“5 ವರ್ಷ ನಾನೇ ಬಾಸ್..!” ಕುರ್ಚಿ ಕದನದ ಗೊಂದಲಕ್ಕೆ ಸಿದ್ದರಾಮಯ್ಯ ಫುಲ್ ಸ್ಟಾಪ್

0
2

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವು ಕೇವಲ ಜನಸಾಮಾನ್ಯರ ಸಮಸ್ಯೆಗಳ ಚರ್ಚೆಗೆ ಮಾತ್ರವಲ್ಲದೆ, ಆಡಳಿತ ಪಕ್ಷದ “ಕುರ್ಚಿ ಕದನ”ದ ಕುತೂಹಲಕಾರಿ ಚರ್ಚೆಗೂ ಸಾಕ್ಷಿಯಾಯಿತು.

ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದ್ದ “ಅಧಿಕಾರ ಹಂಚಿಕೆ” ಹಾಗೂ “ಎರಡೂವರೆ ವರ್ಷದ ಅವಧಿ” ಎಂಬ ಗೊಂದಲಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲೇ ಖಡಕ್ ಉತ್ತರ ನೀಡಿದ್ದಾರೆ.

ಅಶೋಕ್‌ಗೆ ಸಿಎಂ ತಿರುಗೇಟು: ಕಲಾಪದ ನಡುವೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮುಖ್ಯಮಂತ್ರಿಗಳ ಕಾಲೆಳೆಯುವ ಪ್ರಯತ್ನ ಮಾಡಿದರು. “ಕಳೆದ ನಾಲ್ಕು ದಿನಗಳಿಂದ ನೀವು ಸುಸ್ತಾದಂತೆ ಕಾಣುತ್ತಿದ್ದೀರಿ, ನಿಮಗೆ ರಾಜಕೀಯವಾಗಿ ನಿಶ್ಯಕ್ತಿ ಆವರಿಸಿದೆಯೇ?” ಎಂದು ವ್ಯಂಗ್ಯವಾಡಿದರು.

ಇದಕ್ಕೆ ಸಿದ್ದರಾಮಯ್ಯ ನಗುನಗುತ್ತಲೇ, “ನನಗೆ ದೈಹಿಕವಾಗಿ ಸ್ವಲ್ಪ ಸುಸ್ತು ಇರಬಹುದು, ಆದರೆ ರಾಜಕೀಯವಾಗಿ ನಾನು ಸದಾ ಚೈತನ್ಯಶೀಲ. ಅಂತಹ ನಿಶ್ಯಕ್ತಿ ಆವರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಖಡಕ್ ಆಗಿ ಉತ್ತರಿಸಿದರು.

ಐದು ವರ್ಷವೂ ನಾನೇ ಮುಖ್ಯಮಂತ್ರಿ: ಅಧಿಕಾರ ಹಂಚಿಕೆಯ ಬಗ್ಗೆ ಕೇಳಿಬರುತ್ತಿರುವ ವದಂತಿಗಳಿಗೆ ಬ್ರೇಕ್ ಹಾಕಿದ ಸಿಎಂ, “ಎರಡೂವರೆ ವರ್ಷಕ್ಕೆ ಮಾತ್ರ ಮುಖ್ಯಮಂತ್ರಿ ಎಂಬ ಯಾವುದೇ ಒಪ್ಪಂದ ಹೈಕಮಾಂಡ್ ಮಟ್ಟದಲ್ಲಿ ನಡೆದಿಲ್ಲ. ರಾಜ್ಯದ ಶಾಸಕರು ನನ್ನನ್ನು ಪೂರ್ಣ ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ. ಹೈಕಮಾಂಡ್ ಕೂಡ ನನ್ನ ಪರವಾಗಿಯೇ ಇದೆ. ಅವರು ಹೇಳುವವರೆಗೂ ನಾನೇ ಈ ಸ್ಥಾನದಲ್ಲಿ ಮುಂದುವರಿಯುತ್ತೇನೆ” ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಪರೋಕ್ಷವಾಗಿ ತಮ್ಮ ವಿರೋಧಿಗಳಿಗೆ ‘ಫುಲ್ ಟರ್ಮ್ ಸಿಎಂ’ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸಿದರು.

ನಾವೇ ನಿರ್ದೇಶಕರು, ನಾವೇ ಆ್ಯಕ್ಟರ್‌ಗಳು!: ಸಿದ್ದರಾಮಯ್ಯ ತಮ್ಮ ವಿಶಿಷ್ಟ ಶೈಲಿಯಲ್ಲಿ ಮಾತು ಮುಂದುವರಿಸಿ, “ನಮ್ಮ ಪಕ್ಷದ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳುತ್ತೇವೆ. ನಮಗೆ ಯಾರೂ ಹೊರಗಿನವರು ಡೈರೆಕ್ಷನ್ ನೀಡುವ ಅಗತ್ಯವಿಲ್ಲ. ನಾವೇ ಕಥೆಗಾರರು, ನಾವೇ ನಿರ್ದೇಶಕರು, ನಾವೇ ನಿರ್ಮಾಪಕರು ಮತ್ತು ನಾವೇ ನಟರು” ಎನ್ನುವ ಮೂಲಕ ಪಕ್ಷದ ಮೇಲಿನ ತಮ್ಮ ಹಿಡಿತವನ್ನು ಪ್ರದರ್ಶಿಸಿದರು.

“ಜನರ ಆಶೀರ್ವಾದ ಇರುವವರೆಗೂ ಅಧಿಕಾರ ಇರುತ್ತದೆ, ನಾನು ಹಣೆಬರಹಕ್ಕಿಂತ ಜನರ ಬೆಂಬಲವನ್ನು ನಂಬುತ್ತೇನೆ” ಎಂದು ಹೇಳುವ ಮೂಲಕ ಅಧಿಕಾರ ಹಂಚಿಕೆಯ ಚರ್ಚೆಗಳಿಗೆ ಸದ್ಯಕ್ಕೆ ತೆರೆ ಎಳೆದಿದ್ದಾರೆ.ಸಿದ್ದರಾಮಯ್ಯ ಈ ಹೇಳಿಕೆಯು ಕಾಂಗ್ರೆಸ್ ಒಳಗಿನ ಬಣ ರಾಜಕೀಯಕ್ಕೆ ಹೊಸ ತಿರುವು ನೀಡಿದ್ದು, ಕುರ್ಚಿ ಆಕಾಂಕ್ಷಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದಂತಿದೆ.

Previous articleಡಿಕೆಶಿ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಗೆ ಹುಬ್ಬಳ್ಳಿಯಲ್ಲಿ ಚಿಕಿತ್ಸೆ, ಆಸ್ಪತ್ರೆಗೆ ಭೇಟಿ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್