RSS ಪಥಸಂಚಲನದಲ್ಲಿ ಭಾಗಿ: ಪಿಡಿಒ ಅಮಾನತಿಗೆ KSAT ತಡೆ; ಸರ್ಕಾರಕ್ಕೆ ಭಾರೀ ಹಿನ್ನಡೆ!

0
15

RSS ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಸರ್ಕಾರಿ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ಹಿನ್ನಡೆಯಾಗಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ರೋಡಲಬಂಡಾ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (PDO) ಪ್ರವೀಣ್ ಕುಮಾರ್ ಅಮಾನತು ಆದೇಶಕ್ಕೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KSAT) ತಡೆಯಾಜ್ಞೆ ನೀಡಿದೆ.

ಈ ಕಾನೂನು ಹೋರಾಟಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬೆಂಬಲವಾಗಿ ನಿಂತಿದ್ದು, ಇದು ಸರ್ಕಾರದ ಕ್ರಮಕ್ಕೆ ಆದ ಮೊದಲ ಕಾನೂನಾತ್ಮಕ ಸೋಲು ಎಂದು ವಿಶ್ಲೇಷಿಸಲಾಗುತ್ತಿದೆ.

ಏನಿದು ಪ್ರಕರಣ?: ಆರ್‌ಎಸ್‌ಎಸ್‌ ಶತಮಾನೋತ್ಸವದ ಅಂಗವಾಗಿ ಅಕ್ಟೋಬರ್ 12 ರಂದು ಲಿಂಗಸುಗೂರು ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಪಥಸಂಚಲನದಲ್ಲಿ, ಪಿಡಿಓ ಪ್ರವೀಣ್ ಕುಮಾರ್ ಸಂಘದ ಗಣವೇಷ ಧರಿಸಿ, ಕೈಯಲ್ಲಿ ದಂಡ ಹಿಡಿದು ಭಾಗವಹಿಸಿದ್ದರು.

ಸರ್ಕಾರಿ ನೌಕರರಾಗಿ ಒಂದು ನಿರ್ದಿಷ್ಟ ಸಂಘಟನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ‘ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 2021’ರ ನಿಯಮ 3ರ ಉಲ್ಲಂಘನೆ ಎಂದು ಪರಿಗಣಿಸಲಾಗಿತ್ತು.

ಪ್ರತಿಯೊಬ್ಬ ಸರ್ಕಾರಿ ನೌಕರನು ಸಂಪೂರ್ಣ ನಿಷ್ಠೆ ಮತ್ತು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಬೇಕು ಹಾಗೂ ಸರ್ಕಾರಿ ನೌಕರನಿಗೆ ತಕ್ಕದಲ್ಲದ ಕೆಲಸ ಮಾಡಬಾರದು ಎಂಬ ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇಲೆ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರು ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.

ಕಾನೂನು ಹೋರಾಟ ಮತ್ತು ತೇಜಸ್ವಿ ಸೂರ್ಯ ಬೆಂಬಲ: ಈ ಅಮಾನತು ಆದೇಶ ಹೊರಬೀಳುತ್ತಿದ್ದಂತೆಯೇ, ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಇದು ಕಾನೂನುಬಾಹಿರ ಮತ್ತು ಏಕಪಕ್ಷೀಯ ನಿರ್ಧಾರ ಎಂದು ಖಂಡಿಸಿದ್ದರು.

ಪ್ರವೀಣ್ ಕುಮಾರ್ ಅವರಿಗೆ ಕರೆ ಮಾಡಿ ಧೈರ್ಯ ತುಂಬಿದ್ದ ಅವರು, ಈ ಅಕ್ರಮ ಅಮಾನತಿನ ವಿರುದ್ಧ ನ್ಯಾಯಾಲಯದಲ್ಲಿ ವೈಯಕ್ತಿಕವಾಗಿ ಹೋರಾಡುವುದಾಗಿ ಭರವಸೆ ನೀಡಿದ್ದರು.

“ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅವರ ಹಕ್ಕು ಎಂದು ಹಲವು ಉಚ್ಛ ನ್ಯಾಯಾಲಯಗಳು ಈ ಹಿಂದೆಯೇ ತೀರ್ಪು ನೀಡಿವೆ,” ಎಂದು ಅವರು ಪ್ರತಿಪಾದಿಸಿದ್ದರು.

ನುಡಿದಂತೆ ನಡೆದ ತೇಜಸ್ವಿ ಸೂರ್ಯ, ಪ್ರವೀಣ್ ಕುಮಾರ್ ಅವರಿಗೆ ಅಗತ್ಯ ಕಾನೂನು ನೆರವನ್ನು ಒದಗಿಸಿದ್ದರು. ಇದರ ಫಲವಾಗಿ, ಇದೀಗ ಕೆಎಸ್‌ಎಟಿ ಸರ್ಕಾರದ ಅಮಾನತು ಆದೇಶಕ್ಕೆ ತಡೆ ನೀಡಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸೂರ್ಯ, “ಯಾವುದೇ ಬೆದರಿಕೆಗಳು ರಾಷ್ಟ್ರ ನಿರ್ಮಾಣದ ಆರ್‌ಎಸ್‌ಎಸ್‌ ಆದರ್ಶಗಳನ್ನು ತಡೆಯಲು ಸಾಧ್ಯವಿಲ್ಲ. ಈ ಆದೇಶ ರಾಜ್ಯ ಸರ್ಕಾರಕ್ಕೆ ಆದ ಮುಖಭಂಗ,” ಎಂದು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ತಡೆಯಾಜ್ಞೆಯು ಪ್ರವೀಣ್ ಕುಮಾರ್ ಅವರಿಗೆ ತಾತ್ಕಾಲಿಕ ರಿಲೀಫ್ ನೀಡಿದ್ದು, ಸರ್ಕಾರದ ಮುಂದಿನ ನಡೆ ಕುತೂಹಲ ಮೂಡಿಸಿದೆ.

Previous articleಗಂಡನನ್ನೇ ಕೊಲೆ ಮಾಡಲು ಸ್ಕೆಚ್​ ಹಾಕಿದಾಕೆ ಸಹೋದರರ ಸಮೇತ ಅಂದರ್‌
Next articleತಕ್ಕ ಪಾಠ ಕಲಿಸಿದ GBA: ಎಲ್ಲೆಂದರಲ್ಲಿ ಕಸ ಎಸೆದವರ ಮನೆ ಮುಂದೆಯೇ ಕಸದ ರಾಶಿ!

LEAVE A REPLY

Please enter your comment!
Please enter your name here