ಯಾದಗಿರಿ: ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಪಂದ್ಯ ಮುಗಿಸಿಕೊಂಡು ಹೈದ್ರಾಬಾದ್‌ನಿಂದ ಯಾದಗಿರಿ ಮೂಲಕ ತಮ್ಮ ಊರಿಗೆ ತೆರಳುತ್ತಿದ್ದ ಮಾಜಿ ಸಚಿವ ರಾಜೂ ಗೌಡ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೊಳಗಾದ ಘಟನೆ ಕಳೆದ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಅದೃಷ್ಟವಶಾತ್, ಅಪಘಾತದಲ್ಲಿ ರಾಜೂ ಗೌಡ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನೆರೆಯ ವಿಶಾಖಪಟ್ಟಣದಿಂದ ಸಿಸಿಎಲ್ ಪಂದ್ಯದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ವೇಳೆ ಯಾದಗಿರಿ ನಗರದ ಗಂಜ್ ಪ್ರದೇಶದ ಹೈವೈ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ರಾಜೂ ಗೌಡ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಒಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಕಾರು ತಿರುಗಿಬಿದ್ದಿದೆ ಎನ್ನಲಾಗಿದೆ.
ಇದನ್ನೂ ಓದಿ: ಹೈಕಮಾಂಡ್ ಬೀದಿದಾಸಯ್ಯ ಸಿಎಂ ಮಾಡಿದರೂ ಒಪ್ಪಬೇಕಾಗುತ್ತದೆ
ಅಪಘಾತದ ಪರಿಣಾಮ ಕಾರು ಸಂಪೂರ್ಣವಾಗಿ ನುಜ್ಜು ನುಗ್ಗಾಗಿ ಹಾನಿಗೊಳಗಾಗಿದೆ. ಕಾರಿನ ಸ್ಥಿತಿ ಕಂಡ ಸ್ಥಳೀಯರು ಕೆಲ ಕ್ಷಣ ಆತಂಕಗೊಂಡರೂ, ರಾಜೂ ಗೌಡ ಅವರು ಗಂಭೀರ ಗಾಯಗಳಿಂದ ಪಾರಾಗಿರುವುದು ನಿಟ್ಟುಸಿರು ಬಿಡುವಂತಾಗಿದೆ. ಅವರಿಗೆ ಅಲ್ಪಸ್ವಲ್ಪ ತರಚಿದ ಗಾಯಗಳಾಗಿದ್ದು, ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಪ್ರಥಮ ಚಿಕಿತ್ಸೆ ಪಡೆದುಕೊಂಡ ಬಳಿಕ ರಾಜೂ ಗೌಡ ಅವರು ಮನೆಗೆ ವಾಪಸ್ಸಾಗಿದ್ದು, ಪ್ರಸ್ತುತ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ಕುಟುಂಬದವರು ಹಾಗೂ ಆಪ್ತ ವಲಯದಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಬಳ್ಳಾರಿ: ಸಿದ್ದರಾಮಯ್ಯ ಕಾಂಗ್ರೆಸ್‌ನ ಕೊನೆಯ ಸಿಎಂ – ಕಾರಜೋಳ
ಘಟನೆಯ ಸುದ್ದಿ ತಿಳಿದ ಕೂಡಲೇ ಅವರ ಬೆಂಬಲಿಗರು, ಸ್ನೇಹಿತರು ಹಾಗೂ ರಾಜಕೀಯ ವಲಯದ ಮುಖಂಡರು ಆತಂಕ ವ್ಯಕ್ತಪಡಿಸಿ, ಅವರ ಆರೋಗ್ಯ ವಿಚಾರಿಸಿದ್ದಾರೆ. ಈ ಅಪಘಾತದಿಂದಾಗಿ ದೊಡ್ಡ ಅನಾಹುತ ತಪ್ಪಿದ್ದು, ಅಭಿಮಾನಿಗಳು ಹಾಗೂ ಬೆಂಬಲಿಗರು ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ಕಾರಣವಾದ ಟ್ರಕ್ ಚಾಲಕನ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.























