ಪ್ರಧಾನಿ ಮೋದಿ ವಾಗ್ದಾಳಿ: ರಾಜಕೀಯ ನಾಟಕ ಬಿಟ್ಟು ರಚನಾತ್ಮಕ ಚರ್ಚೆಗೆ ಬನ್ನಿ, ಬಿಹಾರ ಸೋಲಿನ ಹತಾಶೆ

0
36

ನವದೆಹಲಿ: ಸಂಸತ್‌ನ ಚಳಿಗಾಲದ ಅಧಿವೇಶನವು ಇಂದು ಆರಂಭವಾಗಿದೆ. ಅಧಿವೇಶನಕ್ಕೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರೋಧ ಪಕ್ಷಗಳ ನಡವಳಿಕೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷಗಳು ಬಿಹಾರ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಹತಾಶೆಯನ್ನು ಹೊರಹಾಕಲು ಸಂಸತ್ತನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಪ್ರಧಾನಿ ಮೋದಿ ನೇರ ವಾಗ್ದಾಳಿ ನಡೆಸಿದರು.

ಸಂಸತ್ ಭವನದ ಬಳಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು. ವಿರೋಧ ಪಕ್ಷಗಳು ಸಂಸತ್ತನ್ನು “ಕೇವಲ ಚುನಾವಣೆಯ ಸಿದ್ಧತೆಗೆ ಬಳಸಿಕೊಳ್ಳಲು ಅಥವಾ ಸೋಲಿನ ನಂತರ ಹತಾಶೆಯನ್ನು ಹೊರಹಾಕುವ ಒಂದು ಮಾರ್ಗವಾಗಿ ಬಳಸಿಕೊಳ್ಳುತ್ತಿವೆ” ಎಂದು ಪ್ರಧಾನಿ ಒತ್ತಿ ಹೇಳಿದರು.

ರಚನಾತ್ಮಕ ಚರ್ಚೆಗೆ ಕರೆ: ಸಂಸತ್ ಅಧಿವೇಶನವು ರಾಜಕೀಯ ನಾಟಕಗಳಿಗೆ ವೇದಿಕೆಯಾಗಬಾರದು ಎಂದು ಒತ್ತಿ ಹೇಳಿದ ಪ್ರಧಾನಿ, “ಸಂಸತ್ತು ರಚನಾತ್ಮಕ ಮತ್ತು ಫಲಿತಾಂಶ ಆಧಾರಿತ ಚರ್ಚೆಗೆ ವೇದಿಕೆಯಾಗಬೇಕು” ಎಂದು ಕರೆ ನೀಡಿದರು.

ಅಲ್ಲದೆ, ರಾಜಕೀಯದಲ್ಲಿ ಸಕಾರಾತ್ಮಕತೆಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು. ಬಿಹಾರ ಚುನಾವಣಾ ಫಲಿತಾಂಶವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಈ ಫಲಿತಾಂಶವು ದೇಶದ ಪ್ರಜಾಪ್ರಭುತ್ವದ ತಾಕತ್ತನ್ನು ಪ್ರದರ್ಶಿಸಿದೆ.

“ಸಂಸತ್ ಅಧಿವೇಶನವು ಸೋಲಿನಿಂದ ಹುಟ್ಟಿದ ಹತಾಶೆಗೆ ಯುದ್ಧಭೂಮಿಯಾಗಬಾರದು. ಹಾಗೆಯೇ ಗೆಲುವು ಸಾಧಿಸಿದ ಬಳಿಕ ದುರಹಂಕಾರದಿಂದ ವರ್ತಿಸುವ ವೇದಿಕೆಯೂ ಆಗಬಾರದು” ಎಂದು ಎಚ್ಚರಿಕೆಯ ಮಾತನಾಡಿದರು.

ಜವಾಬ್ದಾರಿ ಅರಿತು ನಡೆಯಲು ಸೂಚನೆ: ಪ್ರತಿಯೊಬ್ಬ ಸಾರ್ವಜನಿಕ ಪ್ರತಿನಿಧಿಯಾಗಿ ನಾವು ದೇಶದ ಜನರ ನಿರೀಕ್ಷೆಗಳಿಗೆ ಅನುಗುಣವಾಗಿ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕು. ಈ ಅಧಿವೇಶನವು ದೇಶದ ಬಗ್ಗೆ ಸಂಸತ್ತು ಏನು ಯೋಚಿಸುತ್ತದೆ ಮತ್ತು ದೇಶಕ್ಕಾಗಿ ಏನು ಮಾಡಲು ಬಯಸುತ್ತದೆ ಎಂಬುದರ ಮೇಲೆ ಕೇಂದ್ರೀಕರಿಸಬೇಕು ಎಂದು ಪ್ರಧಾನಿ ಆಶಿಸಿದರು.

“ವಿಪಕ್ಷಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು. ಆದರೆ ದುರದೃಷ್ಟವಶಾತ್, ಅವರಿಗೆ ಬಿಹಾರದ ಚುನಾವಣೆ ಫಲಿತಾಂಶವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಮೋದಿ ವಿರೋಧ ಪಕ್ಷಗಳನ್ನು ಟೀಕಿಸಿದರು.

ಚಳಿಗಾಲದ ಅಧಿವೇಶನವು ಇಂದು ಆರಂಭಗೊಂಡಿದ್ದು, ಡಿಸೆಂಬರ್ 19ರವರೆಗೆ ನಡೆಯಲಿದೆ ಎನ್ನಲಾಗುತ್ತಿದೆ.

Previous articleಗ್ಯಾಸ್ ಸಿಲಿಂಡರ್ ದರ ಮತ್ತೊಮ್ಮೆ ಇಳಿಕೆ
Next articleಇ-ಸ್ವತು ೨.೦ ತಂತ್ರಾಂಶಕ್ಕೆ ಚಾಲನೆ

LEAVE A REPLY

Please enter your comment!
Please enter your name here