ರಾಜು ತಾಳಿಕೋಟಿ ಇನ್ನಿಲ್ಲ: ರಂಗಭೂಮಿ, ಕಲಾ ಲೋಕಕ್ಕೆ ತುಂಬಲಾರದ ನಷ್ಟ

0
40

ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ, ರಂಗಭೂಮಿ ಮತ್ತು ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟೆ ಅವರು ಅಕ್ಟೋಬರ್ 13, 2025 ರಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದವರಾದ ಇವರು, ಗ್ರಾಮೀಣ ರಂಗಭೂಮಿಯಿಂದ ತಮ್ಮ ಕಲಾ ಪಯಣ ಆರಂಭಿಸಿ, ತಮ್ಮ ವಿಶಿಷ್ಟ ಹಾಸ್ಯಪ್ರಜ್ಞೆ ಮತ್ತು ನೈಜ ಅಭಿನಯದಿಂದ ರಾಜ್ಯದಾದ್ಯಂತ ಜನಪ್ರಿಯರಾಗಿದ್ದರು.

ರಾಜು ತಾಳಿಕೋಟಿಯವರು ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಗಳಿಸಿದ್ದರು. ಅವರ ಚಲನಚಿತ್ರಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದವು. ಜೀವನದ ಸತ್ಯಗಳನ್ನು ಹಾಸ್ಯದ ಲೇಪನದೊಂದಿಗೆ ಪಾತ್ರಗಳಿಗೆ ಜೀವ ತುಂಬುವ ಅವರ ಶೈಲಿ ಅನನ್ಯವಾಗಿತ್ತು. ಸಹಕಲಾವಿದರೊಂದಿಗೆ ಅವರ ಹೊಂದಾಣಿಕೆ ತೆರೆಯ ಮೇಲೆ ವಿಶೇಷ ಆಕರ್ಷಣೆಯಾಗಿತ್ತು, ಸಾಂಸ್ಕೃತಿಕ ಚಿತ್ರಗಳಲ್ಲೂ ಅವರಿಗೆ ವಿಶಿಷ್ಟ ಗುರುತನ್ನು ತಂದುಕೊಟ್ಟಿತ್ತು. “ಕಲಿಯುಗ ಕುಡುಕ” ಎಂಬ ನಾಟಕವು ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಕೊಂಡೊಯ್ದಿತ್ತು.

ಉಡುಪಿಯಲ್ಲಿ ಶೂಟಿಂಗ್ ನಿಮಿತ್ತ ತೆರಳಿದ್ದ ಅವರಿಗೆ, ಭಾನುವಾರ ರಾತ್ರಿ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಇಡೀ ಚಿತ್ರರಂಗ ಮತ್ತು ಅಭಿಮಾನಿ ವಲಯದಲ್ಲಿ ಆಘಾತ ಮೂಡಿಸಿದೆ.

ರಾಜು ತಾಳಿಕೋಟೆ ಮೂಲ ಹೆಸರು ರಾಜೇಸಾಬ್ ಮಕ್ತುಮಸಾಬ್ ತಾಳಿಕೋಟಿ. ತಾಳಿಕೋಟೆಯವರಾದ ಇವರು, ತಮ್ಮ ವಿಶಿಷ್ಟ ಶೈಲಿಯ ಹಾಸ್ಯ ಮತ್ತು ನಟನೆ ಮೂಲಕ ‘ರಾಜು ತಾಳಿಕೋಟೆ’ ಎಂದೇ ಖ್ಯಾತಿ ಪಡೆದರು. ರಂಗಭೂಮಿಯಿಂದ ತಮ್ಮ ಕಲಾ ಪಯಣ ಆರಂಭಿಸಿದ ರಾಜು ತಾಳಿಕೋಟೆ, ಖಾಸ್ಗತೇಶ್ವರ ನಾಟಕ ಮಂಡಳಿಯ ಮಾಲೀಕರಾಗಿಯೂ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನಾಟಕಗಳ ಮೂಲಕ ಜನರನ್ನು ರಂಜಿಸಿದ್ದರು.

ಕನ್ನಡ ಚಿತ್ರರಂಗದಲ್ಲಿ ಪೋಷಕ ಮತ್ತು ಹಾಸ್ಯ ಪಾತ್ರಗಳಲ್ಲಿ ಮಿಂಚಿದ, ತಮ್ಮ ಸಹಜ ನಟನೆಯಿಂದ ಪ್ರೇಕ್ಷಕರ ಮನ ಗೆದ್ದರು. ಧಾರವಾಡ ರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ಇವರು, ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ಸ್ಪರ್ಧಿಯೂ ಆಗಿದ್ದರು. ಶೈನ್ ಶೆಟ್ಟಿ ನಟನೆಯ ಹೊಸ ಸಿನಿಮಾದ ಶೂಟಿಂಗ್‌ಗಾಗಿ ಉಡುಪಿಗೆ ಹೋಗಿದ್ದ ಸಂದರ್ಭದಲ್ಲಿಯೇ ಈ ದುರಂತ ಸಂಭವಿಸಿದ್ದು, ಚಿತ್ರತಂಡಕ್ಕೆ ತೀವ್ರ ನೋವುಂಟುಮಾಡಿದೆ.

ರಾಜು ತಾಳಿಕೋಟೆ ಅವರಿಗೆ ಈ ಹಿಂದೆಯೂ ಹೃದಯಾಘಾತವಾಗಿ ಸ್ಟಂಟ್ ಹಾಕಲಾಗಿತ್ತು. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದು, ವಿಜಯಪುರದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರ ಹಾಸ್ಯಭರಿತ ಅಭಿನಯ ಮತ್ತು ಕಲಾ ಸೇವೆ ಕನ್ನಡಿಗರ ಮನಸ್ಸಿನಲ್ಲಿ ಸದಾ ಅಜರಾಮರವಾಗಿ ಉಳಿಯಲಿದೆ.

Previous articleಕೆಂಪು ಕಲ್ಲು: ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Next articleದೀಪಾವಳಿ ಸಂಭ್ರಮ: ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ವಿಶೇಷ ರೈಲುಗಳ ಕಲರವ!

LEAVE A REPLY

Please enter your comment!
Please enter your name here