ಬೆಂಗಳೂರು: ರಾಜ್ಯದಾದ್ಯಂತ ಚಳಿಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ತಾಪಮಾನ ಗಣನೀಯವಾಗಿ ಕುಸಿತ ಕಂಡಿದೆ. ಹೀಗಾಗಿ ಚಳಿಯ ಜೊತೆಗೆ ದಟ್ಟವಾದ ಮಂಜು ಮುಸುಕಿದ ವಾತಾವರಣವಿರುವುದರಿಂದ ಸಾರ್ವಜನಿಕರು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ತೀವ್ರ ಎಚ್ಚರಿಕೆ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ (IMD) ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ ದಾಖಲು: ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 15°C ಗೆ ಇಳಿಕೆಯಾಗಿದ್ದು, ಮುಂಜಾನೆ ಮಲೆನಾಡಿನ ಅನುಭವವಾಗುತ್ತಿದೆ. ಹಾಗೇ ದಟ್ಟ ಮಂಜಿನಿಂದಾಗಿ ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ದೃಶ್ಯದೂರ (Visibility) ಕಡಿಮೆಯಾಗಿದೆ. ಇದರಿಂದ ವಿಮಾನ ಸಂಚಾರ ಹಾಗೂ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆಯ ಪ್ರಮುಖ ಸೂಚನೆಗಳು: ಚಳಿಯ ತೀವ್ರತೆ ಹೆಚ್ಚಿರುವ ಕಾರಣ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ತಡೆಯಲು ಹವಾಮಾನ ಇಲಾಖೆ ಈ ಕೆಳಗಿನ ಮಾರ್ಗಸೂಚಿಗಳನ್ನು ನೀಡಿದೆ.
ಮನೆಯೊಳಗೇ ಇರಿ: ಮುಂಜಾನೆ 9 ಗಂಟೆಯವರೆಗೆ ಚಳಿಯ ಪ್ರಭಾವ ಹೆಚ್ಚಿರುವುದರಿಂದ ಅನಗತ್ಯವಾಗಿ ಹೊರಗೆ ಹೋಗಬಾರದು. ಬೆಳಗಿನ ವಾಯುವಿಹಾರಕ್ಕೆ ಹೋಗುವವರು ಸೂರ್ಯನ ಬಿಸಿಲು ಬಂದ ನಂತರ ಹೋಗುವುದು ಉತ್ತಮ.
ಬೆಚ್ಚನೆಯ ಉಡುಪು: ಹೊರಬರುವಾಗ ಸ್ವೆಟರ್, ಜರ್ಕಿನ್, ಕಿವಿಗಳಿಗೆ ಮಫ್ಲರ್ ಅಥವಾ ಸ್ಕಾರ್ಫ್ ಧರಿಸುವುದು ಕಡ್ಡಾಯ. ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಉಣ್ಣೆಯ ಬಟ್ಟೆಗಳು ಧರಿಸುವುದು ಉತ್ತಮ ಎನ್ನಲಾಗುತ್ತದೆ.
ಆಹಾರ ಕ್ರಮ: ತಣ್ಣನೆಯ ಆಹಾರ ಮತ್ತು ಪಾನೀಯಗಳನ್ನು ಸೇವಿಸಬೇಡಿ. ಹಾಗೇ ಸಮತೋಲಿತ ಮತ್ತು ಪೌಷ್ಟಿಕಾಂಶಯುಕ್ತ ಬಿಸಿ ಆಹಾರವನ್ನು ಸೇವಿಸಿ. ಜೊತೆಗೆ ದೇಹಕ್ಕೆ ಉಷ್ಣತೆ ನೀಡುವಂತಹ ಕಾಳುಗಳು, ಶುಂಠಿ ಚಹಾ ಅಥವಾ ಕಷಾಯ ಸೇವನೆ ಮಾಡಿ ಆರೋಗ್ಯಯುತವಾಗಿರಿ ಎಂದು IMD ಮುನ್ನಚ್ಚರಿಕೆ ನೀಡಿದೆ.
ವಾಹನ ಸವಾರರಿಗೆ ಎಚ್ಚರಿಕೆ: ಬೆಂಗಳೂರು ನಗರದಲ್ಲಿ ಹೆಚ್ಚು ವಾಹನ ಚಲಾಯಿಸುತಿದ್ದು, ಮುಂಜಾನೆ ಮಂಜು ಇರುವುದರಿಂದ ರಸ್ತೆಗಳು ಸರಿಯಾಗಿ ಕಾಣಿಸುವುದಿಲ್ಲ. ಹೀಗಾಗಿ ವಾಹನ ಚಾಲಕರು ‘ಫಾಗ್ ಲೈಟ್’ ಬಳಸಿ ಮತ್ತು ಅತ್ಯಂತ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು.
ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರ: ತೀವ್ರ ಚಳಿಯಿಂದಾಗಿ ಉಸಿರಾಟದ ತೊಂದರೆ, ಅಸ್ತಮಾ, ಸೈನಸ್ ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಸಮಸ್ಯೆ ಹೆಚ್ಚಾಗುವ ಸಂಭವವಿದೆ. ಅದೇ ರೀತಿ ಚರ್ಮದ ಅಲರ್ಜಿ ಅಥವಾ ಅತಿಯಾದ ಶೀತ ಉಂಟಾದಲ್ಲಿ IMD ತಕ್ಷಣ ವೈದ್ಯರನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಮುಂದಿನ ದಿನಗಳ ಮುನ್ಸೂಚನೆ: ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಶೀತಗಾಳಿ (Cold Wave) ಇನ್ನೂ ಎರಡು-ಮೂರು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಕನಿಷ್ಠ ತಾಪಮಾನವು ಇನ್ನೂ 1 ರಿಂದ 2 ಡಿಗ್ರಿಗಳಷ್ಟು ಕುಸಿಯಬಹುದು ಎಂದು ಅಂದಾಜಿಸಲಾಗಿದೆ.
ರೈತರು ತಮ್ಮ ಜಾನುವಾರುಗಳನ್ನು ಬೆಚ್ಚಗಿನ ಜಾಗದಲ್ಲಿ ಇರಿಸಲು ಮತ್ತು ಬೆಳೆಗಳಿಗೆ ಅಗತ್ಯವಿರುವ ಮುನ್ನೆಚ್ಚರಿಕೆ ವಹಿಸಲು ತಿಳಿಸಲಾಗಿದೆ.






















