ಗ್ಯಾರಂಟಿ: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಯಶಸ್ಸಿನ ಬೆನ್ನಲ್ಲೇ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೊಂದು ಸಿಹಿ ಸುದ್ದಿಯನ್ನು ಘೋಷಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನವನ್ನು ಶೀಘ್ರದಲ್ಲೇ ಮತ್ತೊಂದು ಸಾವಿರ ರೂಪಾಯಿ ಹೆಚ್ಚಿಸಲಾಗುವುದು, ಇದೇ ನಮ್ಮ ಸರ್ಕಾರದ “ಮತ್ತೊಂದು ಗ್ಯಾರಂಟಿ” ಎಂದು ಭರವಸೆ ನೀಡಿದ್ದಾರೆ.
ರಾಮನಗರದಲ್ಲಿ ನಡೆದ ಸಭೆಯಲ್ಲಿ ಘೋಷಣೆ: ರಾಮನಗರದಲ್ಲಿ ನಡೆದ ಬೆಂಗಳೂರು ದಕ್ಷಿಣ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, “ಕಳೆದ ಬಾರಿ ನಾವು ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 1000 ರೂಪಾಯಿ ಹೆಚ್ಚಿಸಿದ್ದೇವೆ.
ಇದೀಗ, ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಮತ್ತೊಂದು ಸಾವಿರ ರೂಪಾಯಿ ಹೆಚ್ಚಿಸುವಂತೆ ಮನವಿ ಮಾಡುತ್ತೇನೆ. ಇದನ್ನು ಈಡೇರಿಸಿಯೇ ಸಿದ್ಧ,” ಎಂದು ಘೋಷಿಸಿದರು.
ಅಂಗನವಾಡಿ ಸುವರ್ಣ ಮಹೋತ್ಸವ: 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಮೈಸೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಂಗನವಾಡಿ ಕೇಂದ್ರವನ್ನು ಆರಂಭಿಸಿದ್ದರು. ಇದೀಗ, ಅಂಗನವಾಡಿಗಳು ಆರಂಭವಾಗಿ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ನವೆಂಬರ್ 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ “ಐಸಿಡಿಎಸ್ ಸುವರ್ಣ ಮಹೋತ್ಸವ” ಎಂಬ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಮೂರು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಮಹಿಳಾ ಸಬಲೀಕರಣಕ್ಕಾಗಿ ಹೊಸ ಯೋಜನೆ.
ಎಲ್‌ಕೆಜಿ, ಯುಕೆಜಿ: ಅಂಗನವಾಡಿಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಶಿಕ್ಷಣ ಆರಂಭ.
ಗೃಹಲಕ್ಷ್ಮಿ ಬ್ಯಾಂಕ್: ಗೃಹಲಕ್ಷ್ಮಿ ಯೋಜನೆಯ ಮುಂದುವರಿದ ಭಾಗವಾಗಿ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ‘ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ’ಕ್ಕೆ ಚಾಲನೆ.
ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಿ, ಯಶಸ್ವಿಗೊಳಿಸಬೇಕೆಂದು ಅವರು ಕರೆ ನೀಡಿದರು.
“ನಮ್ಮ ಯೋಜನೆಗಳನ್ನು ಬಿಜೆಪಿ ನಕಲು ಮಾಡುತ್ತಿದೆ”: “ಕಾಂಗ್ರೆಸ್ ಅಂದರೆ ಗ್ಯಾರಂಟಿ ಸರ್ಕಾರ. ನಮ್ಮ ಪಂಚ ಗ್ಯಾರಂಟಿ ಯೋಜನೆಗಳನ್ನು ನೋಡಿಕೊಂಡು, ಬಿಜೆಪಿ ಬೇರೆ ರಾಜ್ಯಗಳಲ್ಲಿ ನಕಲು ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ ನಮ್ಮ ಗೃಹಲಕ್ಷ್ಮಿ ಮಾದರಿಯ ‘ಲಾಡ್ಲಿ ಬೆಹನ್’ ಯೋಜನೆ ತಂದು, ಚುನಾವಣೆ ಗೆದ್ದ ನಂತರ, ಫಲಾನುಭವಿಗಳ ಸಂಖ್ಯೆಯನ್ನು ಮತ್ತು ಹಣದ ಮೊತ್ತವನ್ನು ಕಡಿಮೆ ಮಾಡಿದ್ದಾರೆ. ಆದರೆ, ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ, 2028ಕ್ಕೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೃಹಲಕ್ಷ್ಮಿ ಯೋಜನೆಯ ಯಶಸ್ಸಿಗೆ ಅಂಗನವಾಡಿ ಕಾರ್ಯಕರ್ತೆಯರೇ ಕಾರಣ ಎಂದು ಶ್ಲಾಘಿಸಿದ ಅವರು, ಅದೇ ರೀತಿ ‘ಗೃಹಲಕ್ಷ್ಮಿ ಬ್ಯಾಂಕ್’ ಅನ್ನು ಕೂಡ ಮನೆ ಮನೆಗೆ ತಲುಪಿಸುವಂತೆ ಮನವಿ ಮಾಡಿದರು.

























