ನವ ಹಲಿ: ನಾಯಿ ಕಚ್ಚುವ ಪ್ರಕರಣಗಳು ದಿನೇ ದಿನೆ ಏರುತ್ತಿರುವ ಕಾರಣ ಬೀದಿ ನಾಯಿಗಳ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಬೀದಿ ನಾಯಿಗಳು ಹಾಗೂ ಬಿಡಾಡಿ ಪ್ರಾಣಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕೆಂದು ಸಂಬಂಧಪಟ್ಟ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಶುಕ್ರವಾರ ಆದೇಶ ನೀಡಿದೆ. ಹಾಗೇ ಶಾಲೆ, ಆಸ್ಪತ್ರೆ, ಬಸ್ಸು, ರೈಲ್ವೆ ನಿಲ್ದಾಣದಲ್ಲಿ ನಾಯಿ ಇರಬಾರದು ಸ್ಥಳೀಯ ಸಂಸ್ಥೆಗಳು ನಾಯಿ ಹಿಡಿದು ಶೆಲ್ಡರ್‌ಗೆ ಕಳಿಸಬೇಕು. ಕೂನಗೂ ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ
ಸ್ವಯಂಪ್ರೇರಿತವಾಗಿ ಪ್ರಕರಣ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಶಿಕ್ಷಣ ಕೇಂದ್ರಗಳು, ಆಸ್ಪತ್ರೆಗಳು, ಬಸ್ ಹಾಗೂ ಡಿಪೋಗಳು, ರೈಲ್ವೆ ನಿಲ್ದಾಣಗಳು, ಕ್ರೀಡಾಂಗಣಗಳು ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿನ ಬೀದಿ ನಾಯಿಗಳನ್ನು ಹಿಡಿದು ನಿಗದಿತ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕೆಂದು ನಿರ್ದೇಶಿಸಿದೆ. ಈ ವಿಷಯಕ್ಕೆ ಸ್ಥಳೀಯ ಸಂಸ್ಥೆಗಳೇ ನೇರ ಹೊಣೆಯಾಗಿವೆ.
ಪ್ರಾಣಿ ಜನನ ನಿಯಂತ್ರಣ ಕಾನೂನಿನ ಅನ್ವಯ ಬೀದಿ ನಾಯಿಗಳಿಗೆ ಲಸಿಕೆ ಹಾಗೂ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು. ಎಲ್ಲಿಂದ ನಾಯಿಗಳನ್ನು ಹಿಡಿದರೋ ಮತ್ತೆ ಅಲ್ಲಿಗೇ ಅವುಗಳನ್ನು ವಾಪಸ್ ತಂದು ಬಿಡಕೂಡದು ಎಂದೂ ಸುಪ್ರೀಂ ತಾಕೀತು ಮಾಡಿದೆ.
ಈ ಎಲ್ಲ ಪ್ರಕ್ರಿಯೆಯನ್ನು ಇಂದಿನಿಂದಲೇ ಆದಷ್ಟು ಬೇಗ ಅಥವಾ ಇನ್ನು 8 ವಾರಗಳೊಳಗೆ ಮುಗಿಸಬೇಕು ಎಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಿದೆ.
ಕೋರ್ಟ್ ಹೇಳಿದ್ದು
- ಸಾರ್ವಜನಿಕ ಸುರಕ್ಷತೆಗಾಗಿ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಕೂಡಲೇ ಸ್ಥಳಾಂತರ ಮಾಡಬೇಕು.
- ನಾಯಿ ಕಡಿತದ ಘಟನೆಗಳನ್ನು ತಡೆಗಟ್ಟಲು ಸರ್ಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಆವರಣಗಳಿಗೆ ಬೀದಿ ನಾಯಿಗಳು ಪ್ರವೇಶಿಸದಂತೆ ತಡೆಯಬೇಕು
- ಆಮೇಲೆ ಜಿಲ್ಲಾ ಮ್ಯಾಜಿಸ್ಟ್ರೇಟರ ಮೇಲ್ವಿಚಾರಣೆಯಲ್ಲಿ ಈ ಸ್ಥಳಗಳಲ್ಲಿ ಬೀದಿನಾಯಿಗಳ ಪ್ರವೇಶ ತಡೆಗಟ್ಟಲು ಬೇಲಿಗಳನ್ನು ಹಾಕಬೇಕು.
- ಈ ಪ್ರದೇಶಗಳಲ್ಲಿ ಕಾಣಸಿಗುವ ಬೀದಿ ನಾಯಿಗಳಿಗೆ ಸಂತಾನ ನಿಯಂತ್ರಣ ಲಸಿಕೆ ಹಾಕಿದ ಮೇಲೆ ಗೊತ್ತುಪಡಿಸಿದ ಆಶ್ರಯ ತಾಣಕ್ಕೆ ಸ್ಥಳಾಂತರಿಸಬೇಕು.
ಎಲ್ಲ ಹೆದ್ದಾರಿಗಳಿಂದ ಬಿಡಾಡಿ ಪ್ರಾಣಿಗಳ ಎತ್ತಂಗಡಿ ಮಾಡಿ: ಹೆದ್ದಾರಿಗಳು ಮತ್ತು ರಸ್ತೆಗಳಲ್ಲಿ ಅಡ್ಡಾಡುವ ಬಿಡಾಡಿ ದನಗಳು ಮತ್ತಿತರ ಪ್ರಾಣಿಗಳನ್ನೂ ಅಲ್ಲಿಂದ ತೆರವುಗೊಳಿಸಬೇಕೆಂದು ಸಹ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ಬಿಡಾಡಿ ದನ ಅಥವಾ ಪ್ರಾಣಿಗಳನ್ನು ಗೋಶಾಲೆಗಳಿಗೆ ಅಥವಾ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು ಎಂದು ಹೇಳಿದೆ.
ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಈ ಕೆಲಸದ ಜವಾಬ್ದಾರಿ ಹೊರಬೇಕು, ಇಲ್ಲವಾದಲ್ಲಿ ಅವರುಗಳೇ ಇದಕ್ಕೆ ಹೊಣೆಗಾರರಾಗುತ್ತಾರೆ. 8 ವಾರಗಳೊಳಗೆ ಈ ಎಲ್ಲ ಪ್ರಕ್ರಿಯೆ ಮುಗಿಸಬೇಕು ಎಂದು ಗಡುವು ವಿಧಿಸಿದೆ.
ಹೆದ್ದಾರಿಗಳಲ್ಲಿ ಬಿಡಾಡಿ ಪ್ರಾಣಿಗಳ ತೆರವಿಗೆ ರಾಜಾಸ್ಥಾನ ಹೈಕೋರ್ಟ್ ಈ ಹಿಂದೆ ನೀಡಿದ್ದ ನಿರ್ದೇಶನವನ್ನು ಎತ್ತಿಹಿಡಿದು ಉಲ್ಲೇಖಿಸಿದ ಸುಪ್ರೀಂ, ರಸ್ತೆಗಳಲ್ಲಿನ ಬಿಡಾಡಿ ದನಗಳು ಮತ್ತಿತರ ಪ್ರಾಣಿಗಳ ತಕ್ಷಣದ ತೆರವು ಕಾರ್ಯಾಚರಣೆಗೆ ಒಂದು ಜಂಟಿ ಸಹಯೋಗದ ಚಾಲನೆ ಕೈಗೆತ್ತಿಕೊಳ್ಳುವುದು ಅಗತ್ಯವಾಗಿದೆ ಎಂದು ಸುಪ್ರೀಂ ಸಲಹೆ ನೀಡಿದೆ.























