ರಾಜ್ಯ ರಾಜಕೀಯದಲ್ಲಿ ‘ನವೆಂಬರ್ ಕ್ರಾಂತಿ’ಯ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಕೆಲ ಸಚಿವರು ನಡೆಸಿರುವ ಗುಪ್ತ ಸಭೆಯು ತೀವ್ರ ಕುತೂಹಲ ಮೂಡಿಸಿದೆ. ಸಂಪುಟ ಪುನಾರಚನೆಯ ಸಿದ್ಧತೆಗಳು ನಡೆಯುತ್ತಿವೆ ಎಂಬ ಊಹಾಪೋಹಗಳ ಮಧ್ಯೆ, ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 13 ರಂದು ಸಚಿವರಿಗೆ ಆಯೋಜಿಸಿರುವ ಡಿನ್ನರ್ ಸಭೆಯ ಉದ್ದೇಶದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಬೆಂಗಳೂರಿನ ಖಾಸಗಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಬಳಿಕ ಸಚಿವ ಮಹದೇವಪ್ಪ ಕೂಡ ಇವರನ್ನು ಸೇರಿಕೊಂಡಿದ್ದು, ಇದು ಕೇವಲ “ಈಟಿಂಗ್” ಹೊರತು “ಮೀಟಿಂಗ್” ಅಲ್ಲ ಎಂದು ಹೇಳಿ ಹೊರಟಿದ್ದಾರೆ. ಈ ರಹಸ್ಯ ಸಭೆಯು ನವೆಂಬರ್‌ನಲ್ಲಿ ಸಂಪುಟದಲ್ಲಿ ಬದಲಾವಣೆಗಳಾಗಬಹುದು ಎಂಬ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಸಿಎಂ ಆಯೋಜಿಸಿರುವ ಔತಣಕೂಟದ ಬಗ್ಗೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, “ಸಿದ್ದರಾಮಯ್ಯ ಔತಣಕೂಟ ಏರ್ಪಡಿಸಿದ ವಿಚಾರ ನನಗೆ ಗೊತ್ತಿಲ್ಲ. ಆದರೆ ಇದಕ್ಕೂ ಮುನ್ನ ಎರಡ್ಮೂರು ಬಾರಿ ಕರೆದಿದ್ದಾರೆ.
ಆಗ ಸರ್ಕಾರದ ಕಾರ್ಯಕ್ರಮಗಳು, ಅಭಿವೃದ್ಧಿ, ಪಕ್ಷದ ಸಂಘಟನೆ, ಸ್ಥಳೀಯ ಚುನಾವಣೆ ಬಗ್ಗೆ ಚರ್ಚಿಸಿದ್ದಾರೆ, ಈಗಲೂ ಅದೇ ಇರಬಹುದು. ಸಂಪುಟ ಪುನಾರಚನೆ ಬೇರೆ, ಅದಕ್ಕೂ ಔತಣಕೂಟಕ್ಕೂ ಸಂಬಂಧ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಸಚಿವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಅಷ್ಟಾಗಿ ವಿಶ್ವಾಸ ಮೂಡಿಸಿಲ್ಲ.
ಸಂಪುಟ ಪುನಾರಚನೆಯ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ, ಸಚಿವ ಸ್ಥಾನದ ಆಕಾಂಕ್ಷಿಗಳು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, “ಎರಡೂವರೆ ವರ್ಷ ಆದ್ಮೇಲೆ ಅವಕಾಶ ನೀಡುತ್ತೇವೆ ಎಂದು ಖರ್ಗೆ, ರಾಹುಲ್, ಸಿದ್ದರಾಮಯ್ಯ ಹಾಗೂ ಡಿಕೆಶಿ ಮಾತು ಕೊಟ್ಟಿದ್ದರು. ನಮ್ಮ ಕೋಲಾರ ಜಿಲ್ಲೆಯಲ್ಲಿ ನಾನೇ ಸೀನಿಯರ್ ಇದ್ದೇನೆ. ನನಗೂ ಅವಕಾಶ ಮಾಡಿಕೊಡುತ್ತಾರೆ ಅನ್ನೋ ವಿಶ್ವಾಸ ಇದೆ. ಬಲಗೈ ಸಮುದಾಯಕ್ಕೆ ಅವಕಾಶ ಸಿಗಬೇಕು” ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಮಾಜಿ ಸಚಿವ ಕೆ.ಎನ್. ರಾಜಣ್ಣ ಕೂಡ ಮತ್ತೆ ಸಚಿವ ಸ್ಥಾನ ಸಿಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಬಿಹಾರ ಚುನಾವಣೆ ಮುಗಿಯುವ ತನಕ ಸುಮ್ಮನೇ ಇದ್ದುಬಿಡಿ. ಸಿಎಂ ಬಗ್ಗೆ ನನಗೆ ವಿಶ್ವಾಸ ಇದೆ” ಎಂದಿದ್ದಾರೆ.
ಅಲ್ಲದೆ ಸಿದ್ದರಾಮಯ್ಯ ತಮ್ಮ ಸಾಮರ್ಥ್ಯವನ್ನು ಗುರುತಿಸಿ ಸಹಕಾರ ಖಾತೆಯನ್ನು ನೀಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಒಟ್ಟಾರೆ, ರಾಜ್ಯ ರಾಜಕೀಯದಲ್ಲಿ ಸಂಪುಟ ವಿಸ್ತರಣೆಯ ಚರ್ಚೆಗಳು ತೀವ್ರಗೊಂಡಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ರೋಚಕ ಬೆಳವಣಿಗೆಗಳನ್ನು ನಿರೀಕ್ಷಿಸಬಹುದು.