ನವದೆಹಲಿ: ರಾಷ್ಟ್ರಗೀತೆ ‘ವಂದೇ ಮಾತರಂ’ಗೆ ನೂರು ವರ್ಷ ತುಂಬಿದ ಸಂದರ್ಭವನ್ನು ಪ್ರಧಾನಿ ನರೇಂದ್ರ ಮೋದಿ ನೆನೆದರು. ಹಾಗೇ ಆ ಸಮಯದಲ್ಲಿ ದೇಶದ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು ಮತ್ತು ಭಾರತದ ಸಂವಿಧಾನವನ್ನು ‘ಉಸಿರುಗಟ್ಟಿಸಲಾಗಿತ್ತು’ ಎಂದು ಗಂಭೀರ ಹೇಳಿಕೆ ನೀಡಿದ್ದಾರೆ.
ಸೋಮವಾರ ಲೋಕಸಭೆಯಲ್ಲಿ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಐತಿಹಾಸಿಕ ಸಂದರ್ಭದ ಕುರಿತು ಚರ್ಚೆಯನ್ನು ಪ್ರಾರಂಭಿಸಿ ಮಾತನಾಡಿದ ಪ್ರಧಾನಿ, ಇತಿಹಾಸದ ವಿವಿಧ ಮೈಲಿಗಲ್ಲುಗಳನ್ನು ಸ್ಮರಿಸಿದರು.
ಹಾಗೇ “ವಂದೇ ಮಾತರಂಗೆ 50 ವರ್ಷ ತುಂಬಿದಾಗ, ನಮ್ಮ ದೇಶವು ವಸಾಹತುಶಾಹಿಯ ಅಡಿಯಲ್ಲಿ ತತ್ತರಿಸುತಿತ್ತು. ಆದರೆ 100 ವರ್ಷವಾದಾಗ, ದೇಶವು ತುರ್ತು ಪರಿಸ್ಥಿತಿಯ ಕರಾಳ ಆವರಣದಲ್ಲಿ ಬಂಧಿಯಾಗಿತ್ತು,” ಎಂದು ಪ್ರಧಾನಿ ಬೇಸರ ವ್ಯಕ್ತ ಪಡಿಸಿದರು.
ಹೀಗಾಗಿ 1975 ರಲ್ಲಿ ಘೋಷಿಸಲಾದ ತುರ್ತು ಪರಿಸ್ಥಿತಿಯನ್ನು ಪರೋಕ್ಷವಾಗಿ ಉಲ್ಲೇಖಿಸಿದರು. ಅದು ನಮ್ಮ ಇತಿಹಾಸದ “ಕರಾಳ ಅಧ್ಯಾಯ” ಎಂದು ಬಣ್ಣಿಸಿದರು. ಹಾಗೆ “ಆ ಸಮಯದಲ್ಲಿ ದೇಶಭಕ್ತಿ ಹೊಂದಿದ್ದ, ರಾಷ್ಟ್ರಕ್ಕಾಗಿ ಪ್ರಾಣ ಸಮರ್ಪಿಸಲು ಸಿದ್ಧರಿದ್ದವರು ಜೈಲಿನಲ್ಲಿ ಬಂಧಿಯಾಗಿದ್ದರು”.
ಈ ಹೇಳಿಕೆಯು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ನಡೆದ ರಾಜಕೀಯ ಬಂಧನಗಳು ಮತ್ತು ನಾಗರಿಕ ಹಕ್ಕುಗಳ ನಿರ್ಬಂಧಗಳನ್ನು ಒತ್ತಿಹೇಳುತ್ತದೆ ಎನ್ನಲಾಗುತ್ತಿದೆ.
ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಪ್ರಧಾನಿ ಮೋದಿ ಹೇಳಿದರು. ಸ್ವಾತಂತ್ರ್ಯ ಚಳವಳಿಯ ವೇಳೆ ವಂದೇ ಮಾತರಂ ಗೀತೆಯು ಇಡೀ ದೇಶಕ್ಕೆ ʻಶಕ್ತಿ ಮತ್ತು ಸ್ಫೂರ್ತಿʼ ನೀಡಿತ್ತು ಎಂಬುದನ್ನು ಸ್ಮರಿಸಿದರು.
ಇದೆ ಶುಭ ಸಂದರ್ಭದಲ್ಲಿ ನಾವು ವಂದೇ ಮಾತರಂನ ಹೆಮ್ಮೆಯನ್ನು ಮರು ಸೃಷ್ಟಿಸಬೇಕು ಎಂದು ಕರೆ ನೀಡಿದರು. ಡಿ.1ರಿಂದ ಆರಂಭವಾದ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಪ್ರಧಾನಿಯವರ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ ಎನ್ನಬಹುದು.





















