ಬೆಂಗಳೂರಿಗರೆ ವೀಕೆಂಡ್ ಪ್ಲ್ಯಾನ್ ರೆಡಿ ಮಾಡಿ: ಕಬ್ಬನ್‌ ಪಾರ್ಕ್‌ನಲ್ಲಿ ಅರಳಿದ ಹೂವಿನ ಲೋಕ!

0
4

ಬೆಂಗಳೂರು: ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಫ್ಲವರ್ ಶೋ ಅಥವಾ ಫಲಪುಷ್ಪ ಪ್ರದರ್ಶನ ಎಂದಾಕ್ಷಣ ನೆನಪಾಗುವುದು ಲಾಲ್‌ಬಾಗ್. ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಲ್ಲಿ ಜನಸಾಗರವೇ ಸೇರುತ್ತದೆ.

ಆದರೆ, ಸಿಲಿಕಾನ್ ಸಿಟಿಯ ಜನತೆಗೆ ಈಗೊಂದು ಸಿಹಿ ಸುದ್ದಿ ಸಿಕ್ಕಿದೆ. ಬರೋಬ್ಬರಿ ಹತ್ತು ವರ್ಷಗಳ ದೀರ್ಘ ವಿರಾಮದ ನಂತರ, ನಗರದ ಮತ್ತೊಂದು ಪ್ರಮುಖ ಉಸಿರುತಾಣವಾದ ‘ಕಬ್ಬನ್ ಪಾರ್ಕ್’ನಲ್ಲಿ ವರ್ಣರಂಜಿತ ಪುಷ್ಪ ಪ್ರದರ್ಶನ ಆರಂಭವಾಗಿದೆ.

ಹೂವಿನ ಲೋಕದ ಸೊಬಗು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಗುರುವಾರ (ನ.27) ಈ ಅದ್ದೂರಿ ಮೇಳಕ್ಕೆ ಚಾಲನೆ ನೀಡಿದರು. ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ ‘ಹೂಗಳ ಹಬ್ಬ-2025’ನ್ನು ಆಯೋಜಿಸಲಾಗಿದ್ದು, ಉದ್ಯಾನವನವು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಬರೋಬ್ಬರಿ 20 ರಿಂದ 25 ಸಾವಿರ ಹೂವಿನ ಕುಂಡಗಳನ್ನು ಜೋಡಿಸಲಾಗಿದ್ದು, ನಾನಾ ಬಣ್ಣದ ಹೂವುಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಮುಖ್ಯವಾಗಿ ಕಬ್ಬನ್ ಪಾರ್ಕ್‌ನ ಬ್ಯಾಂಡ್ ಸ್ಟ್ಯಾಂಡ್, ಬಾಲಭವನ ಮತ್ತು ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಸುತ್ತಮುತ್ತಲಿನ ಪ್ರದೇಶ ಹೂವಿನಿಂದ ಕಂಗೊಳಿಸುತ್ತಿದೆ.

ಸೇನೆಯ ಶಕ್ತಿ ಪ್ರದರ್ಶನವೂ ಉಂಟು!: ಈ ಬಾರಿಯ ಮೇಳದ ಪ್ರಮುಖ ಆಕರ್ಷಣೆ ಕೇವಲ ಹೂವುಗಳಲ್ಲ. ಹೂವಿನ ಮೃದುತ್ವದ ಜೊತೆಗೆ ನಮ್ಮ ದೇಶದ ರಕ್ಷಣಾ ಪಡೆಯ ಗಾಂಭೀರ್ಯವನ್ನೂ ಇಲ್ಲಿ ಕಾಣಬಹುದು.

ಹೌದು, ಪ್ಯಾರಾಚೂಟ್ ರೆಜಿಮೆಂಟ್ ಟ್ರೈನಿಂಗ್ ಸೆಂಟರ್ ವತಿಯಿಂದ ವಿಶೇಷ ಆರ್ಮಿ ರೈಫಲ್ಸ್ ಹಾಗೂ ಶಸ್ತ್ರಾಸ್ತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಹೂವಿನ ಸೌಂದರ್ಯವನ್ನು ಸವಿಯಲು ಬರುವ ಮಕ್ಕಳು ಮತ್ತು ಯುವಜನತೆಗೆ ಭಾರತೀಯ ಸೇನೆಯ ಶಸ್ತ್ರಾಸ್ತ್ರಗಳನ್ನು ಹತ್ತಿರದಿಂದ ನೋಡುವ ಅಪರೂಪದ ಅವಕಾಶ ಇದಾಗಿದೆ.

ಟಿಕೆಟ್ ದರ ಮತ್ತು ಸಮಯ: ಈ ಪುಷ್ಪ ಪ್ರದರ್ಶನವು ನವೆಂಬರ್ 27 ರಿಂದ ಡಿಸೆಂಬರ್ 7ರವರೆಗೆ, ಒಟ್ಟು 11 ದಿನಗಳ ಕಾಲ ನಡೆಯಲಿದೆ. ಸಾರ್ವಜನಿಕರು ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮೇಳವನ್ನು ವೀಕ್ಷಿಸಬಹುದು.

ವಯಸ್ಕರಿಗೆ: 30 ರೂ.

ಮಕ್ಕಳಿಗೆ: 10 ರೂ.

ವಿಶೇಷ: ಶಾಲಾ ಸಮವಸ್ತ್ರ ಧರಿಸಿ ಬರುವ ಮಕ್ಕಳಿಗೆ ಪ್ರವೇಶ ಸಂಪೂರ್ಣ ಉಚಿತ.

ಹೂವಿನ ಸೊಬಗು ಸವಿದ ನಂತರ ಹೊಟ್ಟೆ ತುಂಬಿಸಿಕೊಳ್ಳಲು ಮತ್ತು ಮನೆಗೆ ಅಗತ್ಯ ವಸ್ತುಗಳನ್ನು ಕೊಂಡೊಯ್ಯಲು ಇಲ್ಲಿ ಭರ್ಜರಿ ವ್ಯವಸ್ಥೆಯಿದೆ. ಕೆಪೆಕ್ (KAPEC) ಸಂಸ್ಥೆಯು ‘ಪಿಎಂಎಫ್‌ಎಂಇ’ (PMFME) ಯೋಜನೆಯಡಿ 25ಕ್ಕೂ ಹೆಚ್ಚು ಕಿರು ಆಹಾರ ಸಂಸ್ಕರಣಾ ಮಳಿಗೆಗಳನ್ನು ತೆರೆದಿದೆ.

ಇಲ್ಲಿ ಸಿದ್ಧ ಸಿರಿಧಾನ್ಯ ಉತ್ಪನ್ನಗಳು, ಬಗೆಬಗೆಯ ಉಪ್ಪಿನಕಾಯಿ, ಚಟ್ನಿ ಪುಡಿ, ಪುಳಿಯೋಗರೆ ಮಿಕ್ಸ್, ಸಾಂಬಾರ್ ಪುಡಿ, ಚಿಕ್ಕಿ, ಡ್ರೈ ಫ್ರೂಟ್ಸ್ ಲಾಡು, ಗಾಣದ ಎಣ್ಣೆ, ರಾಗಿ ಮಾಲ್ಟ್, ಬಿಸ್ಕತ್ತುಗಳು, ಜೋಳದ ರೊಟ್ಟಿ, ಸಾವಯವ ಬೆಲ್ಲ ಮತ್ತು ಅಪ್ಪಟ ಗಿಣ್ಣು ಸೇರಿದಂತೆ ಹಲವು ದೇಸಿ ಉತ್ಪನ್ನಗಳು ಮಾರಾಟಕ್ಕಿವೆ.

ಉದ್ಯಮಿಗಳಿಗೆ ಸುವರ್ಣಾವಕಾಶ: ಕೇವಲ ಪ್ರದರ್ಶನವಲ್ಲದೆ, ಸ್ವಂತ ಉದ್ಯಮ ಆರಂಭಿಸಲು ಬಯಸುವವರಿಗೆ ಇಲ್ಲಿ ಮಾಹಿತಿ ನೀಡಲಾಗುತ್ತಿದೆ. ಪಿಎಂಎಫ್‌ಎಂಇ ಯೋಜನೆಯಡಿ ಆಹಾರ ಸಂಸ್ಕರಣಾ ಉದ್ಯಮ ಸ್ಥಾಪಿಸಲು ಬಯಸುವವರಿಗೆ 15 ಲಕ್ಷ ರೂ.ಗಳವರೆಗೆ (ಕೇಂದ್ರದಿಂದ 6 ಲಕ್ಷ ರೂ. ಮತ್ತು ರಾಜ್ಯದಿಂದ 9 ಲಕ್ಷ ರೂ.) ಸಹಾಯಧನ ಲಭ್ಯವಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯನ್ನು ಮೇಳದಲ್ಲಿ ನೀಡಲಾಗುತ್ತಿದೆ.

Previous articleಐಸಿಸಿ ರ‍್ಯಾಂಕಿಂಗ್ : ರೋಹಿತ್ ‘ರಾಜ’ಭಾರ! ಟಾಪ್-5ರಲ್ಲಿ ಭಾರತದ ದರ್ಬಾರ್
Next articleಧನಲಕ್ಷ್ಮೀ, ಲಕ್ಷ್ಯ ರಾಜೇಶ್‌ಗೆ ₹ 5 ಲಕ್ಷ ಬಹುಮಾನ ಘೋಷಣೆ

LEAVE A REPLY

Please enter your comment!
Please enter your name here