ತಕ್ಕ ಪಾಠ ಕಲಿಸಿದ GBA: ಎಲ್ಲೆಂದರಲ್ಲಿ ಕಸ ಎಸೆದವರ ಮನೆ ಮುಂದೆಯೇ ಕಸದ ರಾಶಿ!

0
27

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಬೇಸತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಬೇಜವಾಬ್ದಾರಿ ನಾಗರಿಕರಿಗೆ ಬಿಸಿ ಮುಟ್ಟಿಸಲು ಹೊಸ ಮತ್ತು ದಿಟ್ಟ ಕ್ರಮಕ್ಕೆ ಮುಂದಾಗಿದೆ.

ರಸ್ತೆ ಬದಿಯಲ್ಲಿ ಕಸ ಎಸೆಯುವವರನ್ನು ಪತ್ತೆ ಹಚ್ಚಿ, ಅದೇ ಕಸವನ್ನು ಅವರ ಮನೆಯ ಬಾಗಿಲಿಗೆ ಸುರಿಯುವ ಮೂಲಕ “ತಕ್ಕ ಶಾಸ್ತಿ” ಮಾಡುತ್ತಿದೆ. ಈ ಕಾರ್ಯಾಚರಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ.

ಹೊಸಕೆರೆಹಳ್ಳಿಯಲ್ಲಿ ನಡೆದಿದ್ದೇನು?: ಈ ವಿನೂತನ ಶಿಕ್ಷೆಗೆ ಇತ್ತೀಚಿನ ಉದಾಹರಣೆ ದೊರೆತಿರುವುದು ಹೊಸಕೆರೆಹಳ್ಳಿಯ ದತ್ತಾತ್ರೇಯ ಟೆಂಪಲ್ ರಸ್ತೆಯಲ್ಲಿ. ಅಲ್ಲಿನ ನಿವಾಸಿಯೊಬ್ಬರು ರಸ್ತೆಯಲ್ಲಿ ಕಸವನ್ನು ಎಸೆದಿದ್ದರು.

ಇದನ್ನು ಪತ್ತೆ ಹಚ್ಚಿದ ಜಿಬಿಎ ಅಧಿಕಾರಿಗಳು, ಕಸದ ಆಟೋ ಟಿಪ್ಪರ್ ಅನ್ನು ನೇರವಾಗಿ ಆ ವ್ಯಕ್ತಿಯ ಮನೆ ಮುಂದೆ ನಿಲ್ಲಿಸಿ, ಸಂಗ್ರಹಿಸಿದ್ದ ಕಸವನ್ನು ಅಲ್ಲೇ ಸುರಿದು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಅವರಿಗೆ 100 ರೂಪಾಯಿ ದಂಡವನ್ನೂ ವಿಧಿಸಿದ್ದಾರೆ. ಅಧಿಕಾರಿಗಳ ಈ ಖಡಕ್ ನಡೆ, ಬೇಜವಾಬ್ದಾರಿ ನಾಗರಿಕರಲ್ಲಿ ನಡುಕ ಹುಟ್ಟಿಸಿದೆ.

ವಿಳಾಸ ಪತ್ತೆ ಹಚ್ಚಿದ್ದೇಗೆ?: ಮನೆ ಬಾಗಿಲಿಗೆ ಕಸದ ವಾಹನಗಳು ಬಂದರೂ, ಅನೇಕರು ರಸ್ತೆ ಬದಿ ಮತ್ತು ಖಾಲಿ ಜಾಗಗಳಲ್ಲಿ ಕಸ ಸುರಿದು ‘ಬ್ಲಾಕ್ ಸ್ಪಾಟ್‌’ಗಳನ್ನು ಸೃಷ್ಟಿಸುತ್ತಿರುವುದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಬಿಎ, ಕಸ ಎಸೆಯುವವರನ್ನು ಪತ್ತೆ ಹಚ್ಚಲು ಮುಂದಾಗಿದೆ. ಕೆಲವರು ಎಸೆದಿದ್ದ ಕಸದ ಚೀಲಗಳಲ್ಲಿದ್ದ ಕೊರಿಯರ್ ಕವರ್‌ಗಳು ಮತ್ತು ಇತರೆ ಬಿಲ್‌ಗಳ ಮೇಲಿದ್ದ ವಿಳಾಸವನ್ನು ಆಧರಿಸಿ, ಅಧಿಕಾರಿಗಳು ನೇರವಾಗಿ ಅವರ ಮನೆಗಳನ್ನು ಪತ್ತೆ ಹಚ್ಚಿ ಈ ಕ್ರಮ ಕೈಗೊಂಡಿದ್ದಾರೆ.

ಆಯುಕ್ತರಿಂದಲೇ ಖಡಕ್ ಸೂಚನೆ: ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಸ್ವತಃ ಫೀಲ್ಡಿಗಿಳಿದು, ಹೆಬ್ಬಾಳದ ಸಂಜಯ್ ನಗರದಂತಹ ಪ್ರದೇಶಗಳಲ್ಲಿ ಪೌರಕಾರ್ಮಿಕರ ಹಾಜರಾತಿ ಮತ್ತು ಆಟೋ ಟಿಪ್ಪರ್‌ಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ್ದಾರೆ.

ಎಲ್ಲಾ ಬ್ಲಾಕ್ ಸ್ಪಾಟ್‌ಗಳನ್ನು ತಕ್ಷಣ ತೆರವುಗೊಳಿಸುವಂತೆ ಮತ್ತು ಹಸಿ-ಒಣ ಕಸವನ್ನು ಕಡ್ಡಾಯವಾಗಿ ಬೇರ್ಪಡಿಸಿ ವಿಲೇವಾರಿ ಮಾಡುವಂತೆ ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಧಿಕಾರಿಗಳು, “ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಮೊದಲ ಆದ್ಯತೆ. ದಯವಿಟ್ಟು ಕಸವನ್ನು ರಸ್ತೆಗೆ ಎಸೆಯಬೇಡಿ, ನಿಗದಿತ ಸಮಯದಲ್ಲಿ ಮನೆ ಬಳಿ ಬರುವ ಆಟೋ ಟಿಪ್ಪರ್‌ಗಳಿಗೆ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡಿ,” ಎಂದು ಮನವಿ ಮಾಡಿದ್ದಾರೆ. ಈ ಹೊಸ ಕ್ರಮವು ನಗರದ ಸ್ವಚ್ಛತೆಯನ್ನು ಕಾಪಾಡಲು ಅನಿವಾರ್ಯವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

Previous articleRSS ಪಥಸಂಚಲನದಲ್ಲಿ ಭಾಗಿ: ಪಿಡಿಒ ಅಮಾನತಿಗೆ KSAT ತಡೆ; ಸರ್ಕಾರಕ್ಕೆ ಭಾರೀ ಹಿನ್ನಡೆ!
Next articleಚಿತ್ತಾಪುರ RSS ಪಥಸಂಚಲನ: ಹೈಕೋರ್ಟ್ ಮಹತ್ವದ ಸೂಚನೆ

LEAVE A REPLY

Please enter your comment!
Please enter your name here