ನವದೆಹಲಿ: ಭಾರತೀಯರಿಗೆ ಚಿನ್ನ ಮತ್ತು ಬೆಳ್ಳಿ ಕೇವಲ ಆಭರಣವಲ್ಲ. ಅದೊಂದು ಭರವಸೆಯ ಹೂಡಿಕೆ ಕೂಡ ಹೌದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಎರಡೂ ಲೋಹಗಳ ಬೆಲೆ ಏರುತ್ತಿರುವ ರೀತಿ ನೋಡಿದರೆ, ಸಾಮಾನ್ಯ ಜನರಿಗೆ ಇವು ಮರೀಚಿಕೆಯಾಗುವ ಲಕ್ಷಣಗಳು ಕಾಣುತ್ತಿವೆ.
ಬೆಳ್ಳಿಯ ಐತಿಹಾಸಿಕ ಜಿಗಿತ ಮತ್ತು ಇಳಿಕೆ: ಕಳೆದ ಕೆಲವು ವಾರಗಳಿಂದ ಬೆಳ್ಳಿ ಬೆಲೆ ಅಕ್ಷರಶಃ ಬೆಂಕಿಯಂತಾಗಿದೆ. ಗುರುವಾರ ಇತಿಹಾಸದಲ್ಲೇ ಮೊದಲ ಬಾರಿಗೆ ಬೆಳ್ಳಿ ಕೆ.ಜಿಗೆ 4 ಲಕ್ಷ ರೂಪಾಯಿ ಗಡಿ ದಾಟಿ ದಾಖಲೆ ಬರೆಯಿತು. ಕೇವಲ ಹತ್ತು ದಿನಗಳ ಹಿಂದೆ 3 ಲಕ್ಷದ ಆಸುಪಾಸಿನಲ್ಲಿದ್ದ ಬೆಲೆ, ಅಲ್ಪಾವಧಿಯಲ್ಲೇ ಒಂದು ಲಕ್ಷ ರೂಪಾಯಿ ಏರಿಕೆ ಕಂಡಿರುವುದು ಆರ್ಥಿಕ ತಜ್ಞರನ್ನು ಬೆರಗುಗೊಳಿಸಿದೆ. ಆದರೆ ಈ ಏರಿಕೆ ಹೆಚ್ಚು ಕಾಲ ನಿಲ್ಲಲಿಲ್ಲ. ಶುಕ್ರವಾರದ ಹೊತ್ತಿಗೆ ಲಾಭದ ನಗದೀಕರಣ ಮತ್ತು ಡಾಲರ್ ಮೌಲ್ಯದ ಏರಿಕೆಯಿಂದಾಗಿ ಬೆಲೆ 3,95,000 ರೂಪಾಯಿಗೆ ಕುಸಿಯುವ ಮೂಲಕ ಹೂಡಿಕೆದಾರರಿಗೆ ಸಣ್ಣ ಸಮಾಧಾನ ನೀಡಿದೆ.
ಚಿನ್ನದ ದರದಲ್ಲಿನ ಬದಲಾವಣೆ: ಚಿನ್ನದ ಬೆಲೆಯೂ ಹಿಂದೆ ಬಿದ್ದಿಲ್ಲ. 10 ಗ್ರಾಂ ಚಿನ್ನದ ಬೆಲೆ ಸುಮಾರು 1.83 ಲಕ್ಷದಿಂದ 1.89 ಲಕ್ಷ ರೂಪಾಯಿವರೆಗೆ ತಲುಪಿದೆ. 2024ಕ್ಕೆ ಹೋಲಿಸಿದರೆ 2025ರಲ್ಲಿ ಭಾರತದಲ್ಲಿ ಚಿನ್ನದ ಮಾರಾಟದ ಪ್ರಮಾಣದಲ್ಲಿ 11% ಕುಸಿತ ಕಂಡಿದೆ ಎಂದು ವಿಶ್ವ ಚಿನ್ನ ಮಂಡಳಿ ತಿಳಿಸಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮಾರಾಟವಾದ ಪ್ರಮಾಣ ಕಡಿಮೆಯಾದರೂ, ಭಾರತೀಯರು ಚಿನ್ನಕ್ಕಾಗಿ ವ್ಯಯಿಸಿದ ಹಣದ ಮೌಲ್ಯದಲ್ಲಿ 30% ಏರಿಕೆಯಾಗಿದೆ. ಅಂದರೆ, ಜನರು ಕಡಿಮೆ ತೂಕದ ಚಿನ್ನ ಕೊಂಡರೂ, ದೊಡ್ಡ ಮೊತ್ತದ ಹಣವನ್ನು ಪಾವತಿಸುತ್ತಿದ್ದಾರೆ.
- ಹೋಲಿಕೆ ಮತ್ತು ಕಾರಣಗಳು:
| ವಿವರ | ಕಳೆದ ವಾರ | ಪ್ರಸ್ತುತ ಗರಿಷ್ಠ ಮಟ್ಟ | ಬದಲಾವಣೆ |
| ಬೆಳ್ಳಿ (1 KG) | ₹ 3,00,000 | ₹ 4,04,500 | ₹ 1,04,500 ಏರಿಕೆ |
| ಚಿನ್ನ (10 Gram) | ₹ 1,71,000 | ₹ 1,89,000 | ₹ 18,000 ಏರಿಕೆ |
| ಬೆಳ್ಳಿ( 1KG ) | ₹4,00,000 | ₹3,95,000 | ₹15,000 ಇಳಿಕೆ |
| ಚಿನ್ನ ( 10 Gram ) | ₹1,71,000 | ₹1,70,620 | ₹8,230 ಇಳಿಕೆ |
ಏರಿಕೆಗೆ ಕಾರಣಗಳು: ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ವ್ಯಾಪಾರ ಯುದ್ಧಗಳಿಂದಾಗಿ ಹೂಡಿಕೆದಾರರು ಷೇರು ಮಾರುಕಟ್ಟೆಗಿಂತ ಸುರಕ್ಷಿತವಾದ ಚಿನ್ನ-ಬೆಳ್ಳಿಯತ್ತ ಮುಖ ಮಾಡಿದ್ದಾರೆ. 2025-26ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಈ ಅನಿಶ್ಚಿತತೆ ಮುಂದುವರಿಯುವವರೆಗೆ ಬೆಲೆಗಳು ಇಳಿಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿತ್ತು ಆದ್ರೆ ಇವತ್ತು ಸಿಹಿ ಸುದ್ದಿಯನ್ನ ನೀಡಿ ಬಂಗಾರ ಮತ್ತು ಬೆಳ್ಳಿಯ ಬೆಲೆ ಇಳಿಕೆಯಾಗಿರುವುದನ್ನ ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಗುರುವಾರದ “ಬೆಲೆ ಏರಿಕೆಯ ಆಘಾತ” ಮತ್ತು ಶುಕ್ರವಾರದ “ಸಣ್ಣ ಮಟ್ಟದ ಇಳಿಕೆ” ಮಾರುಕಟ್ಟೆಯ ಅಸ್ಥಿರತೆಯನ್ನು ತೋರಿಸುತ್ತಿದೆ. ಬಜೆಟ್ ಸನ್ನಿಹಿತವಾಗುತ್ತಿರುವ ಈ ಸಮಯದಲ್ಲಿ, ಆಭರಣ ಪ್ರಿಯರಿಗೆ ದೇಶೀಯ ಮಾರುಕಟ್ಟೆಯ (MCX) ಗುಡ್ ನ್ಯೂಸ್ ಕೊಟ್ಟಿದೆ.























