ಕಿಕ್ಕೇರಿ: ಕಿಕ್ಕೇರಿ ಸಮೀಪದ ಗೊಂದಹಳ್ಳಿ ಗ್ರಾಮದಲ್ಲಿ ನೂತನ ದಂಡಮ್ಮ ದೇವಸ್ಥಾನದ 12 ದಿನಗಳ ಉದ್ಘಾಟನಾ ಆಚರಣೆ ನಡೆಯುತ್ತಿರುವ ವೇಳೆ, ರಾತ್ರೋರಾತ್ರಿ ಅಪರಿಚಿತ ದುಷ್ಕೃತ್ಯಕಾರರು ಕೋಣವನ್ನು ಬಲಿಕೊಟ್ಟು ವಾಮಾಚಾರ ನಡೆಸಿರುವ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ದೇವಾಲಯದ ಕಳಶೋತ್ಸವ ನಡೆದಿದ್ದು 12 ದಿನವೂ ವಿವಿಧ ಧಾರ್ಮಿಕ ಶಾಸ್ತ್ರೋಕ್ತ ವಿಧಿ ವಿಧಾನಗಳು, ಹೋಮ, ಹವನ ಸೇರಿದಂತೆ ಭಕ್ತಿ ಕಾರ್ಯಕ್ರಮಗಳು ಮುಗಿದು ದೇವಸ್ಥಾನ ಉದ್ಘಾಟನೆ ಗೊಂಡಿತ್ತು ಕಾರ್ಯಕ್ರಮದ ಕೊನೆಗೆ ಇನ್ನೊಂದು ದಿನ ಮಾತ್ರ ಬಾಕಿ ಇರುವಾಗಲೇ ಈ ಶೋಕಕಾರಿ ಘಟನೆ ಜರುಗಿದೆ. ರುಂಡವನ್ನು ಹೊತ್ತೊಯ್ದ ದುಷ್ಕರ್ಮಿಗಳು ರಕ್ತ ಚೆಲ್ಲಾಟ, ಮಡಿಕೆ,ಕುಡಿಕೆ, ಅರಿಶಿನ ಮತ್ತು ಕುಕುಂಮದ ಚದರಾಟವಾಡಿದ್ದಾರೆ.
ಗುರುವಾರ ಮಧ್ಯರಾತ್ರಿ ದುಷ್ಕೃತ್ಯಕಾರರು ಕೋಣವನ್ನು ಬಲಿಕೊಟ್ಟು ರುಂಡ, ಮುಂಡ ಬೇರ್ಪಡಿಸಿದ್ದು, ಮೃತದೇಹವನ್ನು ಸ್ಥಳದಲ್ಲೇ ಬಿಟ್ಟು ರುಂಡವನ್ನು ಕೊಂಡೊಯ್ದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸ್ಥಳದಲ್ಲಿ ರಕ್ತ ಚೆಲ್ಲಾಡಿದ್ದು, ಮಡಿಕೆ, ಕುಡಿಕೆ, ದಾರ, ಅರಿಶಿನ, ಕುಂಕುಮ ಮುಂತಾದ ವಾಮಾಚಾರದ ವಸ್ತುಗಳು ಚದರಾಡಿರುವುದು ಭೀತಿ ಹುಟ್ಟಿಸಿದೆ.
ಬೆಳಗ್ಗೆ ಜಮೀನಿಗೆ ತೆರಳಿದವರು ಈ ದೃಶ್ಯವನ್ನು ಕಂಡು ಬೆಚ್ಚಿಬಿದ್ದು ತಕ್ಷಣ ಗ್ರಾಮ ಮುಖಂಡರಿಗೆ ತಿಳಿಸಿದ್ದಾರೆ. ಸುದ್ದಿ ಕಾಡ್ಗಿಚ್ಚಿನಂತೆ ಗ್ರಾಮದಲ್ಲಿ ಹರಡಿದ್ದು, ಜನರು ಗುಂಪು ಗುಂಪಾಗಿ ಸ್ಥಳಕ್ಕೆ ಭೇಟಿ ನೀಡಿ ಘಟನೆ ವೀಕ್ಷಿಸುತ್ತಿದ್ದಾರೆ.
ಗ್ರಾಮಸ್ಥರಲ್ಲಿ ಆತಂಕ, “ಊರಿನ ಶಾಂತಿಗೆ ಭಂಗವಾಗುವ ಭೀತಿ”: ಘಟನೆಯ ಬಳಿಕ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದು, “ವಾಮಾಚಾರದಿಂದ ಊರಿನ ಶಾಂತಿ ಸಮಾಧಾನಕ್ಕೆ ಧಕ್ಕೆ ಉಂಟಾಗಬಹುದೇ?” ಎಂಬ ಭಯ ವ್ಯಾಪಿಸಿದೆ. ಅಂತರಂಗದ ದೇವಾಲಯದ ಕಾರ್ಯಕ್ರಮ ಸಮಾಪ್ತಿಯಾಗುವ ಮುನ್ನವೇ ಇಂತಹ ದುರಾಚಾರ ನಡೆದಿರುವುದರಿಂದ ಗ್ರಾಮಸ್ಥರು ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮುಖಂಡರಿಂದ ಸ್ಥಳ ಪರಿಶೀಲನೆ ಪೊಲೀಸ್ ದೂರು ದಾಖಲಾಗುತ್ತಿದೆ. ಸ್ಥಳಕ್ಕೆ ಮುಖಂಡರಾದ ನಂಜಣ್ಣ, ಅಣ್ಣೇಗೌಡ, ಮಂಜೇಗೌಡ, ಆನಂದ್, ಬೊಮ್ಮೇಗೌಡ, ಬಸವರಾಜು, ಕುಮಾರ್, ರಂಜಿತ್ ಮುಂತಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸ್ ದೂರು ದಾಖಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, “ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿರಲಿ, ಅವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


























