ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಖ್ಯಾತಿಗೆ ಮತ್ತೊಂದು ಗರಿ ಸೇರಿಸಲು ಮತ್ತು ನಗರದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರವು ಒಂದು ಬೃಹತ್ ಯೋಜನೆಯನ್ನು ರೂಪಿಸುತ್ತಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರು ದಕ್ಷಿಣದ ಬಿಡದಿಯಲ್ಲಿ, ಒಂದು ಸಂಪೂರ್ಣ ಹೊಸ ‘ಐಟಿ ನಗರ’ವನ್ನು ನಿರ್ಮಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ.
ಹೂಡಿಕೆದಾರರ ನೆಚ್ಚಿನ ತಾಣ ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಬೆಂಗಳೂರು ಟೆಕ್ ಸಮ್ಮಿಟ್’ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಜಗತ್ತಿನ 60ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಮತ್ತು 1,500ಕ್ಕೂ ಅಧಿಕ ದೊಡ್ಡ ಕಂಪನಿಗಳು ಈ ಸಮ್ಮಿಟ್‌ನಲ್ಲಿ ಭಾಗವಹಿಸುತ್ತಿವೆ.
ಪ್ರತಿದಿನವೂ ಜಾಗತಿಕ ಹೂಡಿಕೆದಾರರು ನನ್ನನ್ನು ಭೇಟಿಯಾಗುತ್ತಿದ್ದು, ಬೆಂಗಳೂರಿನಲ್ಲಿ ಬಿಲಿಯನ್ ಡಾಲರ್‌ಗಟ್ಟಲೆ ಬಂಡವಾಳ ಹೂಡಲು ಉತ್ಸುಕರಾಗಿದ್ದಾರೆ. ಈ ಆಸಕ್ತಿಯನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕಿದೆ,” ಎಂದು ಹೇಳಿದರು.
ಈ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ಬೆಂಗಳೂರು ನಗರದ ಮೇಲಿನ ಜನಸಂದಣಿಯ ಒತ್ತಡವನ್ನು ಕಡಿಮೆ ಮಾಡಲು, ಬಿಡದಿಯಲ್ಲಿ ಹೊಸ ಐಟಿ ನಗರವನ್ನು ಸ್ಥಾಪಿಸುವ ಆಲೋಚನೆ ಇದೆ ಎಂದು ಅವರು ತಿಳಿಸಿದರು.
ಯುವ ಪ್ರತಿಭೆಗಳಿಗೆ ಸರ್ಕಾರದ ಪ್ರೋತ್ಸಾಹ: “ನಮ್ಮ ಯುವ ಪೀಳಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕು ಎಂಬುದು ನಮ್ಮ ಆಶಯ. ಹೊಸ ಆಲೋಚನೆಗಳೊಂದಿಗೆ ಬರುವ ಯುವಕರಿಗೆ, ಸ್ಟಾರ್ಟ್‌ಅಪ್‌ಗಳ ಮೂಲಕ ಬೆಳೆಯಲು ನಮ್ಮ ಸರ್ಕಾರ ಎಲ್ಲಾ ರೀತಿಯ ಪ್ರೋತ್ಸಾಹ ಮತ್ತು ಅವಕಾಶಗಳನ್ನು ಕಲ್ಪಿಸಲಿದೆ. ನಮ್ಮನ್ನು ನಂಬಿ ಬರುವವರಿಗೆ ಉದ್ಯಮಸ್ನೇಹಿ ವಾತಾವರಣವನ್ನು ನಿರ್ಮಿಸುವುದು ನಮ್ಮ ಮೊದಲ ಆದ್ಯತೆ,” ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಬೆಂಗಳೂರೇ ಯಾಕೆ ಬೆಸ್ಟ್?: ಬೆಂಗಳೂರು ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಲು ಕಾರಣವೇನು ಎಂಬುದನ್ನು ವಿವರಿಸಿದ ಅವರು, “ಬೆಂಗಳೂರಿನ ವಾತಾವರಣವೇ ಎಲ್ಲದಕ್ಕೂ ಅನುಕೂಲಕರವಾಗಿದೆ. ಇಲ್ಲಿ ಸುಮಾರು 25 ಲಕ್ಷ ಐಟಿ ಪರಿಣಿತರಿದ್ದಾರೆ.
ನಮ್ಮಲ್ಲಿರುವಂತಹ ಮಾನವ ಸಂಪನ್ಮೂಲ ಜಗತ್ತಿನ ಬೇರೆಲ್ಲೂ ಇಲ್ಲ. ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ನಾವೆಲ್ಲರೂ ಅವರ ಜೊತೆಗಿದ್ದೇವೆ,” ಎಂದು ಹೇಳಿದರು.
ಟೀಕೆ, ಹೊಗಳಿಕೆ ಎರಡಕ್ಕೂ ಸ್ವಾಗತ: ಇತ್ತೀಚೆಗೆ ನಗರದ ರಸ್ತೆಗಳ ದುರಸ್ತಿ ಕಾರ್ಯಕ್ಕೆ ಸಿಗುತ್ತಿರುವ ಮೆಚ್ಚುಗೆಯ ಬಗ್ಗೆ ಕೇಳಿದಾಗ, “ನಾವು ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ. ಟೀಕೆ ಮಾಡಿದರೂ ಸ್ವಾಗತ, ಹೊಗಳಿದರೂ ಸ್ವಾಗತ. ಜನಸೇವೆ ಮಾಡುವುದೇ ನಮ್ಮ ಮೊದಲ ಆದ್ಯತೆ,” ಎಂದು ಅವರು ತಿಳಿಸಿದರು.

























