ಕೋಟ್ಯಂತರ ಹಿಂದೂಗಳ ಶ್ರದ್ಧಾ ಕೇಂದ್ರವಾದ ತಿರುಮಲ ತಿರುಪತಿ ದೇವಸ್ಥಾನದ ಜಗತ್ಪ್ರಸಿದ್ಧ ಲಡ್ಡು ಪ್ರಸಾದಕ್ಕೆ, ನಕಲಿ ತುಪ್ಪ ಬಳಸಲಾಗಿದೆ ಎಂಬ ಆಘಾತಕಾರಿ ಸುದ್ದಿ ದೇಶಾದ್ಯಂತ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಇದು ಕೇವಲ ಕಲಬೆರಕೆಯಲ್ಲ, ಬದಲಾಗಿ ತಾಳೆ ಎಣ್ಣೆ ಮತ್ತು ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ‘ತುಪ್ಪ’ವನ್ನು ಬಳಸಿರುವುದು, ನಂಬಿಕೆಗೇ ಎಸಗಿದ ಘೋರ ವಂಚನೆಯಾಗಿದೆ.
ಸಿಬಿಐ ತನಿಖೆಯಲ್ಲಿ ಈ ಮಹಾಮೋಸದ ಜಾಲ ಬಯಲಾಗುತ್ತಿದ್ದಂತೆಯೇ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸಿಬಿಐ ತನಿಖೆಯಲ್ಲಿ ಬಯಲಾದ ಕರಾಳ ಸತ್ಯ: ಸಿಬಿಐ ತನಿಖೆಯ ಪ್ರಕಾರ, ರೂರ್ಕಿ ಮೂಲದ ‘ಭೋಲೆಬಾಬಾ ಡೈರಿ’ ಎಂಬ ಸಂಸ್ಥೆಯು ಈ ಕೃತ್ಯದ ಪ್ರಮುಖ ಆರೋಪಿಯಾಗಿದೆ. ಈ ಡೈರಿಯು 2019 ರಿಂದ 2024ರ ಅವಧಿಯಲ್ಲಿ, ಒಂದೇ ಒಂದು ಹನಿ ಹಾಲು ಅಥವಾ ಬೆಣ್ಣೆಯನ್ನು ಖರೀದಿಸದೆಯೇ, ಬರೋಬ್ಬರಿ 68 ಲಕ್ಷ ಕೆಜಿ ತುಪ್ಪವನ್ನು ಟಿಟಿಡಿಗೆ ಪೂರೈಸಿದೆ ಎಂಬ ಭಯಾನಕ ಸತ್ಯ ಬೆಳಕಿಗೆ ಬಂದಿದೆ.
ತಾಳೆ ಎಣ್ಣೆಗೆ ರಾಸಾಯನಿಕಗಳನ್ನು ಬೆರೆಸಿ ನಕಲಿ ತುಪ್ಪ ತಯಾರಿಸಿ, ಅದನ್ನು ವೈಷ್ಣವಿ, ಮಾಲ್ ಗಂಗಾ ಮತ್ತು ಎಆರ್ ಡೇರಿಗಳಂತಹ ಇತರ ಸಂಸ್ಥೆಗಳ ಮೂಲಕ ಟಿಟಿಡಿಗೆ ಸರಬರಾಜು ಮಾಡುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಯ್ ಕುಮಾರ್ ಸುಗಂಧ ಎಂಬಾತನನ್ನು ಬಂಧಿಸಿದಾಗ, ಈ ಇಡೀ ಜಾಲದ ಸಿಕ್ಕಿಬಿದ್ದಿದೆ.
ಪವನ್ ಕಲ್ಯಾಣ್ ಕೆಂಡಾಮಂಡಲ: ಈ ಘಟನೆಯಿಂದ ತೀವ್ರವಾಗಿ ನೊಂದಿರುವ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ತಮ್ಮ ಟ್ವಿಟರ್ ಖಾತೆಯಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. “ತಿರುಪತಿ ಲಡ್ಡು ಎನ್ನುವುದು ಕೇವಲ ಒಂದು ಸಿಹಿತಿಂಡಿಯಲ್ಲ, ಅದು ಕೋಟ್ಯಂತರ ಹಿಂದೂಗಳ ಭಾವನೆ. ಅದನ್ನು ನಾವು ಸ್ನೇಹಿತರು, ಕುಟುಂಬದವರು ಮತ್ತು ಅಪರಿಚಿತರಿಗೂ ಹಂಚಿಕೊಳ್ಳುತ್ತೇವೆ. ಸನಾತನ ಧರ್ಮದ ಆಚರಣೆಗಳನ್ನು ಹೀಗೆ ಅಪಹಾಸ್ಯ ಮಾಡುವುದು ಭಕ್ತರ ನಂಬಿಕೆ ಮತ್ತು ಭಕ್ತಿಯನ್ನು ಛಿದ್ರಗೊಳಿಸುತ್ತದೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂದುವರಿದು, “ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು, ಎಲ್ಲಾ ಧಾರ್ಮಿಕ ಮುಖಂಡರ ಒಮ್ಮತದಿಂದ ‘ಸನಾತನ ಧರ್ಮ ಪರಿರಕ್ಷಣಾ ಬೋರ್ಡ್’ ಸ್ಥಾಪಿಸುವ ಸಮಯ ಬಂದಿದೆ,” ಎಂದು ಕರೆ ನೀಡಿದ್ದಾರೆ.
ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರು ಇದನ್ನು ವೀಕ್ಷಿಸಿ, ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. “ಟಿಟಿಡಿಯೇ ಬೃಹತ್ ಗೋಶಾಲೆಯನ್ನು ನಿರ್ಮಿಸಿ, ಶುದ್ಧ ತುಪ್ಪವನ್ನು ತಯಾರಿಸಬೇಕು,” ಎಂಬಂತಹ ಸಲಹೆಗಳು ಕೂಡ ಸಾರ್ವಜನಿಕರಿಂದ ವ್ಯಕ್ತವಾಗಿವೆ.

























ಮುಂದಿನ ದಿನಗಳಲ್ಲಿ ತಿರುಪತಿ ರಾಜಕೀಯ ಪಕ್ಷದ ಆಫೀಸ್ ಆಗಲಿದೆ