ಬೆಂಗಳೂರು: ಐಟಿ ಸಿಟಿ ಬೆಂಗಳೂರಿನ ಹೃದಯಭಾಗ ಕೋರಮಂಗಲದಲ್ಲಿ ಸಿನಿಮೀಯ ಮಾದರಿಯ ಕಿಡ್ನ್ಯಾಪ್ ಪ್ರಕರಣವೊಂದು ನಡೆದಿದೆ. “ನಾವು ಪೊಲೀಸರು, ವಿಚಾರಣೆ ನಡೆಸಬೇಕಿದೆ” ಎಂದು ಬಂದು, ಕಾಲ್ ಸೆಂಟರ್ ಉದ್ಯೋಗಿಗಳನ್ನು ನಡುರಾತ್ರಿ ಅಪಹರಿಸಿದ್ದ ಖದೀಮರ ಗ್ಯಾಂಗ್ ಅನ್ನೂ ಅಸಲಿ ಪೊಲೀಸರು ಕೇವಲ 12 ಗಂಟೆಯೊಳಗೆ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಅಸಲಿಗೆ ಅಲ್ಲಿ ನಡೆದಿದ್ದೇನು?: ಕೋರಮಂಗಲದ ಪ್ರತಿಷ್ಠಿತ ಬಿಪಿಒ (ಕಾಲ್ ಸೆಂಟರ್) ಒಂದರಲ್ಲಿ ಎಂದಿನಂತೆ ರಾತ್ರಿ ಪಾಳಿಯಲ್ಲಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಮಧ್ಯರಾತ್ರಿ ಸುಮಾರು ಸುಮಾರಿಗೆ 8 ಜನರ ಗುಂಪೊಂದು ಏಕಾಏಕಿ ಕಚೇರಿಯ ಬಳಿ ಪ್ರತ್ಯಕ್ಷವಾಗಿದೆ.
ತಾವು ಪೊಲೀಸರೆಂದು ಹೇಳಿಕೊಂಡು ದರ್ಪ ತೋರಿಸಿದ ಈ ತಂಡ, “ನಿಮ್ಮ ಮೇಲೆ ದೂರುಗಳಿವೆ, ತನಿಖೆ ನಡೆಸಬೇಕಿದೆ, ಠಾಣೆಗೆ ಬನ್ನಿ,” ಎಂದು ಬೆದರಿಸಿದ್ದಾರೆ. ಖಾಕಿ ಹೆಸರಿಗೆ ಹೆದರಿದ ಉದ್ಯೋಗಿಗಳಾದ ಪವನ್, ರಾಜ್ ವೀರ್, ಆಕಾಶ್ ಮತ್ತು ಅನಸ್ ಮರುಮಾತನಾಡದೆ ಆರೋಪಿಗಳ ಕಾರು ಹತ್ತಿದ್ದಾರೆ.
ಹೊಸಕೋಟೆಯ ಲಾಡ್ಜ್‌ನಲ್ಲಿ ಹೈಡ್ರಾಮಾ: ಕಾರು ಹತ್ತಿದ ನಂತರವಷ್ಟೇ ತಾವು ಅಪಹರಣಕ್ಕೆ ಒಳಗಾಗಿರುವುದು ಉದ್ಯೋಗಿಗಳಿಗೆ ಅರಿವಾಗಿದೆ. ಆರೋಪಿಗಳು ಇವರನ್ನು ನೇರವಾಗಿ ಕರೆದೊಯ್ದಿದ್ದು ಬೆಂಗಳೂರು ಹೊರವಲಯದ ಹೊಸಕೋಟೆಯ ಲಾಡ್ಜ್ ಒಂದಕ್ಕೆ.
ಅಲ್ಲಿ ನಾಲ್ವರನ್ನು ಕೂಡಿಹಾಕಿ, ಬರೋಬ್ಬರಿ 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಪ್ರಾಣಭಯದಿಂದ ಆಪರೇಷನ್ ಮ್ಯಾನೇಜರ್, ಆನ್ಲೈನ್ ಬ್ಯಾಂಕಿಂಗ್ ಮೂಲಕ ಬರೋಬ್ಬರಿ 18.90 ಲಕ್ಷ ರೂಪಾಯಿಯನ್ನು ಆರೋಪಿಗಳು ಸೂಚಿಸಿದ ಖಾತೆಗಳಿಗೆ (ಸಂಬಂಧಿಕರ ಅಕೌಂಟ್) ವರ್ಗಾವಣೆ ಮಾಡಿದ್ದಾರೆ.
ಆದರೆ, ದುರಾಸೆ ಇಷ್ಟಕ್ಕೆ ನಿಲ್ಲದ ಖದೀಮರು, ಇನ್ನೂ ಹೆಚ್ಚಿನ ಹಣವನ್ನು ‘ಹಾರ್ಡ್ ಕ್ಯಾಶ್’ (ನಗದು) ರೂಪದಲ್ಲಿ ನೀಡುವಂತೆ ಪೀಡಿಸತೊಡಗಿದ್ದರು.
ಅಸಲಿ ಪೊಲೀಸರ ಮಿಂಚಿನ ಕಾರ್ಯಾಚರಣೆ: ಮುಂಜಾನೆ 4 ಗಂಟೆಯ ಸುಮಾರಿಗೆ ಈ ವಿಷಯ ಅಸಲಿ ಪೊಲೀಸರ ಕಿವಿಗೆ ಬಿದ್ದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಆಗ್ನೇಯ ವಿಭಾಗದ ಪೊಲೀಸರು, ಡಿಸಿಪಿ ಮತ್ತು ಎಸಿಪಿ ನೇತೃತ್ವದಲ್ಲಿ 4 ವಿಶೇಷ ತಂಡಗಳನ್ನು ರಚಿಸಿದರು.
ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಆರೋಪಿಗಳ ಜಾಡು ಹಿಡಿದ ಪೊಲೀಸರಿಗೆ, ಲೊಕೇಶನ್ ತೋರಿಸಿದ್ದು ಹೊಸಕೋಟೆ. ಬೆಳಗ್ಗೆ 11 ಗಂಟೆಯ ಹೊತ್ತಿಗೆ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು, ಸಿನಿಮೀಯ ರೀತಿಯಲ್ಲಿ ಎಂಟು ಜನ ಆರೋಪಿಗಳನ್ನು ಬಂಧಿಸಿ, ನಾಲ್ವರು ಉದ್ಯೋಗಿಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ದರೋಡೆಗೆ ಸ್ಫೂರ್ತಿ ಏನು?: ಇತ್ತೀಚೆಗೆ ಬೆಂಗಳೂರಿನಲ್ಲಿ ಕೆಲವು ನಕಲಿ ಕಾಲ್ ಸೆಂಟರ್‌ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಇದನ್ನೇ ಬಂಡವಾಳವಾಗಿಸಿಕೊಂಡ ಕೋಲಾರ ಮೂಲದ ಈ ಆರೋಪಿಗಳು, ಕಾಲ್ ಸೆಂಟರ್ ಉದ್ಯೋಗಿಗಳನ್ನು ಹೆದರಿಸಿದರೆ ಸುಲಭವಾಗಿ ಹಣ ಮಾಡಬಹುದು ಎಂದು ಸಂಚು ರೂಪಿಸಿದ್ದರು.
ಆದರೆ, ಬೆಂಗಳೂರು ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದಾಗಿ ಈಗ ಕಂಬಿ ಎಣಿಸುವಂತಾಗಿದೆ. ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ಮುಂದುವರಿದಿದೆ.
























