ದಾವಣಗೆರೆ: ಈಚೆಗೆ ಶ್ರೀರಾಮ, ಲಕ್ಷ್ಮಣ ಮತ್ತು ರಾವಣ ಈ ಮೂವರು ಕ್ರೂರಿಗಳು ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವೆ, ಬಂಡಾಯ ಸಾಹಿತಿ ಬಿ.ಟಿ. ಲಲಿತಾ ನಾಯಕ್ ವಿರುದ್ಧ ಬಡಾವಣೆ ಪೊಲೀಸರು ಸ್ವಯಂ ದೂರು ದಾಖಲಿಸಿದ್ದಾರೆ.
ಲಲಿತಾ ನಾಯಕ್ ಅವರು ಈಚೆಗೆ ಬೇರು-ಚಿಗುರು ಕನ್ನಡ ಸಾಹಿತ್ಯ ಸಂಶೋಧನೆ ವಿಚಾರ ವೇದಿಕೆಯಿಂದ ಇಲ್ಲಿನ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ‘ಕನ್ನಡ ಸಾಹಿತ್ಯ ಮಹಿಳಾ ಸಂವೇದನೆಗಳು’ ವಿಷಯ ಕುರಿತು ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದ ಸಮಾರೋಪದಲ್ಲಿ ಪಾಲ್ಗೊಂಡ ವೇಳೆ ಈ ಹೇಳಿಕೆ ನೀಡಿದ್ದರು.
ರಾಮ, ಲಕ್ಷ್ಮಣ, ರಾವಣ ಈ ಮೂವರು ಬಹಳ ಕ್ರೂರಿಗಳು. ಎಲ್ಲರೂ ಪೂಜಿಸುವ ಶ್ರೀರಾಮ ತನ್ನ ಪತ್ನಿ ಮೇಲೆ ಅನುಮಾನ ಪಟ್ಟು, ತನ್ನ ಸಹೋದರ ಲಕ್ಷ್ಮಣನೊಂದಿಗೆ ಕಾಡಿನಲ್ಲಿ ಬಿಟ್ಟುಬರಲು ಹೇಳಿದ. ರಾಮನಿಗೆ ಆಕೆ ಕ್ರೂರ ಪ್ರಾಣಿಗಳಿಗೆ ಆಹಾರವಾಗಲಿ ಎನ್ನುವುದೇ ಬೇಕಿತ್ತು. ಆದರೆ, ಸೀತೆ ಆತನನ್ನು ಬಹಳಷ್ಟು ಪ್ರೀತಿಸುತ್ತಿದ್ದಳು. ಲಕ್ಷ್ಮಣ ಅದು ತಪ್ಪು ಅನ್ನಬಹುದಿತ್ತು.
ಆದರೆ, ತಿಳಿಸಿ ಹೇಳುವ ಕೆಲಸ ಮಾಡಲಿಲ್ಲ. ಇನ್ನೂ ಲಕ್ಷ್ಮಣನಿಗೆ ಮೂಗು ಕುಯ್ಯುವ ಚಪಲವಿತ್ತು. ಆದ್ದರಿಂದಲೇ ಶೂರ್ಪನಖಿಯ ಮೂಗು ಕತ್ತರಿಸಿದ. ರಾವಣ ಮಹಾಪರಾಕ್ರಮಿ ಎನ್ನಿಸಿಕೊಂಡು ಕಳ್ಳತನದಿಂದ ಪರರ ಪತ್ನಿಯನ್ನ ಹೊತ್ತೊಯ್ದ ಆದ್ದರಿಂದ ಈ ಮೂವರು ಕ್ರೂರಿಗಳು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು ಮತ್ತೊಂದು ಧರ್ಮದ ಭಾವನೆಗೆ ಧಕ್ಕೆ ನೀಡಿರುವ ಹೇಳಿಕೆ ಇದಾಗಿರುವ ಹಿನ್ನೆಲೆಯಲ್ಲಿ ಬಡಾವಣೆ ಠಾಣೆ ಪೊಲೀಸರು ಲಲಿತಾ ನಾಯಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.


























