ಜಾಗತಿಕ ಒತ್ತಡದ ನಡುವೆ ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ: S-400 ಮತ್ತು Su-57 ಮೇಲೆ ಜಗತ್ತಿನ ಕಣ್ಣು, ಮೋದಿ ಜೊತೆ 23ನೇ ವಾರ್ಷಿಕ ಶೃಂಗಸಭೆ

0
11

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಸಂಜೆ ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿಳಿದಿದ್ದಾರೆ.

ರಷ್ಯಾವು ಉಕ್ರೇನ್ ಯುದ್ಧದಲ್ಲಿ ಸಾಧಿಸಿದ ಮೇಲುಗೈಯಿಂದ ಉತ್ಸಾಹದಲ್ಲಿರುವ ಈ ಸಮಯದಲ್ಲಿ ನಡೆಯುತ್ತಿರುವ ಪುಟಿನ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಈ ಉನ್ನತ ಮಟ್ಟದ ಸಭೆಯತ್ತ ಇಡೀ ಜಗತ್ತಿನ ಚಿತ್ತ ನೆಟ್ಟಿದೆ.

ಶುಕ್ರವಾರ (ಡಿಸೆಂಬರ್ 5) ಮೋದಿ ಅವರೊಂದಿಗೆ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಪುಟಿನ್, S-400 ವಾಯು ರಕ್ಷಣಾ ವ್ಯವಸ್ಥೆ ಮತ್ತು ಹೊಸದಾಗಿ ಸುಖೋಯ್ Su-57 ಯುದ್ಧ ವಿಮಾನಗಳ ಖರೀದಿಯಂತಹ ಪ್ರಮುಖ ರಕ್ಷಣಾ ಒಪ್ಪಂದಗಳ ಕುರಿತು ಮಾತುಕತೆ ನಡೆಸುವ ನಿರೀಕ್ಷೆಯಿದೆ. ಭಾರತವು ರಷ್ಯಾದ ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರವಾಗಿದೆ.

2021ರ ಭೇಟಿಯ ಮೆಲುಕು: ಪುಟಿನ್ ಅವರ ಇದು, ಕಳೆದ ನಾಲ್ಕು ವರ್ಷಗಳಲ್ಲಿ ಭಾರತಕ್ಕೆ ಎರಡನೇ ಭೇಟಿಯಾಗಿದೆ. ಕೊನೆಯ ಬಾರಿ 2021ರ ಡಿಸೆಂಬರ್ 6 ರಂದು 21ನೇ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

ಕೋವಿಡ್ ಕಾರಣದಿಂದ ಕೇವಲ ಐದು ತಾಸಿಗೆ ಮೊಟಕುಗೊಂಡಿದ್ದ ಆ ಭೇಟಿಯಲ್ಲಿ, ಉಭಯ ನಾಯಕರು ರಕ್ಷಣೆ, ಇಂಧನ ಮತ್ತು ದೀರ್ಘಕಾಲದ ಕಾರ್ಯತಂತ್ರದ ಪಾಲುದಾರಿಕೆ ಕುರಿತು ಚರ್ಚಿಸಿದ್ದರು.

ಆಗ 2+2 ಸಂವಾದ ಆರಂಭಿಸುವ ಮತ್ತು ಮಿಲಿಟರಿ ತಾಂತ್ರಿಕ ಸಹಕಾರ ವಿಸ್ತರಿಸುವ ಕುರಿತು ಮಾತುಕತೆ ನಡೆದಿತ್ತು. ಅಫ್ಘಾನಿಸ್ತಾನದ ಸ್ಥಿತಿ, ಕೋವಿಡ್ ನಂತರದ ಆರ್ಥಿಕ ಚೇತರಿಕೆ, ಮತ್ತು INSTC (ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್) ಮೂಲಕ ಸಂಪರ್ಕ ಬಲಪಡಿಸುವ ಕುರಿತು ಸಮ್ಮತಿಸಲಾಗಿತ್ತು.

ಆ ಭೇಟಿಯ ಮೂರೇ ತಿಂಗಳ ನಂತರ ರಷ್ಯಾ ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ಆರಂಭಿಸಿತ್ತು.

ಅಮೆರಿಕದ ಒತ್ತಡ ಮತ್ತು ತೈಲ ಖರೀದಿ: ಉಕ್ರೇನ್ ಸಂಘರ್ಷದ ನಂತರ ಜಾಗತಿಕ ಸಮುದಾಯ ರಷ್ಯಾ ಮೇಲೆ ನಿರ್ಬಂಧ ವಿಧಿಸಿರುವ ಕಾರಣ, ರಷ್ಯಾ ರಿಯಾಯಿತಿ ದರದಲ್ಲಿ ಭಾರತಕ್ಕೆ ತೈಲ ಪೂರೈಸುತ್ತಿದ್ದು, ಭಾರತವು ದೊಡ್ಡ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಖರೀದಿಸುತ್ತಿದೆ.

ಈ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವಂತೆ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ, ಈ ಶೃಂಗಸಭೆ ಆರ್ಥಿಕ ಮತ್ತು ರಾಜಕೀಯ ದೃಷ್ಟಿಕೋನದಿಂದ ಮಹತ್ವ ಪಡೆದುಕೊಂಡಿದೆ.

Previous articleಶಓಮಿ ಇಂಡಿಯಾದಿಂದ ತೆಳುವಾದ ವಿನ್ಯಾಸ, ತಲ್ಲೀನಗೊಳಿಸುವ ಡಿಸ್ಪ್ಲೇ ಮತ್ತು ವಿಶ್ವಾಸಾರ್ಹ ಕಾರ್ಯಕ್ಷಮತೆಯ ರೆಡ್ಮಿ 15ಸಿ 5ಜಿ ಬಿಡುಗಡೆ
Next articleಸಂಸ್ಕೃತ ವಿವಿ ಆವರಣದಲ್ಲಿ ನಡೆದ ಏಳು ದಿನಗಳ ರಾಷ್ಟ್ರೀಯ ಭಾರತೀಯ ಅನುಸಂಧಾನ ಪದ್ದತಿ ಕುರಿತ ಕಾರ್ಯಾಗಾರ

LEAVE A REPLY

Please enter your comment!
Please enter your name here