ಹೈಕಮಾಂಡ್ ಹೇಳಿದರೆ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗುತ್ತಾರೆ
ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತು ಯಾವುದೇ ಗೊಂದಲ ಅಥವಾ ತಿಕ್ಕಾಟಗಳಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ. ನಮ್ಮದು ಹೈಕಮಾಂಡ್ ಪಕ್ಷವಾಗಿದ್ದು, ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.
ಶನಿವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್ ಖಾನ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ದೆಹಲಿ ಭೇಟಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, “ಉಪ ಮುಖ್ಯಮಂತ್ರಿ ಅವರು ಕೆಪಿಸಿಸಿ ಉಸ್ತುವಾರಿಯೂ ಹೌದು. ಹೀಗಾಗಿ ದೆಹಲಿಗೆ ಹೋಗುವುದು, ಅಲ್ಲಿನ ನಾಯಕರನ್ನು ಭೇಟಿ ಮಾಡುವುದು ಸಹಜ. ಇದನ್ನು ಎಲ್ಲ ಸಚಿವರೂ ಮಾಡುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಅಥವಾ ರಾಜಕೀಯ ಊಹಾಪೋಹಗಳಿಗೆ ಆಸ್ಪದವಿಲ್ಲ” ಎಂದು ತಿಳಿಸಿದರು.
ಯಾವುದೇ ಕ್ರಾಂತಿಯೂ ನಡೆಯಲಿಲ್ಲ: ಅಧಿಕಾರ ಹಂಚಿಕೆ ಕುರಿತಂತೆ ನಡೆಯುತ್ತಿದ್ದ ‘ನವೆಂಬರ್ ಕ್ರಾಂತಿ’ ವಿಚಾರ ಈಗಾಗಲೇ ಮುಗಿದ ಅಧ್ಯಾಯವಾಗಿದೆ ಎಂದು ಹೇಳಿದ ಅವರು, “ನವೆಂಬರ್ ಆಯ್ತು, ಡಿಸೆಂಬರ್ ಹೋಯ್ತು, ಸಂಕ್ರಾಂತಿಯೂ ಕಳೆದುಹೋಯ್ತು. ಯಾವುದೇ ಕ್ರಾಂತಿಯೂ ನಡೆಯಲಿಲ್ಲ. ಇನ್ನು ಮುಂದೆ ಯುಗಾದಿ ಬರುತ್ತದೆ. 2028ರವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ” ಎಂದು ಸ್ಪಷ್ಟವಾಗಿ ಹೇಳಿದರು.
ಹೈಕಮಾಂಡ್ ಬೀದಿದಾಸಯ್ಯ ಸಿಎಂ ಮಾಡಿದರೂ ಒಪ್ಪಬೇಕಾಗುತ್ತದೆ: ನಮ್ಮದು ಹೈಕಮಾಂಡ್ ಪಕ್ಷ ಎಂದು ಪುನರುಚ್ಚರಿಸಿದ ಜಮೀರ್, “ಹೈಕಮಾಂಡ್ ಹೇಳಿದರೆ ಡಿ.ಕೆ.ಶಿವಕುಮಾರ ಅವರೂ ಮುಖ್ಯಮಂತ್ರಿಯಾಗುತ್ತಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ನಾವು ಡಿ.ಕೆ.ಶಿವಕುಮಾರ ಅವರನ್ನು ಮುಖ್ಯಮಂತ್ರಿಯಾಗಿ ನೋಡಬೇಕು ಎಂದಿದ್ದೇವೆ. ಆದರೆ ಅಂತಿಮ ತೀರ್ಮಾನ ಹೈಕಮಾಂಡ್‌ದ್ದೇ. ಹೈಕಮಾಂಡ್ ಬೀದಿ ದಾಸಯ್ಯನನ್ನು ಸಿಎಂ ಮಾಡಿದರೂ ಒಪ್ಪಿಕೊಳ್ಳಬೇಕಾಗುತ್ತದೆ” ಎಂದು ವ್ಯಂಗ್ಯವಾಡಿದರು.
ಬಳ್ಳಾರಿಯಲ್ಲಿ ನಡೆದ ಇತ್ತೀಚಿನ ಘಟನೆ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಆ ಘಟನೆ ನಡೆಯಬಾರದಾಗಿತ್ತು. ಬಹಳ ವರ್ಷಗಳಿಂದ ಮಹರ್ಷಿ ವಾಲ್ಮೀಕಿ ಅವರ ಮೂರ್ತಿ ಸ್ಥಾಪಿಸುವ ಬೇಡಿಕೆ ಇತ್ತು. ಅದನ್ನು ಶಾಸಕ ಭರತ್ ರೆಡ್ಡಿ ಮಾಡಿದ್ದಾರೆ. ಇದು ಒಳ್ಳೆಯ ಕೆಲಸ. ಹಿರಿಯರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕಾಗಿತ್ತು. ಆದರೆ ಈಗ ಏನಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪಾದಯಾತ್ರೆ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಹುರಳಿಲ್ಲ” ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿ ಚರ್ಚೆಗೆ ವಿರೋಧ ಪಕ್ಷದ ನಾಯಕ ಚರ್ಚೆಗೆ ಬರಲಿ: ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ ಎಂದು ಬಿಜೆಪಿ ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿದ ಜಮೀರ್ ಅಹ್ಮದ್ ಖಾನ್, “ಬಿಜೆಪಿ ತಮ್ಮ ಆಡಳಿತಾವಧಿಯಲ್ಲಿ ಜನರಿಗೆ ಒಂದು ಮನೆ ಕೂಡ ಕೊಟ್ಟಿಲ್ಲ. ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರಿಗೆ ನಾನು ಸವಾಲು ಹಾಕುತ್ತೇನೆ. ಬೇಕಿದ್ದರೆ ಚರ್ಚೆಗೆ ಬರಲಿ. ಸರ್ಕಾರ ದಿವಾಳಿಯಾಗಿಲ್ಲ. ಗ್ಯಾರಂಟಿಗಳ ನಡುವೆಯೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ” ಎಂದು ಹೇಳಿದರು.























