ದಾಂಡೇಲಿ: ಸ್ಥಳೀಯ ಯುಟ್ಯೂಬರ್, ಮಾಧ್ಯಮ ಪ್ರತಿನಿಧಿಯೊಬ್ಬ ಡಿ ಎಫ್ಎ ಟೌನ್ ಶಿಪ್ ನ 40 x 40 ಜಾಗೆಯನ್ನು ಅತಿಕ್ರಮಿಸಿ ಬೇಲಿ ಹಾಕಿ ಹೊತ್ತಿಸಿದ ಕಿಡಿ ಭುಗಿಲೆದ್ದು ಸ್ಥಳೀಯರನೇಕರು ಅತಿಕ್ರಮಿತ ಜಾಗೆಯ ಅಕ್ಕ ಪಕ್ಕದಲ್ಲೆಲ್ಲ ಅತಿಕ್ರಮಿಸತೊಡಗಿದ ಘಟನೆ ಇಂದು ಜರುಗಿದೆ.
ಮುಚ್ಚಿದ ದಾಂಡೇಲಿ ಫೆರೋ ಮ್ಯಾಂಗನೀಜ್ ಕಾರಖಾನೆಗೆ ಸೇರಿದ ಜಾಗ ಯೆಂದು ಕಾರಖಾನೆಯ ಪ್ರತಿನಿಧಿಗಳು ಹಾಗೂ ಅತಿಕ್ರಮಣ ದಾರರ ನಡುವೆ ಕ್ಷಣ ಕಾಲ ಮಾತಿನ ಚಕಮಕಿ ನಡೆಯಿತು.ಯು ಟ್ಯೂಬರ್ ಜಾಗೆ ಅತಿಕ್ರಮಿಸಬಹುದಾದರೆ ಸ್ಥಳೀಯರಾದ ನಮಗೆ ಮನೆ ಕಟ್ಟಲು ಜಾಗೆ ಬೇಕು.
ನಾವು ಜಾಗೆ ಹಿಡಿದಿಟ್ಟುಕೊಳ್ಳುತ್ತೇವೆ. ನಮಗೆ ಆಶ್ರಯ ಪಟ್ಟಾ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಈ ನಡುವೆ ಯುಟ್ಯೂಬರ್ ಮಾಧ್ಯಮ ಪ್ರತಿನಿಧಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯೋರ್ವರು ಬೆಲೆ ಬಾಳುವ ಮೊಬೈಲ್ ಗಿಫ್ಟ್ ಕಳಿಸಿದಾಗ ತಾನದನ್ನು ನಿರಾಕರಿಸಿ ನನಗೆ ಸ್ವಂತ ಮನೆ ಇಲ್ಲ.
ನನಗೊಂದು ಆಶ್ರಯದಲ್ಲಿ ಜಾಗೆ ಕೊಡಿ ಎಂದು ವಿನಂತಿಸಿದ್ದೆ.. ಈ ಹಿನ್ನಲೆಯಲ್ಲಿ ನನಗೆ ಆಶ್ರಯ ಯೋಜನೆಯಡಿ ಪತ್ರವನ್ನು ನೀಡಿದ್ದಾರೆಂದು ತಾನು ಕಾನೂನು ಬದ್ಧವಾಗಿ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಏರಿಯಾದಲ್ಲಿ ಆಶ್ರಯ ಯೋಜನೆ ಪ್ಲಾಟು ನಿರ್ಮಿಸಲು ಅಧಿಕೃತ ಘೋಷಣೆಯಾಗಿಲ್ಲ.
ಇದೆಲ್ಲವು ನಗರದ ಹೃದಯ ಭಾಗದ ಬೆಲೆ ಬಾಳುವ ನಿವೇಶನವಾಗಿದೆ. ಆಶ್ರಯ ಪತ್ರ ಪಡೆದರೆ ಸಾಲದು. ಅದು ಸಬ್ ರಜಿಷ್ಟ್ರಾರ ಕಛೇರಿಯಲ್ಲಿ ನೊಂದಣಿಯಾಗಬೇಕು. ನಂತರ ನಗರಸಭೆಯಲ್ಲಿ ದಾಖಲಿಸಿ ಸ್ವಾಧೀನ ಪತ್ರ ಪಡೆಯಬೇಕು. ಅದರ ನಂತರ ನಗರಸಭೆ ಪರವಾನಗಿ ಪಡೆದು ಬೇಲಿ, ಮನೆ ನಿರ್ಮಿಸಬೇಕಾಗುತ್ತದೆ.
ಇದು ಆಶ್ರಯ ನಿಯಮ. ಇದೆಲ್ಲವನ್ನು ಉಲ್ಲಂಘನೆ ಮಾಡಿ ಆಶ್ರಯಕ್ಕೆ ಮೀಸಲಾದ ಜಾಗೆಯನ್ನು ಬಿಟ್ಟು ನಗರದ ಮಧ್ಯಭಾಗದಲ್ಲಿ ಅತಿಕ್ರಮಣ ಮಾಡಿ ಬೇಲಿ ಕಟ್ಟಿದ್ದು ಸ್ಥಳೀಯರನ್ನು ಕೆರಳಿಸಿತು. ದಾಂಡೇಲಿ ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಶಿವಾನಂದ ಗಗ್ಗರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಜರುಗಿಸಲು ತಹಶೀಲದಾರ ಮತ್ತು ಪೌರಾಯುಕ್ತರಿಗೆ ಸೂಚಿಸಿದ್ದಾರೆ. ಪೌರಾಯುಕ್ತರು ಯುಟೂಬರ್ ಗೆ ಅತಿಕ್ರಮಿಸಿ ಕಟ್ಟಿದ ಬೇಲಿಯನ್ನು ತೆರವುಗೊಳಿಸುವಂತೆ ಸೂಚಿಸಿದರೂ ತೆರವುಗೊಳಿಸಿಲ್ಲ. ಪರಿಣಾಮ ಸ್ಥಳೀಯ ಜನರು ಅಕ್ಕ ಪಕ್ಕದ ಜಾಗೆಯನ್ನು ಅತಿಕ್ರಮಿಸತೊಡಗಿದರು.
ಈ ಅತಿಕ್ರಮಣದಾರ ಮಾಧ್ಯಮ ಪ್ರತಿನಿಧಿ ಗಾಂಧಿನಗರದಲ್ಲಿ ಈ ಹಿಂದೆ ಪತ್ನಿಯ ಹೆಸರಿನಲ್ಲಿ ಆಶ್ರಯ ನಿವೇಶನ ಪಡೆದು ನೊಂದಾಯಿಸಿಕೊಂಡಿರುವ ಮಾಹಿತಿ ಬಂದಿದೆ. ಈ ಸೈಟ್ ಪ್ರಕರಣ ಲೋಕಾಯುಕ್ತದ ತನಿಖೆಯ ವ್ಯಾಪ್ತಿಯಲ್ಲಿರುವುದರಿಂದ ಬದಲಿಗೆ ಮತ್ತೊಂದು ಆಶ್ರಯ ನಿವೇಶನ ಪಡೆಯುವ ಪ್ರಯತ್ನ ಇದಾಗಿದೆಯಂದು ಗಗ್ಗರಿ ಆರೋಪಿಸಿದ್ದಾರೆ.
ಇವರ ಆದಾಯ ಪ್ರಮಾಣ ಪತ್ರದ ವಾಸ್ತವಿಕ ಅಂಶಗಳು ಸ್ಥಳ ಪರಿಶೀಲನೆ ಮಾಡಿದರೆ ಆಶ್ರಯದ ವ್ಯಾಪ್ತಿಗೆ ಬರುವುದೇ ಇಲ್ಲ. ಈ ಬಗ್ಗೆ ಪರಿಶೀಲನೆಯಾಗಲಿ ಎಂದು ಶಿವಾನಂದ ಗಗ್ಗರಿ ಒತ್ತಾಯಿಸಿದ್ದಾರೆ.


























