾಯವಾಗಿತ್ತು. ಅದು ಸರಿ ಇಲ್ಲ ಎಂದರೆ ಪೊಲೀಸರಿಗೆ ದೂರು ನೀಡಬಹುದಾಗಿತ್ತು. ಅಲ್ಲದೆ ಮೀಟರ್ ಪರಿಶೀಲಿಸಲು ತೂಕ ಮತ್ತು ಅಳತೆ ಇಲಾಖೆ ಇನ್‌ಸ್ಪೆಕ್ಟರ್ ಇದ್ದರು. ಈಗ ಯಾರೂ ಇಲ್ಲ. ಆರ್‌ಟಿಒ ಅಧಿಕಾರ ಮೊಟಕುಗೊಂಡಿದೆ. ಆಟೋ ಚಾಲಕರು ಈಗ ಓಲಾ ಮತ್ತು ಊಬರ್ ಹೇಳಿದಂತೆ ಕೇಳಬೇಕು. ಅವರೂ ಮೊಬೈಲ್ ಬಳಸಬೇಕು. ವಾಹನ ಚಲಿಸುವಾಗ ಮೊಬೈಲ್ ಬಳಸಬೇಡಿ ಎಂದು ಕಾನೂನು ಹೇಳುತ್ತದೆ. ಆದರೆ ಆಟೋ ಚಾಲಕ ಅದನ್ನು ಬಳಸಲೇಬೇಕು. ಜಿಪಿಎಸ್ ಬಳಸದೇ ಇರುವುದಕ್ಕೆ ಆಗುವುದಿಲ್ಲ. ಇದರಿಂದ ಕೆಲವು ಅನುಕೂಲಗಳಿವೆ. ಅಪರಿಚಿತರು ಸುಲಭವಾಗಿ ಪ್ರಯಾಣ ಮಾಡಬಹುದು. ದರ ಮೊದಲೇ ನಿಗದಿಯಾಗಿರುತ್ತದೆ. ಅದರಿಂದ ರಿಕ್ಷಾ ಯಾವ ಮಾರ್ಗದಲ್ಲಿ ಹೋದರೂ ಚಿಂತಿಸುವ ಅಗತ್ಯವಿಲ್ಲ. ಅಲ್ಲದೆ ಮಹಿಳೆಯರಿಗೆ ಇದು ಸುರಕ್ಷಿತ. ಕಾಯ ಬೇಕಾದ ಅಗತ್ಯವಿಲ್ಲ. ಬುಕ್ ಮಾಡಿದ ಕೂಡಲೇ ಬರುತ್ತದೆ. ದರ ಮಾತ್ರ ಗ್ರಾಹಕರು ಅಥವಾ ಸರ್ಕಾರದ ಕೈಯಲ್ಲಿಲ್ಲ.
ಆರ್‌ಟಿಒ ಮತ್ತು ಪೊಲೀಸರು ಈ ಖಾಸಗಿ ಕಂಪನಿಗಳಿಗೆ ಕೆಲವು ನಿರ್ಬಂಧ ವಿಧಿಸುವ ಕಡೆ ಗಮನಹರಿಸಿಲ್ಲ. ಬೆಂಗಳೂರಿನಲ್ಲಿ ೧.೭೧ ಲಕ್ಷ ಆಟೋರಿಕ್ಷಾಗಳಿವೆ. ಇನ್ನೂ ೧.೫೦ ಲಕ್ಷ ಆಟೋಗಳಿಗೆ ಪರ್ಮಿಟ್ ನೀಡುವ ಚಿಂತನೆ ನಡೆದಿದೆ. ಇದರಿಂದ ವಾಹನ ಸಂಚಾರ ದಟ್ಟಣೆ ಅಧಿಕಗೊಳ್ಳುತ್ತದೆಯೇ ಹೊರತು ಜನಸಾಮಾನ್ಯರಿಗೆ ಅನುಕೂಲವೇನೂ ಆಗುವುದಿಲ್ಲ. ಮೆಟ್ರೋ ರೈಲು ಬಂದ ಮೇಲೆ ಆಟೋ ಮೇಲೆ ಅವಲಂಬಿಸುವುದು ಕಡಿಮೆಯಾಗಿದೆ. ಇತ್ತೀಚೆಗೆ ಮೆಟ್ರೋ ದರ ಅಧಿಕಗೊಂಡಿದೆ. ಆಟೋಗಳಿಗೆ ಈಗ ಎಲ್‌ಪಿಜಿ ಮತ್ತು ಸಿಎನ್‌ಜಿ ಬಳಸುವುದು ಅಧಿಕಗೊಂಡಿರುವುದರಿಂದ ಪರಿಸರ ಮಾಲಿನ್ಯ ಕಡಿಮೆಯಾಗಿದೆ. ವಿದ್ಯುತ್ ಚಾಲಿತ ಆಟೋ ಅಧಿಕಗೊಂಡಲ್ಲಿ ಪರಿಸರ ಮಾಲಿನ್ಯವನ್ನು ಇನ್ನೂ ಕಡಿಮೆ ಮಾಡಬಹುದು. ಆಟೋ ದರ ಮಾತ್ರ ಪಾರದರ್ಶಕವಾಗಿಲ್ಲ. ಡಿಜಿಟಲೀಕರಣ ಅಧಿಕಗೊಂಡರೂ ಗ್ರಾಹಕರ ಶೋಷಣೆ ಕಡಿಮೆ ಆಗಿಲ್ಲ. ಓಲಾ ಮತ್ತು ಉಬರ್ ಬಂದ ಮೇಲೆ ಆಟೋ ಚಾಲಕರ ಶೋಷಣೆಯೂ ಅಧಿಕಗೊಂಡಿದೆ. ಅವರು ಪರಿಸ್ಥಿತಿಗೆ ಹೊಂದಿಕೊಳ್ಳಲು ಇವರ ದಬ್ಬಾಳಿಕೆಯನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅಲ್ಲದೆ ಆಟೋ ಚಾಲಕರ ಕೆಲಸಕ್ಕೆ ಈಗ ಘನತೆ ಬಂದಿದೆ.
ಗ್ರಾಹಕರು- ಆಟೋ ಚಾಲಕರ ನಡುವೆ ದರದ ಬಗ್ಗೆ ಸಂಘರ್ಷ ತಪ್ಪಿಸಲು ಹೆಚ್ಚು ಪಾರದರ್ಶಕ ಮತ್ತು ಮಧ್ಯವರ್ತಿಗಳು ಇಲ್ಲದ ವ್ಯವಸ್ಥೆ ಜಾರಿಗೆ ತರುವ ಅಗತ್ಯವಿದೆ. ಬೆಂಗಳೂರು ನಗರದಲ್ಲಿರುವ ಸಮಸ್ಯೆಗಳು ಮೈಸೂರು, ಹುಬ್ಬಳ್ಳಿ ಮತ್ತು ಇತರ ಪ್ರಮುಖ ನಗರಗಳಲ್ಲೂ ಇದೆ. ಪ್ರತಿ ನಗರದಲ್ಲೂ ರಿಕ್ಷಾದವರು ತಮ್ಮದೇ ಆದ ಅಲಿಖಿತ ದರವನ್ನು ನಿಗದಿಪಡಿಸಿಕೊಂಡಿದ್ದಾರೆ. ಸರ್ಕಾರ ಜಾಣಮೌನವಹಿಸಿರುವುದಂತೂ ನಿಜ. ಸಾರ್ವಜನಿಕ ಸಾರಿಗೆ ವಿಷಯದಲ್ಲಿ ಸರ್ಕಾರ ತನ್ನದೇ ಆದ ಕೆಲವು ನಿಯಮಗಳನ್ನು ಜಾರಿಗೆ ತರುವುದು ಅಗತ್ಯ. ಖಾಸಗಿರಂಗಕ್ಕೆ ಮುಕ್ತ ಅವಕಾಶವಿದ್ದರೂ ಕೆಲವು ನಿಯಮಗಳ ಪರಿಪಾಲನೆ ಅಗತ್ಯ. ಇಲ್ಲದಿದ್ದಲ್ಲಿ ಮನಸ್ಸಿಗೆ ಬಂದಂತೆ ವರ್ತಿಸುವುದು ಸಾಮಾನ್ಯ ನೋಟವಾಗುತ್ತದೆ. ಅದರಿಂದ ಜನಸಾಮಾನ್ಯರು ಮತ್ತು ಆಟೋ ಚಾಲಕರ ನಡುವೆ ಅನಗತ್ಯ ಸಂಘರ್ಷಕ್ಕೆ ಸರ್ಕಾರವೇ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಈ ವಿಷಯದಲ್ಲಿ ಎಚ್ಚರವಹಿಸುವುದು ಅಗತ್ಯ. ಅದರಲ್ಲೂ ಬೆಂಗಳೂರು ನಗರಕ್ಕೆ ಬೇರೆ ಬೇರೆ ಸ್ಥಳಗಳಿಂದ ಜನ ಪ್ರತಿದಿನ ವ್ಯಾಪಾರ-ವ್ಯವಹಾರಕ್ಕೆ ಬಂದು ಹೋಗುವುದು ಸಹಜ. ಅವರಿಗೆ ತೊಂದರೆ ಆಗದಂತೆ ಕ್ರಮ ವಹಿಸುವುದು ಅಗತ್ಯ. ಡಿಜಿಟಲೀಕರಣ ಆದ ಮೇಲೆ ನಗದು ಬಳಸುವುದು ಕಡಿಮೆಯಾಗಿದೆ. ಆದರೆ ಕೆಲವರು ಇನ್ನೂ ಫೋನ್ ಪೇಗೆ ಹೊಂದಿಕೊಂಡಿರುವುದಿಲ್ಲ. ಅವರಿಗೆ ಆಟೋಗಳಲ್ಲಿ ಪ್ರಯಾಣ ಮಾಡುವುದು ಬಹಳ ಕಷ್ಟ. ಆಟೋ ಚಾಲಕರ ಬಳಿ ಈಗ ನಗದು ಇರುವುದೇ ಇಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದಿಂದ ಬರುವವರಿಗೆ ಆಟೋ ದೊಡ್ಡ ಸಮಸ್ಯೆ. ಕೆಲವರು ಊಬರ್ ಮತ್ತು ಓಲಾ ಬುಕ್ ಮಾಡುವುದನ್ನು ಕಲಿತಿದ್ದಾರೆ. ಹಾಗಾಗಿ ಅವರಿಗೆ ಸಮಸ್ಯೆ ಆಗುವುದಿಲ್ಲ. ಹೆಚ್ಚಿಗೆ ಹಣ ನೀಡಬೇಕು. ಅದು ಆಟೋ ಚಾಲಕರೂ ಹೋಗುವುದಿಲ್ಲ. ಗ್ರಾಹಕ-ಆಟೋ ಚಾಲಕ ಇಬ್ಬರಿಗೂ ನಷ್ಟ ಕಟ್ಟಿಟ್ಟ ಬುತ್ತಿ.