ಕಾಂಗ್ರೆಸ್ ಪಾದಯಾತ್ರೆ ಜನರಿಗೆ ಹಾಸ್ಯದ ವಿಷಯವಾಗಲಿದೆ

0
14

ಮಂಗಳೂರು: ಮಂಗಳೂರಿನ ಕಾಂಗ್ರೆಸ್ ನಾಯಕರು ತಮ್ಮಲ್ಲಿರುವ ಬೆಟ್ಟದಷ್ಟು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದೇ, ಕೇಂದ್ರ ಸರ್ಕಾರದ ವಿಬಿ–ಜಿ ರಾಮ್ ಜಿ ವಿರುದ್ಧ ಸ್ವಾರ್ಥಪೂರ್ಣ ಪಾದಯಾತ್ರೆ ಮಾಡಲು ಹೊರಟಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರವಾಗಿ ಟೀಕಿಸಿದರು. ವಾಸ್ತವದಲ್ಲಿ ರಾಜ್ಯದ ಜನರಿಗೆ ಸರಿಯಾಗಿ ಸೌಲಭ್ಯ ನೀಡಲು ವಿಫಲವಾಗಿರುವ ಕಾಂಗ್ರೆಸ್ ಸರ್ಕಾರದ “ಶವಯಾತ್ರೆ” ನಡೆಸಲು ರಾಜ್ಯದ ಜನತೆಯೇ ನಿರ್ಧರಿಸಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದಾಗಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಇ-ಖಾತಾ ಸಮಸ್ಯೆ ತಾರಕಕ್ಕೇರಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯ ಜೊತೆಗೆ, ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಆದಾಯ ನಷ್ಟವಾಗುತ್ತಿದೆ ಎಂದು ಅವರು ಹೇಳಿದರು. ಜೈಲ್ ಜಾಮರ್ ಸಮಸ್ಯೆ ಕುರಿತು ಕೆಡಿಬಿ ಸಭೆಗಳು, ಪ್ರತಿಭಟನೆಗಳು ಹಾಗೂ ಅಧಿವೇಶನಗಳಲ್ಲಿ ಸರ್ಕಾರದ ಗಮನ ಸೆಳೆದರೂ ಇದುವರೆಗೆ ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:  RCB ಕುಟುಂಬದ ನಂಟು: ಶ್ರೇಯಾಂಕ ಆಟಕ್ಕೆ ಎಬಿ ಡಿ ಮೆಚ್ಚುಗೆ

ಶತಮಾನಗಳಿಂದ ನಡೆದುಬಂದಿರುವ ಹಿಂದೂ ಧಾರ್ಮಿಕ ಆಚರಣೆಗಳಿಗೆ ಕಾನೂನು ನಿಯಮಗಳ ಹೆಸರಿನಲ್ಲಿ ಅಡ್ಡಿಪಡಿಸಲಾಗುತ್ತಿದೆ. ಜೂಜು ರಹಿತ ಕೋಳಿ ಅಂಕಕ್ಕೂ ಅವಕಾಶ ನೀಡದ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಒಬ್ಬೇ ಒಬ್ಬ ಕಾಂಗ್ರೆಸ್ ನಾಯಕವೂ ಪ್ರಯತ್ನಿಸದೇ, ಇದೀಗ ಪಾದಯಾತ್ರೆ ಮಾಡುವುದಾದರೆ ಜನರು ನಗುತ್ತಾರೆ ಎಂದು ಕಾಮತ್ ಹೇಳಿದರು.

ಹಿಂದಿನ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ–1ರ ಅನುದಾನವನ್ನು ಈಗಿನ ಸರ್ಕಾರ ತಡೆಹಿಡಿದಿದ್ದು, ಇದರಿಂದಾಗಿ ಹಲವು ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ದೇವಸ್ಥಾನಗಳಿಗೆ ಮಂಜೂರಾಗಿದ್ದ ಅನುದಾನಗಳನ್ನೂ ಸಹ ತಡೆಹಿಡಿಯಲಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:  ಬೆಲ್ ಬಾಟಮ್ ನಿರ್ಮಾಪಕರಿಂದ ‘ಹುಬ್ಬಳ್ಳಿ ಹಂಟರ್ಸ್’ ಘೋಷಣೆ

ಹೋರಾಟದ ಫಲವಾಗಿ ಸ್ಥಾಪನೆಯಾದ ನಾರಾಯಣ ಗುರು ನಿಗಮ, ಬಂಟ್ಸ್ ನಿಗಮಗಳಿಗೆ ಇದುವರೆಗೆ ಅಧ್ಯಕ್ಷರ ನೇಮಕವಾಗಿಲ್ಲ, ಅನುದಾನವೂ ಬಿಡುಗಡೆ ಆಗಿಲ್ಲ. ಅದೇ ರೀತಿ ತುಳು ನಿಗಮ, ಕೊಂಕಣಿ ನಿಗಮ, ಬ್ಯಾರಿ ನಿಗಮ, ಕೊಡವ ನಿಗಮ ಸೇರಿದಂತೆ ಬಹುತೇಕ ನಿಗಮಗಳಿಗೆ ಒಂದು ರೂಪಾಯಿ ಸಹ ನೀಡಿಲ್ಲ ಎಂದು ಟೀಕಿಸಿದರು.

ಭ್ರಷ್ಟಾಚಾರಕ್ಕೆ ಅನುಕೂಲವಾಗುವಂತೆ ಮೂಡಾದ ಪ್ರಮುಖ ಕಾರ್ಯಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿದ ಶಾಸಕರು, ಆರೋಗ್ಯ ಕ್ಷೇತ್ರ ಸೇರಿದಂತೆ ಹೊರಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹಲವಾರು ಸಿಬ್ಬಂದಿಗೆ ಇದುವರೆಗೆ ವೇತನ ಪಾವತಿಯಾಗಿಲ್ಲ ಎಂದರು. ಬಜೆಟ್‌ನಲ್ಲಿ ನೀಡಿದ ಭರವಸೆಗಳಂತೆ ನಡೆದುಕೊಳ್ಳದೇ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ ಎಂದು ದೂರಿದರು.

ಇದನ್ನೂ ಓದಿ:  24ರಂದು ಅಥಣಿಗೆ ಕ್ರೇಜಿಸ್ಟಾರ್ ರವಿಚಂದ್ರನ್

ಈ ಎಲ್ಲಾ ಗಂಭೀರ ಸಮಸ್ಯೆಗಳ ಕುರಿತು ಒಬ್ಬೇ ಒಬ್ಬ ಜವಾಬ್ದಾರಿಯುತ ಕಾಂಗ್ರೆಸ್ ನಾಯಕ ಧ್ವನಿ ಎತ್ತಿದ್ದಾರಾ? ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದರು.

Previous articleಕರ್ಣನ ಅಬ್ಬರಕ್ಕೆ ನಡುಗಿದ ರಮೇಶ್: ಮಗನ ಕೈಯಲ್ಲೇ ಬಯಲಾಯ್ತು ತಂದೆಯ ಕ್ರೂರ ಮುಖವಾಡ!