ರಾಜಕೀಯದ ಆಚೆಗಿನ ‘ಉಕ್ಕಿನ ಮನುಷ್ಯ’: ತೇಜಸ್ವಿ ಸೂರ್ಯ ಸಾಹಸಕ್ಕೆ ಪತ್ನಿ ಫಿದಾ!

0
11

ರಾಜಕೀಯ ಅಂಗಳದಲ್ಲಿ ಸದಾ ತಮ್ಮ ತೇಜಸ್ಸಿನಿಂದಲೇ ಸದ್ದು ಮಾಡುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಇದೀಗ ಕ್ರೀಡಾ ಲೋಕದಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಗೋವಾದಲ್ಲಿ ನಡೆದ ವಿಶ್ವದ ಅತ್ಯಂತ ಕಠಿಣ ಸ್ಪರ್ಧೆಗಳಲ್ಲಿ ಒಂದಾದ ‘ಐರನ್‌ಮ್ಯಾನ್ 70.3’ ಅನ್ನು ಸತತ ಎರಡನೇ ಬಾರಿಗೆ ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ, ತಮ್ಮ ಪತ್ನಿ ಶಿವಶ್ರೀ ಅವರಿಂದ ‘ಮ್ಯಾನ್ ಆಫ್ ಸ್ಟೀಲ್’ (ಉಕ್ಕಿನ ಮನುಷ್ಯ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಏನಿದು ಐರನ್‌ಮ್ಯಾನ್ ಸ್ಪರ್ಧೆ?: ‘ಐರನ್‌ಮ್ಯಾನ್’ ಎನ್ನುವುದು ಕೇವಲ ಹೆಸರಲ್ಲ, ಅದೊಂದು ಅಸಾಧಾರಣ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಪರೀಕ್ಷಿಸುವ ತ್ರಿವಳಿ ಕ್ರೀಡಾ ಸವಾಲು.

ಇದರಲ್ಲಿ ಸ್ಪರ್ಧಿಗಳು ಯಾವುದೇ ವಿರಾಮವಿಲ್ಲದೆ, 1.9 ಕಿಲೋಮೀಟರ್ ದೂರವನ್ನು ಸಮುದ್ರದಲ್ಲಿ ಈಜಬೇಕು, ನಂತರ 90 ಕಿಲೋಮೀಟರ್‌ಗಳಷ್ಟು ದೂರ ಸೈಕ್ಲಿಂಗ್ ಮಾಡಬೇಕು ಮತ್ತು ಅಂತಿಮವಾಗಿ 21.1 ಕಿಲೋಮೀಟರ್‌ಗಳ (ಹಾಫ್ ಮ್ಯಾರಥಾನ್) ಓಟವನ್ನು ಪೂರ್ಣಗೊಳಿಸಬೇಕು. ಈ ಮೂರೂ ಹಂತಗಳನ್ನು ನಿಗದಿತ ಸಮಯದಲ್ಲಿ ಮುಗಿಸಿದವರನ್ನು ‘ಐರನ್‌ಮ್ಯಾನ್’ ಎಂದು ಕರೆಯಲಾಗುತ್ತದೆ.

ಹಿಂದಿನ ದಾಖಲೆ ಮುರಿದ ಸೂರ್ಯ!: ಈ ಬಾರಿಯ ಸ್ಪರ್ಧೆಯಲ್ಲಿ ತೇಜಸ್ವಿ ಸೂರ್ಯ ತಮ್ಮ ಹಿಂದಿನ ವರ್ಷದ ಪ್ರದರ್ಶನವನ್ನು ಮೀರಿಸಿದ್ದಾರೆ. ಕಳೆದ ವರ್ಷಕ್ಕಿಂತ ಬರೋಬ್ಬರಿ 40 ನಿಮಿಷಗಳಷ್ಟು ವೇಗವಾಗಿ ಗುರಿ ತಲುಪಿರುವ ಅವರು, ಒಟ್ಟು 7 ಗಂಟೆ 49 ನಿಮಿಷಗಳಲ್ಲಿ ಈ ಸಾಹಸವನ್ನು ಪೂರ್ಣಗೊಳಿಸಿದ್ದಾರೆ.

ಇದಕ್ಕಾಗಿ ಅವರು ಸುಮಾರು 44 ನಿಮಿಷಗಳನ್ನು ಈಜಲು, 3 ಗಂಟೆ 47 ನಿಮಿಷಗಳನ್ನು ಸೈಕ್ಲಿಂಗ್‌ಗೆ ಮತ್ತು 2 ಗಂಟೆ 54 ನಿಮಿಷಗಳನ್ನು ಓಟಕ್ಕೆ ವಿನಿಯೋಗಿಸಿದ್ದಾರೆ. ಅವರಿಗೆ ಈ ಸ್ಪರ್ಧೆಯಲ್ಲಿ ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಕೂಡ ಸಾಥ್ ನೀಡಿದ್ದು, ಅವರೂ ಸಹ 8 ಗಂಟೆ 13 ನಿಮಿಷಗಳಲ್ಲಿ ಗುರಿ ತಲುಪಿರುವುದು ವಿಶೇಷ.

ಪತಿಯ ಸಾಧನೆಗೆ ಪತ್ನಿಯ ಭಾವನಾತ್ಮಕ ಮೆಚ್ಚುಗೆ: ಪತಿಯ ಈ ಬೆರಗಿನ ಸಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ಪತ್ನಿ ಶಿವಶ್ರೀ, ನನ್ನ ‘ಮ್ಯಾನ್ ಆಫ್ ಸ್ಟೀಲ್’ ತೇಜಸ್ವಿ ಸೂರ್ಯ ಅವರಿಗೆ ಅಭಿನಂದನೆಗಳು.

ನೀವು ನನ್ನ ವೈಯಕ್ತಿಕ ಕೋಚ್ ಮಾತ್ರವಲ್ಲ, ನನ್ನ ಮುಖ್ಯ ಪ್ರೇರಣೆಯೂ ಹೌದು. ನಾನು ಮಾಡುತ್ತಿರುವ ಕೆಲಸಗಳಿಗೆ ನಿಮ್ಮಷ್ಟು ಸ್ಫೂರ್ತಿ ನೀಡಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ನೀವು ಸದಾ ನನ್ನ ಬೆನ್ನೆಲುಬಾಗಿ ನಿಂತಿರುತ್ತೀರಿ ಎಂಬ ನಂಬಿಕೆ ನನಗಿದೆ, ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಈ ಇಬ್ಬರು ಯುವ ನಾಯಕರ ಸಾಧನೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಶ್ಲಾಘಿಸಿದ್ದು, ನಮ್ಮ ಯುವ ಸಹೋದ್ಯೋಗಿಗಳಾದ ತೇಜಸ್ವಿ ಸೂರ್ಯ ಮತ್ತು ಅಣ್ಣಾಮಲೈ ಐರನ್‌ಮ್ಯಾನ್ ಪೂರ್ಣಗೊಳಿಸಿರುವುದು ಸಂತಸ ತಂದಿದೆ.

ಇಂತಹ ಕಾರ್ಯಕ್ರಮಗಳು ‘#FitIndia’ ಆಂದೋಲನಕ್ಕೆ ಮತ್ತಷ್ಟು ಸ್ಫೂರ್ತಿ ನೀಡುತ್ತವೆ, ಎಂದು ಹೇಳಿದ್ದಾರೆ. ಈ ಮೂಲಕ ರಾಜಕೀಯ ನಾಯಕರು ಯುವಜನತೆಗೆ ದೈಹಿಕ ಕ್ಷಮತೆಯ ವಿಷಯದಲ್ಲಿಯೂ ಮಾದರಿಯಾಗಿದ್ದಾರೆ.

Previous articleಹೌಸ್‌ಕೀಪಿಂಗ್ ಕೆಲಸದ ಹುಡುಗ ಈಗ ಕಂಪನಿ ಓನರ್
Next articleತಾರಾತಿಗಡಿ: ಬೇಸತ್ತು ಬೀಗರ ಊರು ಸೇರಿದ ಲೊಂಡೆನುಮ

LEAVE A REPLY

Please enter your comment!
Please enter your name here