ಬೆಂಗಳೂರು: ನಾವು ಕೇಳಿರುವ ರಾಮಾಯಣದಲ್ಲಿ ರಾವಣನಿಗೆ ಹತ್ತು ತಲೆಗಳು. ಆದರೆ, ಅವನ ಯಾರೂ ಕೇಳಿರದ, ಹೇಳಿರದ 11ನೇ ತಲೆಯ ಕಥೆಯೇನು? ಈ ನಿಗೂಢ ಪ್ರಶ್ನೆಗೆ ಉತ್ತರ ನೀಡಲು ‘ಪರಮ್ ಫೌಂಡೇಶನ್’ ಇದೇ ನವೆಂಬರ್ 16 ರಂದು ‘ಪರಮ್ ಕಲಾ ಸಂವಾದ’ದ ಮೂಲಕ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದೆ.
ಬನಶಂಕರಿಯ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ‘ರಾವಣ: 11ನೇ ತಲೆಯ ಹೇಳದಿರುವ ಕಥೆ’ ಎಂಬ ಏಕವ್ಯಕ್ತಿ ನೃತ್ಯರೂಪಕವು ಪ್ರದರ್ಶನಗೊಂಡು, ಪ್ರೇಕ್ಷಕರನ್ನು ಹೊಸ ಚಿಂತನೆಯ ಲೋಕಕ್ಕೆ ಕೊಂಡೊಯ್ಯಲಿದೆ.
ಏನಿದು ರಾವಣನ 11ನೇ ತಲೆಯ ರಹಸ್ಯ?: ಈ ನೃತ್ಯರೂಪಕವು ರಾವಣನ ಅಂತರಂಗದ ಹೋರಾಟವನ್ನು ಕಟ್ಟಿಕೊಡುತ್ತದೆ. ರಾಮನೊಂದಿಗಿನ ಯುದ್ಧದ ಸಂದರ್ಭದಲ್ಲಿ, ಅವನ ಹತ್ತು ತಲೆಗಳು ಪರಸ್ಪರ ಭಿನ್ನ ಅಭಿಪ್ರಾಯಗಳಿಂದ ಗೊಂದಲಕ್ಕೀಡಾಗುತ್ತವೆ.
ಒಂದು ತಲೆ ಶರಣಾಗತಿಗೆ ಒತ್ತಾಯಿಸಿದರೆ, ಮತ್ತೊಂದು ಸೋಲಿನ ನಾಚಿಕೆಯಿಂದ ಕುಗ್ಗುತ್ತದೆ. ಈ ಗೊಂದಲಗಳ ನಡುವೆ, ರಾವಣನು ತನ್ನ 11ನೇ ತಲೆಯ ಧ್ವನಿಯನ್ನು ಆಲಿಸುತ್ತಾನೆ. ಈ 11ನೇ ತಲೆಯೇ ಅವನ ‘ಅಂತರಾತ್ಮ’ ಅಥವಾ ‘ಮನಸ್ಸಾಕ್ಷಿ’.
ಈ ಅಂತರಾತ್ಮವು, ಸೀತೆಯನ್ನು ಒಂದು ಹಿಡಿ ಮಣ್ಣಿನೊಂದಿಗೆ ಅಪಹರಿಸಿದ್ದು, ರಾಮನ ವಿಜಯಕ್ಕಾಗಿ ತಾನೇ ಯಜ್ಞ ಮಾಡಿದ್ದು ಸೇರಿದಂತೆ ತನ್ನೆಲ್ಲಾ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುತ್ತದೆ. ಈ ಮೂಲಕ, ರಾವಣನ ಪಾತ್ರದ ಮತ್ತೊಂದು ಮುಖವನ್ನು, ಅವನ ಒಳಗಿನ ತೊಳಲಾಟಗಳನ್ನು ಕಲಾವಿದ ಸೂರ್ಯ ಎನ್. ರಾವ್ ಅವರು ತಮ್ಮ ಏಕವ್ಯಕ್ತಿ ನೃತ್ಯದ ಮೂಲಕ ಅನಾವರಣಗೊಳಿಸಲಿದ್ದಾರೆ.
ಪ್ರಕಾಶ್ ಬೆಳವಾಡಿ ನೇತೃತ್ವದಲ್ಲಿ ಸಂವಾದ: ಕಾರ್ಯಕ್ರಮದ ವಿಶೇಷತೆಯೆಂದರೆ, ಇದು ಕೇವಲ ಪ್ರದರ್ಶನವಲ್ಲ. ನೃತ್ಯರೂಪಕದ ವೀಡಿಯೋ ಪ್ರದರ್ಶನದ ನಂತರ, ಖ್ಯಾತ ಕಲಾವಿದ ಹಾಗೂ ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರ ನೇತೃತ್ವದಲ್ಲಿ ಒಂದು ಸಂವಾದಗೋಷ್ಠಿ ನಡೆಯಲಿದೆ.
ಇದರಲ್ಲಿ ಪ್ರೇಕ್ಷಕರು ರಾವಣನ ಪಾತ್ರದ ವಿಭಿನ್ನ ಆಯಾಮಗಳು, ಈ ಬಹುಭಾಷಾ (ಸಂಸ್ಕೃತ, ಕನ್ನಡ, ಇಂಗ್ಲಿಷ್, ತಮಿಳು ಇತ್ಯಾದಿ) ನೃತ್ಯರೂಪಕದ ನಿರ್ಮಾಣದ ಹಿಂದಿನ ಸವಾಲುಗಳ ಬಗ್ಗೆ ಕಲಾವಿದರೊಂದಿಗೆ ನೇರವಾಗಿ ಚರ್ಚಿಸಬಹುದು.

























