ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಉತ್ತರ ಕರ್ನಾಟಕದ ಯುವಜನತೆಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದ್ದು, ಅದರಲ್ಲಿ ಪ್ರಮುಖವಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 1ಸಾವಿರ ಹುದ್ದೆಗಳ ನೇಮಕಾತಿಗೆ ಹಸಿರು ನಿಶಾನೆ ಸಿಕ್ಕಿದೆ.
ವಾಯವ್ಯ ಸಾರಿಗೆ ಸಂಸ್ಥೆಯು 2019ರಲ್ಲೇ 1ಸಾವಿರ ಚಾಲಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಆದರೆ, ಕೋವಿಡ್-19 ಪಿಡುಗಿನ ಕಾರಣದಿಂದ ಸರ್ಕಾರವು 2020ರಲ್ಲಿ ನೇರ ನೇಮಕಾತಿಗಳಿಗೆ ತಡೆ ನೀಡಿತ್ತು. ಇದೀಗ ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ, ತಡೆಹಿಡಿಯಲಾಗಿದ್ದ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಸಂಪುಟ ಅನುಮೋದನೆ ನೀಡಿದೆ.
ವಿಶೇಷವೆಂದರೆ, ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ ಹೆಚ್ಚಾಗಲಿರುವುದರಿಂದ ಮತ್ತು ಸಂಸ್ಥೆಯಲ್ಲಿ ನಿರ್ವಾಹಕರ ಕೊರತೆ ಎದುರಾಗಿರುವುದರಿಂದ, ಚಾಲಕರ ಬದಲಿಗೆ ‘ನಿರ್ವಾಹಕ’ (Conductor) ಹುದ್ದೆಗಳಿಗೆ ಆದ್ಯತೆ ನೀಡಿ ನೇಮಕಾತಿ ನಿಯಮಗಳಲ್ಲಿ ಮಾರ್ಪಾಡು ಮಾಡಿಕೊಳ್ಳಲು ಸೂಚಿಸಲಾಗಿದೆ ಎನ್ನಲಾಗಿದೆ.
ಅದಿರು ರಫ್ತು ನಿಷೇಧ ತೆರವು: ರಾಜ್ಯದ ಆರ್ಥಿಕತೆಯ ದೃಷ್ಟಿಯಿಂದ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ದಶಕದಲ್ಲಿ ಅಕ್ರಮ ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದ 10 ಕಿರು ಬಂದರುಗಳಿಂದ ಕಬ್ಬಿಣದ ಅದಿರು ರಫ್ತು ಮಾಡುವುದನ್ನು ನಿಷೇಧಿಸಲಾಗಿತ್ತು.
ಇದೀಗ 2010ರ ಆ ಆದೇಶವನ್ನು ಹಿಂಪಡೆಯಲಾಗಿದ್ದು, “ಕರ್ನಾಟಕ ಕಿರು ಬಂದರುಗಳಲ್ಲಿ ಕಬ್ಬಿಣದ ಅದಿರು ನಿರ್ವಹಣಾ ನೀತಿ-2025” ಜಾರಿಗೆ ತರಲು ಸಂಪುಟ ನಿರ್ಧರಿಸಿದೆ. ಇದರಿಂದ ಕರಾವಳಿ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ.
ಕಿತ್ತೂರು ರಾಣಿ ಚನ್ನಮ್ಮ ವಿವಿ: ಉತ್ತರ ಕರ್ನಾಟಕದ ಅಸ್ಮಿತೆಯಾಗಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೆಸರಿನಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಇನ್ಮುಂದೆ ಇದನ್ನು ಅಧಿಕೃತವಾಗಿ “ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ” ಎಂದು ಮರುನಾಮಕರಣ ಮಾಡಲು ತೀರ್ಮಾನಿಸಲಾಗಿದೆ.
ಅಭಿವೃದ್ಧಿ ಮತ್ತು ಆಡಳಿತ ಸುಧಾರಣೆ.
ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಹೊರವಲಯದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವತಿಯಿಂದ 17.50 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಸ್ಯಾಟ್‌ಲೈಟ್ ಬಸ್ ನಿಲ್ದಾಣ ನಿರ್ಮಾಣವಾಗಲಿದೆ.
ಕಬಿನಿ: ಮೈಸೂರು ಭಾಗದ ರೈತರಿಗೆ ನೆರವಾಗಲು ಕಬಿನಿ ಎಡದಂಡೆ ನಾಲೆಯ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ.
ನಗರಗಳ ಮೇಲ್ದರ್ಜೆ: ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯದ ಹಲವು ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ ಭಡ್ತಿ ನೀಡಲಾಗಿದೆ. ಬೀದರ್‌ನ ಕಮಠಾಣಾ, ಹುಲಸೂರು, ಬೆಳಗಾವಿಯ ಅಂಕಲಿ, ಸುರೇಬಾನ, ಮೈಸೂರಿನ ಸಾಲಿಗ್ರಾಮ, ಬೆಂಗಳೂರು ಗ್ರಾಮಾಂತರದ ತ್ಯಾಮಗೊಂಡ್ಲು ಸೇರಿದಂತೆ ಹಲವು ಗ್ರಾಮಗಳು ಪಟ್ಟಣ ಪಂಚಾಯತಿಗಳಾಗಿವೆ.
ಅಲ್ಲದೆ, ಬೆಂಗಳೂರು ದಕ್ಷಿಣದ ಹಾರೋಹಳ್ಳಿ ಇನ್ಮುಂದೆ ಪುರಸಭೆಯಾದರೆ, ಬೆಳಗಾವಿಯ ರಾಮದುರ್ಗ ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಸಭೆಯ ಬಳಿಕ ಈ ಎಲ್ಲಾ ನಿರ್ಧಾರಗಳ ಕುರಿತು ಮಾಹಿತಿ ನೀಡಿದರು.

























