ಬಳ್ಳಾರಿ ಗಲಭೆ ಪ್ರಕರಣ: 26 ಆರೋಪಿಗಳಿಗೆ ನ್ಯಾಯಾಂಗ ಬಂಧನ

0
4

ಬೆಂಗಳೂರು: ಬಳ್ಳಾರಿಯಲ್ಲಿ ಶಾಸಕ ಜನಾರ್ದನರೆಡ್ಡಿ ನಿವಾಸದ ಬಳಿ ಬ್ಯಾನರ್ ಕಟ್ಟುವ ವಿಚಾರವಾಗಿ ಉಂಟಾದ ಗಲಾಟೆ ಹಾಗೂ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೊಡ್ಡ ಮಟ್ಟದ ಕ್ರಮ ಕೈಗೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಒಟ್ಟು 26 ಜನರನ್ನು ಬಳ್ಳಾರಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಳ್ಳಾರಿ ಗಲಾಟೆ–ಫೈರಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಮೂವರು ಖಾಸಗಿ ಗನ್ ಮ್ಯಾನ್‌ಗಳು, 10 ಮಂದಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ 10 ಮಂದಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಒಟ್ಟು 26 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಗಲಾಟೆ, ಹಲ್ಲೆ, ಫೈರಿಂಗ್ ಮತ್ತು ಸಾರ್ವಜನಿಕ ಶಾಂತಿ ಭಂಗಕ್ಕೆ ಸಂಬಂಧಿಸಿದ ಅಂಶಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬಂಧನ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ:  ಬಳ್ಳಾರಿ ಗಲಭೆ ಪ್ರಕರಣ: FSL ತಂಡಕ್ಕೆ ಮತ್ತೊಂದು ಬುಲೆಟ್ ಪತ್ತೆ

ಬಂಧಿತ ಆರೋಪಿಗಳನ್ನು ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದ ಗಂಭೀರತೆ, ಸಾರ್ವಜನಿಕ ಭದ್ರತೆ ಮತ್ತು ಮುಂದಿನ ತನಿಖೆಯ ಅಗತ್ಯತೆ ಪರಿಗಣಿಸಿದ ನ್ಯಾಯಾಲಯ, ಎಲ್ಲಾ 26 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

ಬಳ್ಳಾರಿಯಲ್ಲಿ ನಡೆದ ಈ ಗಲಾಟೆ ಮತ್ತು ಫೈರಿಂಗ್ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ತೀವ್ರ ಆತಂಕ ಮೂಡಿಸಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಕೋ ತಂಡ, ಎಫ್‌ಎಸ್‌ಎಲ್ ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಬುಲೆಟ್‌ಗಳ ಪತ್ತೆ ಮತ್ತು ಫೈರಿಂಗ್‌ಗೆ ಬಳಸಿದ ಆಯುಧಗಳ ಕುರಿತು ತನಿಖೆ ಮುಂದುವರಿದಿದೆ.

ಇದನ್ನೂ ಓದಿ:  ಹಿರಿಯ ಯಕ್ಷಗಾನ ಭಾಗವತರು ಕಡತೋಕಾ ಲಕ್ಷ್ಮೀನಾರಾಯಣ ನಿಧನ

ಪೊಲೀಸರು ಪ್ರಕರಣದ ಎಲ್ಲ ಆಯಾಮಗಳನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳು ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Previous articleಬಜೆಟ್ ನಂತರ ಅಧಿಕಾರ ಹಂಚಿಕೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ