ಬೆಂಗಳೂರು: ವೈದ್ಯ ಮತ್ತು ರೋಗಿಯ ನಡುವಿನ ಪವಿತ್ರ ಸಂಬಂಧಕ್ಕೆ ಕಳಂಕ ತರುವಂತಹ ಆಘಾತಕಾರಿ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಚರ್ಮದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬಂದ 21 ವರ್ಷದ ಯುವತಿಯೊಂದಿಗೆ, 56 ವರ್ಷದ ಚರ್ಮರೋಗ ತಜ್ಞನೊಬ್ಬ ಅಸಭ್ಯವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ.
ಘಟನೆ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಯುವತಿಯ ಕುಟುಂಬಸ್ಥರು ಮತ್ತು ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಸದ್ಯ ಅಶೋಕನಗರ ಪೊಲೀಸರು ಆರೋಪಿ ವೈದ್ಯನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನೊಂದ ಯುವತಿ ಶನಿವಾರ ಸಂಜೆ ನಗರದ ಖಾಸಗಿ ಕ್ಲಿನಿಕ್ ಒಂದರಲ್ಲಿ ಕಾರ್ಯನಿರ್ವಹಿಸುವ ಡಾ. ಪ್ರವೀಣ್ ಬಳಿ ಚರ್ಮದ ಸೋಂಕಿನ ತಪಾಸಣೆಗಾಗಿ ಒಬ್ಬಳೇ ತೆರಳಿದ್ದಳು. ಸಾಮಾನ್ಯವಾಗಿ ಆಕೆ ತನ್ನ ತಂದೆಯೊಂದಿಗೆ ಕ್ಲಿನಿಕ್‌ಗೆ ಭೇಟಿ ನೀಡುತ್ತಿದ್ದಳು, ಆದರೆ ಅಂದು ಲಭ್ಯವಿರಲಿಲ್ಲ. ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡ ಆರೋಪಿ ವೈದ್ಯ, ‘ತಪಾಸಣೆ’ಯ ಹೆಸರಿನಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಯುವತಿಯ ದೇಹವನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ.
ಯುವತಿ ವಿರೋಧ ವ್ಯಕ್ತಪಡಿಸಿದಾಗ, “ಇದೆಲ್ಲವೂ ಚಿಕಿತ್ಸೆಯ ಒಂದು ಭಾಗ, ಸಹಕರಿಸಿ” ಎಂದು ನಂಬಿಸಲು ಯತ್ನಿಸಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ, ಬಟ್ಟೆ ಬಿಚ್ಚುವಂತೆ ಒತ್ತಾಯಿಸಿ, ಅಪ್ಪಿ ಮುದ್ದಾಡಿ ವಿಕೃತಿ ಮೆರೆದಿದ್ದಾನೆ. ನಂತರ, ಖಾಸಗಿಯಾಗಿ ಸಮಯ ಕಳೆಯಲು ಹೋಟೆಲ್ ರೂಮ್ ಬುಕ್ ಮಾಡುವಂತೆಯೂ ಸೂಚಿಸಿ ತನ್ನ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.
ಬಂಧನಕ್ಕೆ ಕಾರಣವಾದ ಪ್ರತಿಭಟನೆ: ಈ ಆಘಾತಕಾರಿ ಘಟನೆಯಿಂದ ಹೊರಬಂದ ಯುವತಿ, ಧೈರ್ಯಗೆಡದೆ ತಕ್ಷಣವೇ ಮನೆಗೆ ತೆರಳಿ ತನ್ನ ಕುಟುಂಬ ಸದಸ್ಯರಿಗೆ ವಿಷಯ ತಿಳಿಸಿದ್ದಾಳೆ. ಇದನ್ನು ಕೇಳಿ ಕೆಂಡಾಮಂಡಲರಾದ ಕುಟುಂಬಸ್ಥರು ಮತ್ತು ಸ್ಥಳೀಯ ನಿವಾಸಿಗಳು ಕ್ಲಿನಿಕ್‌ನ ಮುಂದೆ ಜಮಾಯಿಸಿ, ವೈದ್ಯನ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅಶೋಕನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ವೈದ್ಯ ಡಾ. ಪ್ರವೀಣ್‌ನನ್ನು ವಶಕ್ಕೆ ಪಡೆದರು.
ವೈದ್ಯ ಪ್ರವೀಣ್ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ಯುವತಿ ತನ್ನನ್ನು ತಪ್ಪು ತಿಳಿದುಕೊಂಡಿದ್ದಾಳೆ ಎಂದು ಹೇಳಿಕೆ ನೀಡಿದ್ದಾನೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75 (ಲೈಂಗಿಕ ಕಿರುಕುಳ) ಮತ್ತು 79ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಈ ಘಟನೆಯು ವೈದ್ಯಕೀಯ ಕ್ಷೇತ್ರದಲ್ಲಿನ ನೈತಿಕ ಹೊಣೆಗಾರಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.