ಬೆಂಗಳೂರು:”ಸ್ಮಾರ್ಟ್ ಲಾಕ್” ಹಗರಣ: ಸ್ಪೀಕರ್ ಯು.ಟಿ. ಖಾದರ್ ರಾಜೀನಾಮೆ..

0
16

ಬೆಂಗಳೂರು: ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಕಚೇರಿಯಿಂದ ನಡೆದಿದೆ ಎನ್ನಲಾದ “ಸ್ಮಾರ್ಟ್ ಲಾಕ್” ಖರೀದಿ ವ್ಯವಹಾರವು ಇದೀಗ ಭಾರಿ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿದೆ.

ಶಾಸಕರ ಭವನದ ಕೊಠಡಿಗಳಿಗೆ ಅಳವಡಿಸಲಾಗಿರುವ ಈ ಡಿಜಿಟಲ್ ಬೀಗಗಳ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದ್ದು, ಸ್ಪೀಕರ್ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಶಾಸಕ ಹಾಗೂ ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಸಿಮೆಂಟ್ ಮಂಜುನಾಥ್ ಬಲವಾಗಿ ಆಗ್ರಹಿಸಿದ್ದಾರೆ.

ಅಸಲಿ ಆರೋಪವೇನು?: ಸ್ಪೀಕರ್ ಕಚೇರಿಯು ಶಾಸಕರ ಭವನದ 224 ಕೊಠಡಿಗಳಿಗೆ ಸ್ಮಾರ್ಟ್ ಲಾಕ್‌ಗಳನ್ನು ಅಳವಡಿಸಿದೆ. ಆದರೆ, ಈ ಬೀಗಗಳ ಖರೀದಿ ಬೆಲೆ ಮತ್ತು ಮಾರುಕಟ್ಟೆ ದರಕ್ಕೆ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಬಿಜೆಪಿಯ ಪ್ರಮುಖ ಆರೋಪ.

ಮಾರುಕಟ್ಟೆಯಲ್ಲಿ ಕೇವಲ 11,744 ರೂಪಾಯಿಗೆ ಸಿಗುವ ಉತ್ತಮ ಗುಣಮಟ್ಟದ ಸ್ಮಾರ್ಟ್ ಲಾಕ್‌ಗೆ, 49,300 ರೂಪಾಯಿಗಳ ಬೃಹತ್ ಮೊತ್ತವನ್ನು ಪಾವತಿಸಲಾಗಿದೆ ಎಂದು ಸಿಮೆಂಟ್ ಮಂಜುನಾಥ್ ದಾಖಲೆ ಸಮೇತ ಆರೋಪಿಸಿದ್ದಾರೆ.

ಅಂದರೆ, ಪ್ರತಿ ಬೀಗದ ಮೇಲೆ ಸುಮಾರು 37,500 ರೂಪಾಯಿಗಳಷ್ಟು ಹೆಚ್ಚುವರಿ ಹಣವನ್ನು ನೀಡಲಾಗಿದೆ. ಇದೇ ರೀತಿ, ಶಾಸಕರು ಕೇಳದಿದ್ದರೂ ನೀಡಲಾಗಿರುವ ಸ್ಮಾರ್ಟ್ ಲಾಕರ್‌ಗಳ ಖರೀದಿಯಲ್ಲೂ ಅವ್ಯವಹಾರ ನಡೆದಿದೆ. ಕೇವಲ 8,100 ರೂಪಾಯಿ ಮೌಲ್ಯದ ಲಾಕರ್‌ಗೆ 35 ಸಾವಿರ ರೂಪಾಯಿ ಬಿಲ್ ಮಾಡಲಾಗಿದೆ ಎಂದು ದೂರಿದ್ದಾರೆ.

ಆಪ್ತರಿಗೆ ಟೆಂಡರ್, ಕಳಪೆ ಗುಣಮಟ್ಟದ ಆರೋಪ: ಈ ವ್ಯವಹಾರದಲ್ಲಿ ಕೇವಲ ಬೆಲೆ ಅಷ್ಟೇ ಅಲ್ಲ, ಟೆಂಡರ್ ಪ್ರಕ್ರಿಯೆಯಲ್ಲೂ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಸ್ಪೀಕರ್ ಉದ್ದೇಶಪೂರ್ವಕವಾಗಿ ತಮ್ಮ ಜಿಲ್ಲೆಯ ಆಪ್ತರಿಗೆ ಈ ಟೆಂಡರ್ ಸಿಗುವಂತೆ ಮಾಡಿದ್ದಾರೆ. ಇದು ನೇರವಾದ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರಕ್ಕೆ ಸಾಕ್ಷಿ ಎಂದು ಸಿಮೆಂಟ್ ಮಂಜುನಾಥ್ ಹೇಳಿದ್ದಾರೆ.

ಇದಲ್ಲದೆ, ಅಳವಡಿಸಲಾಗಿರುವ ಬೀಗಗಳ ಗುಣಮಟ್ಟದ ಬಗ್ಗೆಯೂ ಗಂಭೀರ ಪ್ರಶ್ನೆಗಳು ಎದ್ದಿವೆ. ಬಿಲ್‌ನಲ್ಲಿ ‘ಲೀಥಿಯಂ ಬ್ಯಾಟರಿ’ ಚಾಲಿತ ಸ್ಮಾರ್ಟ್ ಲಾಕ್ ಎಂದು ನಮೂದಿಸಿ, ಕಳಪೆ ಗುಣಮಟ್ಟದ, ಸಾಮಾನ್ಯ ಬ್ಯಾಟರಿಗಳನ್ನು ಹೊಂದಿರುವ ಲಾಕ್‌ಗಳನ್ನು ಅಳವಡಿಸಲಾಗಿದೆ ಎಂದು ಮಾಧ್ಯಮಗಳ ಮುಂದೆ ಲಾಕ್ ಅನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಂಗ ತನಿಖೆಗೆ ಪಟ್ಟು: “ಇದು ಸಾರ್ವಜನಿಕರ ತೆರಿಗೆ ಹಣದ ಸಂಪೂರ್ಣ ದುರ್ಬಳಕೆ. ಸ್ಪೀಕರ್ ಕಚೇರಿಯಿಂದಲೇ ಇಂತಹ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವದು ನಾಚಿಕೆಗೇಡಿನ ಸಂಗತಿ. ಯು.ಟಿ. ಖಾದರ್ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು” ಎಂದು ಸಿಮೆಂಟ್ ಮಂಜುನಾಥ್ ಆಗ್ರಹಿಸಿದ್ದಾರೆ.

ಈ ಕುರಿತು ರಾಜ್ಯಪಾಲರಿಗೂ ದೂರು ನೀಡುವುದಾಗಿ ಬಿಜೆಪಿ ನಾಯಕರು ತಿಳಿಸಿದ್ದು, ಸ್ಪೀಕರ್ ಸ್ಪಷ್ಟನೆ ನೀಡದಿದ್ದರೆ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಈ ಆರೋಪವು ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ.

Previous articleದೆವ್ವ ಬಿಡಿಸಲು ಪತ್ನಿಗೆ ಬಿಸಿ ಸಾರಿನ ಅಭಿಷೇಕ: ಕೇರಳದಲ್ಲಿ ಪತಿಯ ಪೈಶಾಚಿಕ ಕೃತ್ಯ
Next articleಮಂಗಳೂರಿನ ಹುಡುಗಿ ಜೆಮಿಮಾ ಶತಕದ ಮಿಂಚು– ಫೈನಲ್​ ತಲುಪಿದ ಭಾರತದ ವನಿತೆಯರು

LEAVE A REPLY

Please enter your comment!
Please enter your name here