ಭಾನುವಾರದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಗಿರೀಶ್ ಲಿಂಗಣ್ಣ ಅವರ ಅಂಕಣ
ಆಗಸ್ಟ್ 1, ಶುಕ್ರವಾರ, ಲಡಾಖಿನ ಶೀತಲ ಪರ್ವತಗಳಲ್ಲಿ ಒಂದು ವಿಶಿಷ್ಟ ಯೋಜನೆ ಆರಂಭಗೊಂಡಿತು. ಅಲ್ಲಿನ 14,000 ಅಡಿಗಳ ಎತ್ತರದಲ್ಲಿ, ಜಾಗರೂಕವಾಗಿ ಆರಿಸಲ್ಪಟ್ಟಿರುವ ಇಬ್ಬರು ವ್ಯಕ್ತಿಗಳು ಸಂಪೂರ್ಣ ಏಕಾಂತದಲ್ಲಿ ವಾಸಿಸಲು ಆರಂಭಿಸಿದರು. ಹಾಗೆಂದು ಇದೇನು ಒಂದು ಸಾಧಾರಣ ಪ್ರಯೋಗವಲ್ಲ. ಇದು ಚಂದ್ರ ಅಥವಾ ಮಂಗಳಯಾನದಂತಹ ಸುದೀರ್ಘ ಬಾಹ್ಯಾಕಾಶ ಯಾನದ ವೇಳೆ ಗಗನಯಾತ್ರಿಗಳು ಎದುರಿಸುವಂತಹ ಅನುಭವಗಳನ್ನು ಅನುಕರಿಸುವಂತಹ ವಿಶೇಷ ಸಿಮ್ಯುಲೇಶನ್ ಆಗಿದೆ. ಇದು ಮಾನವ ದೇಹ ಮತ್ತು ಮನಸ್ಸು ಇಂತಹ ತೀವ್ರವಾದ, ಏಕಾಂತದ ವಾತಾವರಣಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ತಿಳಿಯುವ ಉದ್ದೇಶ ಹೊಂದಿದೆ.
ಈ ಮಹತ್ವದ ಪ್ರಯೋಗ, ಗಗನಯಾನ ಯೋಜನೆಯಡಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಭಾರತದ ಯೋಜನೆಯ ಭಾಗವಾಗಿದೆ. ಈ ಸಿಮ್ಯುಲೇಶನ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಲಡಾಖಿನ ಹಿಮಾಲಯನ್ ಔಟ್‌ಪೋಸ್ಟ್ ಫಾರ್ ಪ್ಲಾನೆಟರಿ ಎಕ್ಸ್‌ಪ್ಲೋರೇಶನ್ ((HOPE) ಎನ್ನುವ ದುರ್ಗಮ ನೆಲೆಯಲ್ಲಿ ನಡೆಸಲಾಗುತ್ತಿದೆ. ಈ ತಾಣವನ್ನು ಬೆಂಗಳೂರು ಮೂಲದ ಪ್ರೋಟೋಪ್ಲಾನೆಟ್ ಎಂಬ ಸಂಸ್ಥೆ ಅಭಿವೃದ್ಧಿ ಪಡಿಸಿದ್ದು, ಇದನ್ನು ಯೋಜನೆ ಆರಂಭಗೊಳ್ಳುವ ಹಿಂದಿನ ದಿನ ಇಸ್ರೋ ಮುಖ್ಯಸ್ಥರಾದ ವಿ ನಾರಾಯಣನ್ ಉದ್ಘಾಟಿಸಿದರು.
ಲಡಾಖಿನ ತ್ಸೊ ಕಾರ್‌ನಲ್ಲಿರುವ ಈ ನೆಲೆ ಬಂಡೆಗಳನ್ನು ಹೊಂದಿರುವ ಬಂಜರು ಭೂಮಿಯಾಗಿದ್ದು, ಚಂದ್ರ ಅಥವಾ ಮಂಗಳ ಗ್ರಹದಲ್ಲಿ ಗಗನಯಾತ್ರಿಗಳು ಎದುರಿಸುವ ನೆಲವನ್ನು ಹೋಲುವುದರಿಂದ ಪ್ರಯೋಗಕ್ಕಾಗಿ ಇದನ್ನು ಆರಿಸಲಾಗಿದೆ. ಹತ್ತು ದಿನಗಳ ಕಾಲ ನಡೆಯಲಿರುವ ಈ ಪ್ರಯೋಗ, ವಿಜ್ಞಾನಿಗಳಿಗೆ ಮಾನವರು ಹೊರ ಜಗತ್ತಿನಿಂದ ದೀರ್ಘಕಾಲದ ತನಕ ದೂರಾಗಿ, ಕಷ್ಟಕರ ವಾತಾವರಣದಲ್ಲಿ ಕಾಲ ಕಳೆಯುವುದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ತಿಳಿಯಲು ನೆರವಾಗಲಿದೆ. ಇದು ಭವಿಷ್ಯದಲ್ಲಿ ಹಲವಾರು ತಿಂಗಳುಗಳ ಕಾಲ, ಅಥವಾ ವರ್ಷಗಳ ಕಾಲವೇ ನಡೆಯುವಂತಹ ಬಾಹ್ಯಾಕಾಶ ಪ್ರಯಾಣಗಳಿಗೆ ಸಿದ್ಧತೆ ನಡೆಸಲು ನೆರವಾಗಲಿದೆ.
135 ಅರ್ಜಿದಾರರ ಪೈಕಿ, ರಾಹುಲ್ ಮೊಗಲಪಲ್ಲಿ ಮತ್ತು ಯಮನ್ ಅಕೊಟ್ ಎಂಬ ಇಬ್ಬರು ಅಭ್ಯರ್ಥಿಗಳನ್ನು ಪ್ರಯೋಗಕ್ಕೆ ಆಯ್ಕೆ ಮಾಡಲಾಗಿದೆ. ರಾಹುಲ್ ಅಮೆರಿಕಾದ ಪುರ್ದ್ಯು ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದು, ಯಮನ್ ಯುಕೆಯ ಅಬರ್ದೀನ್ ವಿಶ್ವವಿದ್ಯಾಲಯದಲ್ಲಿ ಗ್ರಹ ವಿಜ್ಞಾನ ಪದವೀಧರರಾಗಿದ್ದಾರೆ. ವೈದ್ಯಕೀಯ, ಮಾನಸಿಕ ಸ್ಥಿರತೆಗಳು ಮತ್ತು ಹಿಂದೆ ಇಂತಹ ಸೀಮಿತ ಸ್ಥಳದಲ್ಲಿ ವಾಸ ಮಾಡಿರುವ ಅನುಭವ ಸೇರಿದಂತೆ, ಇಸ್ರೋದ ಕಟ್ಟುನಿಟ್ಟಿನ ನಿಯಮಾವಳಿಗಳ ಅನುಸಾರವಾಗಿಯೇ ಇವರನ್ನು ಆಯ್ಕೆ ಮಾಡಲಾಗಿದೆ. ಇಷ್ಟು ಎತ್ತರದ ಪ್ರದೇಶಕ್ಕೆ ತೆರಳುವ ಮುನ್ನ, ಇಬ್ಬರೂ ಕಡಿಮೆ ಎತ್ತರದ ಪ್ರದೇಶದಲ್ಲಿ 15 ದಿನಗಳ ತರಬೇತಿಯನ್ನು ಪೂರ್ಣಗೊಳಿಸಿ, ಸಿದ್ಧತೆ ನಡೆಸಿದ್ದಾರೆ.
ಈ ಯೋಜನೆಯ ಮುಖ್ಯ ಉದ್ದೇಶ ಏಕಾಂತ ವಾಸ, ಮತ್ತು ಎತ್ತರದ ಪ್ರದೇಶಗಳ ಒತ್ತಡ ಮಾನವ ದೇಹ ಮತ್ತು ಮನಸ್ಸಿನಲ್ಲಿ ತರುವ ಬದಲಾವಣೆಗಳನ್ನು ಅಧ್ಯಯನ ಮಾಡುವುದಾಗಿದೆ. ವಿಜ್ಞಾನಿಗಳು ಪ್ರಯೋಗದ ಮೊದಲು ಮತ್ತು ನಂತರ ಇಬ್ಬರು ಸದಸ್ಯರ ರಕ್ತ, ಮೂತ್ರ ಮತ್ತು ಮಲದ ಮಾದರಿಗಳನ್ನು ಸಂಗ್ರಹಿಸಲಿದ್ದಾರೆ. ಈ ಮಾದರಿಗಳು ಸಂಶೋಧಕರಿಗೆ ‘ಆಮಿಕ್ಸ್’ ಎನ್ನುವ ಪ್ರತಿಕ್ರಿಯೆಗಳ ಅಧ್ಯಯನ ನಡೆಸಲು ನೆರವಾಗುತ್ತವೆ. ಇದು ಅನುವಂಶಿಕತೆ (ಜೆನೋಮಿಕ್ಸ್), ಪ್ರೊಟೀನ್‌ಗಳು (ಪ್ರೊಟಿಯೋಮಿಕ್ಸ್), ಮತ್ತು ಚಯಾಪಚಯ ಕ್ರಿಯೆ (ಮೆಟಬೊಲೊಮಿಕ್ಸ್) ಗಳನ್ನು ಒಳಗೊಂಡಿರಲಿದೆ. ಸರಳವಾಗಿ ಹೇಳುವುದಾದರೆ, ಒತ್ತಡದಲ್ಲಿ ದೇಹ ಹೇಗೆ ವರ್ತಿಸುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎನ್ನುವುದನ್ನು ಸಂಶೋಧಕರು ಅಧ್ಯಯನ ನಡೆಸಲಿದ್ದಾರೆ.
ದೈಹಿಕ ಆರೋಗ್ಯದ ಜೊತೆಗೆ, ಯೋಜನೆ ಮಾನಸಿಕ ಆರೋಗ್ಯದ ಮೇಲೆ ಏಕಾಂತದ ಪರಿಣಾಮವನ್ನೂ ಅಧ್ಯಯನ ಮಾಡಲಾಗುತ್ತದೆ. ಇದರಲ್ಲಿ ಮನಸ್ಥಿತಿಗಳ ಬದಲಾವಣೆ, ನಿದ್ರೆಯಲ್ಲಿನ ವ್ಯತ್ಯಾಸ, ನಿರ್ಣಯ ಕೈಗೊಳ್ಳುವ ಸಾಮರ್ಥ್ಯ, ಮತ್ತು ಇಬ್ಬರು ವ್ಯಕ್ತಿಗಳು ಹೇಗೆ ಪರಸ್ಪರ ಸಂವಹನ ನಡೆಸುತ್ತಾರೆ ಎನ್ನುವುದರ ಅಧ್ಯಯನಗಳೂ ಸೇರಿವೆ. ಇಂತಹ ಅಧ್ಯಯನಗಳು, ಗಗನಯಾತ್ರಿಗಳು ಭೂಮಿಯಿಂದ ಬಹಳ ದೂರದಲ್ಲಿ, ಅತ್ಯಂತ ಸಣ್ಣ ಸ್ಥಳದಲ್ಲಿ ವಾಸಿಸುವ ಮತ್ತು ಕೆಲಸ ನಿರ್ವಹಿಸುವ ಅನಿವಾರ್ಯತೆ ಉಂಟಾಗುವ ದೀರ್ಘಾವಧಿಯ ಬಾಹ್ಯಾಕಾಶ ಯೋಜನೆಗಳನ್ನು ರೂಪಿಸುವಾಗ ಸಾಕಷ್ಟು ನೆರವಾಗುತ್ತವೆ.
ಈ ಪ್ರಯತ್ನಗಳ ಹಿಂದಿರುವ ಪ್ರೋಟೋಪ್ಲಾನೆಟ್ ಸಂಸ್ಥೆ, ಮಾರ್ಸ್ ಸೊಸೈಟಿ ಮತ್ತು ಮಾರ್ಸ್ ಸೊಸೈಟಿ ಆಸ್ಟ್ರೇಲಿಯಾದಂತಹ ಜಾಗತಿಕ ಬಾಹ್ಯಾಕಾಶ ಸಂಸ್ಥೆಗಳೊಡನೆ ಕಾರ್ಯಾಚರಿಸುತ್ತಿದೆ. ಈ ಸಂಸ್ಥೆಗಳು ಈಗಾಗಲೇ ಮರುಭೂಮಿಗಳು ಮತ್ತು ಆರ್ಕ್ಟಿಕ್‌ನಲ್ಲಿ ಇಂತಹ ಪರೀಕ್ಷಾ ಕೇಂದ್ರಗಳನ್ನು ನಿರ್ಮಿಸಿವೆ. ಲಡಾಖ್‌ನಲ್ಲಿರುವ ಹೋಪ್ ಕೇಂದ್ರ ಅರೆ ಶಾಶ್ವತ ನೆಲೆಯಾಗಿದೆ. ಅಂದರೆ, ಇದನ್ನು ಭವಿಷ್ಯದ ಪ್ರಯೋಗಗಳಿಗೆ ಅನುಗುಣವಾಗಿ ಬದಲಾಯಿಸಬಹುದು, ಅಥವಾ ಒಂದು ಕಡೆಯಿಂದ ಇನ್ನೊಂದೆಡೆಗೆ ಒಯ್ಯಬಹುದು. ಇದು ಕೇಂದ್ರವನ್ನು ಕಡಿಮೆ ವೆಚ್ಚದಾಯಕ ಮತ್ತು ಮರುಬಳಕೆ ಮಾಡಬಲ್ಲ ತಾಣವನ್ನಾಗಿಸುತ್ತದೆ.
ಪ್ರಸ್ತುತ ಯೋಜನೆಯನ್ನು ಇಸ್ರೋದ ಹ್ಯುಮನ್ ಸ್ಪೇಸ್ ಫ್ಲೈಟ್ ಸೆಂಟರ್ ನಿರ್ವಹಿಸುತ್ತಿದೆ. ಭವಿಷ್ಯದಲ್ಲಿ, ಪ್ರೋಟೋಪ್ಲಾನೆಟ್ ಸಂಸ್ಥೆ ಜಂಟಿ ಸಂಶೋಧನೆಗಳಿಗಾಗಿ ಖಾಸಗಿ ಕಂಪನಿಗಳು, ವಿಶ್ವವಿದ್ಯಾಲಯಗಳು, ಮತ್ತು ವಿವಿಧ ಕ್ಷೇತ್ರಗಳ ವಿಜ್ಞಾನಿಗಳನ್ನು ಹೋಪ್ ಕೇಂದ್ರಕ್ಕೆ ಆಹ್ವಾನಿಸುವ ಉದ್ದೇಶ ಹೊಂದಿದೆ. ಇಂತಹ ನೆಲೆಗಳನ್ನು ಹಿಮಾಲಯದ ಇತರೆಡೆಗಳಲ್ಲಿ ಮತ್ತು ಭಾರತದಾದ್ಯಂತ ಸ್ಥಾಪಿಸುವ ಯೋಜನೆಯೂ ಇದೆ. ಭವಿಷ್ಯದ ಯೋಜನೆಗಳು ಬಾಹ್ಯಾಕಾಶ ಪ್ರಯಾಣದ ಇತರ ಆಯಾಮಗಳಾದ, ಇತರ ಗ್ರಹಗಳ ಮೇಲ್ಮೈಯಲ್ಲಿ ಚಲಿಸುವುದು ಹೇಗೆ, ಉತ್ತಮ ಬಾಹ್ಯಾಕಾಶ ನೆಲೆಗಳನ್ನು ನಿರ್ಮಿಸುವುದು ಹೇಗೆ, ಮತ್ತು ಜೀವ ಬೆಂಬಲ ವ್ಯವಸ್ಥೆಗಳನ್ನು ನಿರ್ವಹಿಸುವುದು ಹೇಗೆ ಎಂಬ ಅಂಶಗಳನ್ನು ತಿಳಿಯಲು ನೆರವಾಗಲಿವೆ.
ಪ್ರಸ್ತುತ ಯೋಜನೆ ಭಾರತದ ಬಾಹ್ಯಾಕಾಶ ಯೋಜನೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಗಗನಯಾತ್ರಿಗಳು ಭೂಮಿಯಲ್ಲಿನ ಬಾಹ್ಯಾಕಾಶದಂತಹ ವಾತಾವರಣದಲ್ಲಿ ಹೇಗೆ ವರ್ತಿಸುತ್ತಾರೆ ಮತ್ತು ವಾಸಿಸುತ್ತಾರೆ ಎಂದು ಅಧ್ಯಯನ ಮಾಡುವುದರಿಂದ, ಇಸ್ರೋ ಹೆಚ್ಚು ಮಹತ್ವಾಕಾಂಕ್ಷಿ ಗುರಿಗಳಾದ ಚಂದ್ರ ಮತ್ತು ಅದರಾಚೆಗೆ ಗಗನಯಾತ್ರಿಗಳನ್ನು ಕಳುಹಿಸುವ ಯೋಜನೆಗಳನ್ನು ರೂಪಿಸಲು ಸಿದ್ಧತೆ ನಡೆಸಲಾಗುತ್ತದೆ. ಈಗಿನ ಯೋಜನೆ ಮತ್ತು ಮುಂದಿನ ಪ್ರಯೋಗಗಳ ಫಲಿತಾಂಶಗಳನ್ನು ವರ್ಷದ ಕೊನೆಯ ವೇಳೆಗೆ ಹಂಚಿಕೊಳ್ಳುವ ಸಾಧ್ಯತೆಗಳಿವೆ.