ಕರ್ನಾಟಕ ರಾಜಕೀಯದಲ್ಲಿ ಅಧಿಕಾರ ಹಂಚಿಕೆಯ ಚರ್ಚೆಗಳು ತೆರೆಮರೆಯಲ್ಲಿ ನಡೆಯುತ್ತಿರುವಾಗಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ 2028ರ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ, ಹೊಸ ರಾಜಕೀಯ ಬಿರುಗಾಳಿ ಎಬ್ಬಿಸಿದ್ದಾರೆ.
“ನನ್ನ ಸ್ನೇಹಿತರು ಮತ್ತು ಬೆಂಬಲಿಗರು ನಾನು ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ,” ಎಂಬ ಹೇಳಿಕೆಯು, ಕಾಂಗ್ರೆಸ್‌ನ ಆಂತರಿಕ ಅಧಿಕಾರದ ಸಮೀಕರಣದಲ್ಲಿ ಸಂಚಲನ ಮೂಡಿಸಿದೆ. ಇದು, ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣಿಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬೆಂಬಲಿಗರ ಪಾಳಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದು ಹೇಳಿಕೆಗೆ ಡಿಕೆ ಸುರೇಶ್ ಜಾಣ ಪ್ರತಿಕ್ರಿಯೆ: ಸಿದ್ದರಾಮಯ್ಯ ಈ ಅನಿರೀಕ್ಷಿತ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಸಂಸದ ಡಿ.ಕೆ. ಸುರೇಶ್, ಅತ್ಯಂತ ಜಾಣ್ಮೆಯ ಮಾತುಗಳನ್ನಾಡಿದ್ದಾರೆ.
“ರಾಜಕೀಯದಲ್ಲಿ 95-98 ವರ್ಷದವರೂ ಸಕ್ರಿಯವಾಗಿದ್ದಾರೆ. ಸಿದ್ದರಾಮಯ್ಯನವರು ನಮ್ಮ ನಾಯಕರು, ಅವರು ಸ್ಪರ್ಧಿಸುತ್ತೇನೆ ಎನ್ನುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ನಾಯಕತ್ವದಲ್ಲಿಯೇ ನಾವು ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ,” ಎಂದು ಹೇಳುವ ಮೂಲಕ ಬಹಿರಂಗವಾಗಿ ಯಾವುದೇ ಅಸಮಾಧಾನವನ್ನು ತೋರಿಲ್ಲ.
ಇದೇ ವೇಳೆ, “ಸಿದ್ದರಾಮಯ್ಯ ಎಲ್ಲರಿಗಿಂತಲೂ ಆರೋಗ್ಯವಾಗಿದ್ದು, ರಾಜ್ಯದಾದ್ಯಂತ ಓಡಾಡುತ್ತಿದ್ದಾರೆ ಮತ್ತು ಉತ್ತಮ ಆಡಳಿತ ನೀಡುತ್ತಿದ್ದಾರೆ,” ಎಂದು ಶ್ಲಾಘಿಸಿದ್ದಾರೆ. ಆದರೆ, ಎರಡೂವರೆ ವರ್ಷಗಳ ನಂತರ ಅಧಿಕಾರ ಹಸ್ತಾಂತರದ ಸೂತ್ರದ ಬಗ್ಗೆ ಕೇಳಿದಾಗ, ಜನರು ನಮಗೆ ಐದು ವರ್ಷಗಳ ಕಾಲ ಆಡಳಿತ ನಡೆಸಲು 140 ಸ್ಥಾನಗಳನ್ನು ನೀಡಿ ಆಶೀರ್ವದಿಸಿದ್ದಾರೆ.
ನಾವು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದರತ್ತ ಗಮನ ಹರಿಸಬೇಕು. ಅಧಿಕಾರ ಹಂಚಿಕೆಯ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ, ಎಂದು ಜಾಣತನದಿಂದ ಉತ್ತರಿಸುವ ಮೂಲಕ ವಿಷಯವನ್ನು ತೇಲಿಸಿದ್ದಾರೆ.
ಆಡಳಿತದ ಮೇಲೆ ಗೊಂದಲದ ಪರಿಣಾಮವಿಲ್ಲವೇ?: ನಾಯಕತ್ವ ಬದಲಾವಣೆಯ ಚರ್ಚೆಗಳು ಸರ್ಕಾರದ ಆಡಳಿತದ ಮೇಲೆ ಪರಿಣಾಮ ಬೀರುತ್ತಿವೆಯೇ ಎಂಬ ಪ್ರಶ್ನೆಗೆ, “ನನಗೆ ಆಡಳಿತ ನಡೆಸಿದ ಅನುಭವವಿಲ್ಲ. ಸಂಸದನಾಗಿ ಕೆಲಸ ಮಾಡುವುದೇ ಬೇರೆ, ಆಡಳಿತ ನಡೆಸುವುದು ಬೇರೆ,” ಎಂದು ಸುರೇಶ್ ಉತ್ತರಿಸಿದ್ದಾರೆ. ಈ ಮೂಲಕ ಅವರು, ಸರ್ಕಾರದ ಆಡಳಿತಾತ್ಮಕ ವಿಚಾರಗಳಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ರಾಜಣ್ಣ ಹೇಳಿಕೆಗೆ ಸೌಮ್ಯ ಪ್ರತಿಕ್ರಿಯೆ: ಇದೇ ವೇಳೆ, “ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೆ ಕಾಂಗ್ರೆಸ್ ಕಚೇರಿಗಳಿಗೆ ಬೀಗ ಹಾಕಬೇಕಾಗುತ್ತದೆ,” ಎಂಬ ಸಚಿವ ಕೆ.ಎನ್. ರಾಜಣ್ಣ ವಿವಾದಾತ್ಮಕ ಹೇಳಿಕೆಯ ಬಗ್ಗೆ ಕೇಳಿದಾಗ, “ಅವರು ಹಿರಿಯ ನಾಯಕರು, ತಮ್ಮ ಸಲಹೆಗಳನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತಿದ್ದಾರೆ,” ಎಂದು ಸೌಮ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯನವರ 2028ರ ಸ್ಪರ್ಧೆಯ ಹೇಳಿಕೆಯು ಕಾಂಗ್ರೆಸ್‌ನಲ್ಲಿ ಭವಿಷ್ಯದ ನಾಯಕತ್ವದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಡಿ.ಕೆ. ಸುರೇಶ್ ರಾಜತಾಂತ್ರಿಕ ಪ್ರತಿಕ್ರಿಯೆಯು, ಸದ್ಯಕ್ಕೆ ಯಾವುದೇ ಬಹಿರಂಗ ಭಿನ್ನಾಭಿಪ್ರಾಯಕ್ಕೆ ಆಸ್ಪದ ನೀಡದಿದ್ದರೂ, ತೆರೆಮರೆಯಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಪೈಪೋಟಿಯ ತೀವ್ರತೆಯನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ.






















