ಮೂರನೇ ಮಹಾಯುದ್ಧ ಈಗ ೧ ಹೆಜ್ಜೆಯಷ್ಟೇ ದೂರ

0
20

ಮಾಸ್ಕೋ: ರಷ್ಯಾ ಹಾಗೂ ಅಮೆರಿಕ ನೇತೃತ್ವದ ನ್ಯಾಟೋ ಮಿಲಿಟರಿ ಕೂಟದ ನಡುವಣ ಸಂಘರ್ಷದಿಂದಾಗಿ ಜಗತ್ತು ಈಗ ಮೂರನೇ ಮಹಾಯುದ್ಧದಿಂದ ಕೇವಲ ಒಂದು ಹೆಜ್ಜೆಯಷ್ಟೇ ಹಿಂದಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಾಶ್ಚಾತ್ಯ ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಯಾರೂ ಅಂತಹ ಸನ್ನಿವೇಶವನ್ನು ಅಪೇಕ್ಷಿಸುವುದಿಲ್ಲ ಎಂದೂ ಹೇಳಿದ್ದಾರೆ.
೧೯೬೨ರ ಕ್ಯೂಬಾ ಕ್ಷಿಪಣಿ ವಿವಾದ ವೇಳೆ ಅಮೆರಿಕ ಹಾಗೂ ರಷ್ಯಾ ಮಧ್ಯೆ ನೇರ ಮುಖಾಮುಖಿಯಾಗುವ ಅಪಾಯ ಎದುರಾಗಿತ್ತು. ಅದಾದ ಬಳಿಕ ಉಕ್ರೇನ್ ಯುದ್ಧವು ಪಾಶ್ಚಾತ್ಯ ದೇಶಗಳೊಂದಿಗಿನ ರಷ್ಯಾದ ಬಾಂಧವ್ಯವನ್ನು ಮತ್ತಷ್ಟು ಹದಗೆಡಿಸಿದೆ. ಅಣ್ವಸ್ತ್ರ ಬಳಸುವ ಅಪಾಯಗಳಿದ್ದರೂ ಉಕ್ರೇನ್‌ನಲ್ಲಿ ಅಂತಹ ಅಸ್ತ್ರ ಬಳಸುವ ಅಗತ್ಯ ಬೀಳಬಹುದೆಂದು ತಾವು ಭಾವಿಸುವುದಿಲ್ಲ ಎಂದು ಪುಟಿನ್ ಹೇಳಿಕೊಂಡಿದ್ದಾರೆ. ರಷ್ಯಾ ಹಾಗೂ ನೇಟೋ ನಡುವಣ ಮೂರನೇ ಮಹಾಯುದ್ಧ ಸಂಭಾವ್ಯತೆ ಕುರಿತಾಗಿ ಪುಟಿನ್ ಅವರಲ್ಲಿ ರಾಯಿಟರ್ಸ್ ಮಾಧ್ಯಮ ಕೇಳಿದಾಗ ಆಧುನಿಕ ಜಗತ್ತಿನಲ್ಲಿ ಎಲ್ಲವೂ ಸಾಧ್ಯ ಎಂದಿದ್ದಾರೆ. ಈಗಾಗಲೇ ಉಕ್ರೇನ್‌ನ ಯುದ್ಧ ಭೂಮಿಯಲ್ಲಿ ನೇಟೋ ಮಿಲಿಟರಿ ಸಿಬ್ಬಂದಿ ಹೋರಾಡುತ್ತಿದ್ದಾರೆ. ಆದರೆ ರಷ್ಯಾಪಡೆಗಳು ಇಂಗ್ಲಿಷ್ ಹಾಗೂ ಫ್ರೆಂಚ್ ಭಾಷೆ ಮಾತನಾಡುವ ಸೈನಿಕರೆಲ್ಲರನ್ನೂ ಸದೆಬಡಿಯುತ್ತಿವೆ. ಅವರ ಸಿಬ್ಬಂದಿ ನಿಯೋಜನೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಅಪಾರಸಂಖ್ಯೆಯಲ್ಲಿ ಈ ಸೈನಿಕರು ಸಾವಿಗೀಡಾಗುತ್ತಿದ್ದಾರೆ ಎಂದರು. ಇದೇ ವೇಳೆ ರಷ್ಯಾದಲ್ಲಿ ಚುನಾವಣೆ ನ್ಯಾಯೋಚಿತ ರೀತಿಯಲ್ಲಿ ನಡೆದಿಲ್ಲ ಎಂದು ಅಮೆರಿಕ ಮತ್ತು ಅನ್ಯ ಪಾಶ್ಚಾತ್ಯದೇಶಗಳು ಟೀಕಿಸುತ್ತಿವೆ. ಆದರೆ ಅಂತಹ ಟೀಕೆಗಳನ್ನು ಪುಟಿನ್ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಅಮೆರಿಕದಲ್ಲೇ ಚುನಾವಣೆ ಪ್ರಜಾತಾಂತ್ರಿಕ ರೀತಿಯಲ್ಲಿ ನಡೆಯುತ್ತಿಲ್ಲ. ಡೊನಾಲ್ಡ್ ಟ್ರಂಪ್ ವಿರುದ್ಧ ಸರ್ಕಾರಿ ಆಡಳಿತ ಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರತ್ಯಾರೋಪ ಮಾಡಿದರು.

Previous articleಅಂಚೆ ಕಚೇರಿ ಮುಂದೆ ನೂಕು ನುಗ್ಗಲು
Next articleಸುಡು ಬಿಸಿಲಿಗೆ ವಿಶ್ವವಿಖ್ಯಾತ ಹಂಪಿ ಭಣ ಭಣ